ನವದೆಹಲಿ: ಭಾರತದ ಮನವಿಯ ಮೇರೆಗೆ ಅಮೆರಿಕದಿಂದ ಗಡೀಪಾರಾಗುವುದಕ್ಕೂ ಮೊದಲು ಉಗ್ರ ತಹಾವುರ್ ರಾಣಾ, ಅದರಿಂದ ಪಾರಾಗಲು ಮಾಡಿದ್ದ ಯತ್ನಗಳ ಮಾಹಿತಿ ಇದೀಗ ಬಯಲಾಗಿದೆ.
ಭಾರತಕ್ಕೆ ಬರುವುದರಿಂದ ತಪ್ಪಿಸಿಕೊಳ್ಳಲು ಇದ್ದ ಕಾನೂನಾತ್ಮಕ ಮಾರ್ಗಗಳೆಲ್ಲಾ ಮುಚ್ಚಿದಾಗ, ಆತನ ಪರ ವಕೀಲ ಜಾನ್ ಡಿ ಕ್ಲೈನ್, 2025ರ ಜ.21ರಂದು ಅಮೆರಿಕ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ, ‘ರಾಣಾನಿಗೆ 30ಕ್ಕೂ ಅಧಿಕ ಆರೋಗ್ಯ ಸಮಸ್ಯೆಗಳಿವೆ. ಜೊತೆಗೆ, ಆತ ಪಾಕಿಸ್ತಾನ ಮೂಲದವನಾಗಿದ್ದು, ಭಾರತದ ಇತಿಹಾಸದ ಅತಿ ಘೋರ ಉಗ್ರದಾಳಿಯಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾನೆ.
ಆದ್ದರಿಂದ ಅವನಿಗೆ ಭಾರತದ ಜೈಲಿನಲ್ಲಿ ಹಿಂಸೆ ಕೊಡುವ ಸಾಧ್ಯತೆ ಇದೆ. ಭಾರತದ ಜೈಲುಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಆತ ವಿಚಾರಣೆಗೆ ಕಾಯುತ್ತಿರುವಾಗಲೇ ಸಾಯಲೂಬಹುದು‘ ಎನ್ನಲಾಗಿತ್ತು. ‘ರಾಣಾನ ಆರೋಗ್ಯ, ಕಳೆದ 5 ವರ್ಷಗಳಿಂದ ತೀರಾ ಹದಗೆಟ್ಟಿದೆ. 2024ರಲ್ಲಿ ಆತನಕ್ಕೆ ಪಾರ್ಕಿನ್ಸನ್ ಕಾಯಿಲೆ ಕಾಣಿಸಿಕೊಂಡಿದ್ದು, ಅದು ಉಲ್ಬಬಣಿಸುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೂ ಒಳಗಾಗಿದ್ದಾನೆ.
ಜೊತೆಗೆ, ಆತನ ಮಾನಸಿಕ ಸಾಮರ್ಥ್ಯವೂ ಕ್ಷೀಣಿಸುತ್ತಿದೆ’ ಎಂದು ರಾಣಾನಿಗಿರುವ ಅನಾರೋಗ್ಯದ ಪಟ್ಟಿಯನ್ನೇ ಸಲ್ಲಿಸಲಾಗಿತ್ತು. ಇದಕ್ಕೆ 3 ವಾರಗಳಲ್ಲಿ ಪ್ರತಿಕ್ರಿಯಿಸಿದ ಅಮೆರಿಕ ಸರ್ಕಾರ, ರಾಣಾನಿಗೆ ಚಿತ್ರಹಿಂಸೆ ಕೊಡಲಾಗುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿದ್ದು, ಆತನ ಹಸ್ತಾಂತರ ಖಚಿತ ಎಂದು ಖಡಾಖಂಡಿತವಾಗಿ ಹೇಳಿತ್ತು. ಜೊತೆಗೆ, ‘ಆತನ ಗಡೀಪಾರಲ್ಲಿ ಎಲ್ಲಾ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸಲಾಗುತ್ತದೆ. ರಾಣಾನ ವೈದ್ಯಕೀಯ ವರದಿಯನ್ನು ಭಾರತೀಯ ಅಧಿಕಾರಿಗಳಿಗೆ ನೀಡಿ, ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಲಾಗುತ್ತದೆ’ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ಹೇಳಿದ್ದರು.
ಜೈಲಿನಲ್ಲಿ ಕುರಾನ್, ಪೆನ್, ಹಾಳೆಗೆ ತಹಾವುರ್ ರಾಣಾ ಮನವಿ
ನವದೆಹಲಿ: ‘26/11 ಮುಂಬೈ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಸ್ಟಡಿಯಲ್ಲಿರುವ ಸಂಚುಕೋರ ತಹಾವುರ್ ರಾಣಾನ ಬೇಡಿಕೆಯಂತೆ ಆತನಿಗೆ ಕುರಾನ್, ಪೆನ್ನು ಮತ್ತು ಹಾಳೆಯನ್ನು ಒದಗಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ರಾಣಾನ ವಿನಂತಿಯಂತೆ ಕುರಾನ್‌ನ ಪ್ರತಿಯನ್ನು ಒದಗಿಸಿದ್ದೇವೆ. ಆತ ಜೈಲಿನೊಳಗೆ ದಿನಕ್ಕೆ 5 ಬಾರಿ ನಮಾಜ್ ಮಾಡುತ್ತಿದ್ದಾನೆ. ಪೆನ್ನು ಮತ್ತು ಹಾಳೆಯನ್ನು ಕೊಡುವಂತೆಯೂ ಕೇಳಿದ್ದ.
ಅದನ್ನೂ ಕೊಟ್ಟಿದ್ದೇವೆ. ಆದರೆ ಪೆನ್ನಿನಿಂದ ಯಾವುದೇ ರೀತಿಯ ಗಾಯಗಳನ್ನು ಮಾಡಿಕೊಳ್ಳದಂತೆ ನಿಗಾ ವಹಿಸಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.‘ರಾಣಾನನ್ನು ಉಳಿದ ಕೈದಿಗಳಂತೆಯೇ ನೋಡಿಕೊಳ್ಳಲಾಗುತ್ತಿದೆ. ಆತನಿಗೆ ಯಾವುದೇ ವಿಶೇಷ ವ್ಯವಸ್ಥೆಯಿಲ್ಲ. ಕೋರ್ಟ್ ನಿರ್ದೇಶನದಂತೆ, 2 ದಿನಗಳಿಗೊಮ್ಮೆ ವಕೀಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 48 ಗಂಟೆಗಳಿಗೊಮ್ಮೆ ಆತನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.