ಚೆನ್ನೈ: ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಬೆನ್ನಲ್ಲೇ ತಣ್ಣಗಾಗಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಡಿಎಂಕೆ ಹಿರಿಯ ನಾಯಕ ಪೊನ್ಮುಡಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಸ್ತಾವವನ್ನು ಅಂಗೀಕರಿಸಿದ್ದಾರೆ ಹಾಗೂ ಪ್ರಮಾಣ ವಚನ ಬೋಧಿಸಿದ್ದಾರೆ.
ಮಧ್ಯಾಹ್ನ 3:30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾಗಿ ಪೊನ್ಮುಡಿ ಅವರು ರವಿ ಅವರಿಂದ ಪ್ರಮಾಣ ಸ್ವೀಕರಿಸಿದರು.
ಅವರಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ಎಲೆಕ್ಟ್ರಾನಿಕ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ನೀಡಲಾಗಿದೆ.ಪೊನ್ಮುಡಿ ಇತ್ತೀಚೆಗೆ ಅಕ್ರಮ ಹಣ ಕೇಸಿನಲ್ಲಿ 3 ವರ್ಷ ಜೈಲು ಶಿಕ್ಷೆಗೆ ಈಡಾಗಿದ್ದರು.
ಹೀಗಾಗಿ ಸಚಿವ ಖಾತೆಗೆ ರಾಜೀನಾಮೆ ನೀಡಿದ್ದರು. ಆದರೆ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಹೀಗಾಗಿ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲು ಅನುಮತಿಸಿ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರವಿಗೆ ಕೋರಿಕೆ ಸಲ್ಲಿಸಿದ್ದರು.
ಆದರೆ ಪೊನ್ಮುಡಿ ಶಿಕ್ಷೆಗೆ ಕೋರ್ಟ್ ತಡೆ ನೀಡಿದೆಯೇ ವಿನಾ ಇನ್ನೂ ನಿರ್ದೋಷಿ ಎಂದು ಪರಿಗಣಿಸಿಲ್ಲ. ಹೀಗಾಗಿ ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಅಸಾಧ್ಯ ಎಂದು ರವಿ ಹೇಳಿದ್ದರು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿತ್ತು.