ವಿವಾದಕ್ಕೆ 17ರ ಬಾಲಕನತಲೆ ಕಟ್‌: ಮಗನ ರುಂಡ ಹಿಡಿದು ಗೋಳಾಡಿದ ತಾಯಿ

KannadaprabhaNewsNetwork | Published : Oct 31, 2024 1:00 AM

ಸಾರಾಂಶ

ಎರಡು ಗುಂಪುಗಳ ನಡುವಿನ 4 ದಶಕದ ಜಮೀನು ವಿವಾದವೊಂದು 17 ವರ್ಷದ ಬಾಲಕನ ರುಂಡ- ಮುಂಡ ಬೇರ್ಪಡೆಯೊಂದಿಗೆ ಅಂತ್ಯಗೊಂಡ ಭೀಕರ ಘಟನೆ ಉತ್ತರಪ್ರದೇಶದ ಜೌನ್‌ಪುರದಲಿ ನಡೆದಿದೆ.

ಲಖನೌ: ಎರಡು ಗುಂಪುಗಳ ನಡುವಿನ 4 ದಶಕದ ಜಮೀನು ವಿವಾದವೊಂದು 17 ವರ್ಷದ ಬಾಲಕನ ರುಂಡ- ಮುಂಡ ಬೇರ್ಪಡೆಯೊಂದಿಗೆ ಅಂತ್ಯಗೊಂಡ ಭೀಕರ ಘಟನೆ ಉತ್ತರಪ್ರದೇಶದ ಜೌನ್‌ಪುರದಲಿ ನಡೆದಿದೆ. ಕಬಿರುದ್ದೀನ್ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ 40-45 ವರ್ಷಗಳಿಂದ ಜಮೀನು ವಿವಾದವಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆ ವೇಳೆ ಅನುರಾಗ್‌(17) ಎಂಬ ವಿದ್ಯಾರ್ಥಿಯನ್ನು ಕೆಲವರು ಅಟ್ಟಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಕತ್ತಿ ಹಿಡಿದ್ದ ಓರ್ವ ವ್ಯಕ್ತಿ ಬಾಲಕನ ಮೇಲೆ ಕತ್ತಿ ಎಸೆದಿದ್ದಾನೆ. ಪರಿಣಾಮ ತಲೆ ರುಂಡ ದೇಹದಿಂದ ಬೇರ್ಪಟ್ಟಿದೆ. ಈ ವೇಳೆ ಅನುರಾಗ್‌ನ ತಾಯಿ ತನ್ನ ಮಗನ ರುಂಡವನ್ನು ತೊಡೆಯ ಮೇಲಿಟ್ಟು ಹಲವು ಗಂಟೆಗಳ ಕಾಲ ಗೋಳಾಡಿದ ಮನಮಿಡಿವ ಘಟನೆ ಸಂಭವಿಸಿದೆ.

ಲಾಹೋರ್‌ ಮಾಲಿನ್ಯಕ್ಕೆ ಪಂಜಾಬ್‌ ಕೃಷಿ ತ್ಯಾಜ್ಯದ ಬೆಂಕಿ ಕಾರಣ: ಪಾಕ್‌ ಕಿಡಿ

ಲಾಹೋರ್‌: ಇತ್ತೀಚೆಗೆ ವಿಶ್ವದ ಅತ್ಯಂತ ವಾಯುಮಾಲಿನ್ಯ ನಗರವೆಂದು ಕುಖ್ಯಾತಿಗೆ ತುತ್ತಾಗಿದ್ದ ಪಾಕಿಸ್ತಾನದ ಲಾಹೋರ್‌ನ ಪರಿಸ್ಥಿತಿಗೆ ಭಾರತದ ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದೇ ಕಾರಣ ಎಂದು ಪಾಕಿಸ್ತಾನ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಾಂ ನವಾಜ್‌ ಷರೀಫ್‌, ಪಂಜಾಬ್‌ ಗಡಿ ಪ್ರಾಂತ್ಯದಲ್ಲಿ ವಾಯು ಮಾಲಿನ್ಯ ಉಂಟಾಗಿದ್ದು, ಇದನ್ನು ಹೀಗೆ ಬಿಟ್ಟರೆ ತೀವ್ರ ಪರಿಣಾಮ ಬೀರಲಿದೆ. ಆದ್ದರಿಂದ ಕೃಷಿ ತ್ಯಾಜ್ಯ ಸುಡುವುದನ್ನು ನಿಲ್ಲಿಸುವಂತೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದೇನೆ. ಇದರಿಂದಲಾದರೂ ಸ್ವಲ್ಪ ಮಟ್ಟದಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ. ದೆಹಲಿಯಲ್ಲೂ ವಾಯು ಗುಣಮಟ್ಟ ಹದಗೆಡಲು ಮುಖ್ಯವಾಗಿ ಪಂಜಾಬ್‌ನಲ್ಲಿ ಸುಡುತ್ತಿರುವ ಕೃಷಿ ತ್ಯಾಜ್ಯವೂ ಒಂದು ಕಾರಣವಾಗಿದೆ.

ಬಿಷ್ಣೋಯಿ ಸಮಾಜದ ಅಖಿಲ

ಭಾರತ ಪ್ರಾಣಿ ರಕ್ಷಣಾ ಯುವ ಘಟಕಕ್ಕೆ ಬಿಷ್ಣೋಯಿ ಅಧ್ಯಕ್ಷ

ಚಂಡೀಗಢ: ಸಲ್ಮಾನ್‌ ಖಾನ್‌ ಹತ್ಯೆಗೆ ಸಂಚು ರೂಪಿಸಿದ್ದ ಹಾಗೂ ಪ್ರಸ್ತುತ ಗುಜರಾತಿನ ಜೈಲಿನಲ್ಲಿರುವ ಪಾತಕಿ ಲಾರೆನ್ಸ್‌ ಬಿಷ್ಣೋಯಿ, ಬಿಷ್ಣೋಯಿ ಸಮಾಜದ ‘ಅಖಿಲ ಭಾರತ ಪ್ರಾಣಿ ರಕ್ಷಣಾ ಯುವ ಘಟಕ’ಕ್ಕೆ ರಾಷ್ಟ್ರೀಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ಮಂಗಳವಾರ ಸಂಜೆ ಪಂಜಾಬ್‌ನ ಅಬೋಹರ್‌ನಲ್ಲಿ ನಡೆದ ಬಿಷ್ಣೋಯಿ ಸಮಾಜಸ ಸಭೆಯಲ್ಲಿ ಲಾರೆನ್ಸ್‌ ಬಿಷ್ಣೋಯಿಯನ್ನು ಆಯ್ಕೆ ಮಾಡಲಾಗಿದೆ ಎಂದು ಬಿಷ್ಣೋಯಿ ಸಮಾಜದ ಮುಖ್ಯಸ್ಥ ಇಂದರ್‌ಪಾಲ್‌ ಬಿಷ್ಣೋಯಿ ತಿಳಿಸಿದ್ದು, ಪ್ರಮಾಣ ಪತ್ರವನ್ನು ಬಿಷ್ಣೋಯಿ ಅವರ ಮಗ ರವೀಂದರ್‌ಗೆ ಹಸ್ತಾಂತರಿಸಿದ್ದಾರೆ. ಬಿಷ್ಣೋಯಿ ಸಮುದಾಯದ ತತ್ವಗಳ ಪ್ರಕಾರ ಪ್ರಾಣಿಗಳ ರಕ್ಷಣೆಯನ್ನು ಮಾಡುವ ಕೆಲಸವನ್ನು ಲಾರೆನ್ಸ್‌ ಅವರಿಗೆ ವಹಿಸಲಾಗಿದೆ.

ಡಿಜಿಟಲ್‌ ಅರೆಸ್ಟ್‌ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ಇತ್ತೀಚೆಗೆ ಹೆಚ್ಚುತ್ತಿರುವ ಡಿಜಿಟಲ್‌ ಅರೆಸ್ಟ್‌ ವಂಚನೆ ಪ್ರಕರಣಗಳನ್ನು ತನಿಖೆ ನಡೆಸಲು ಕೇಂದ್ರ ಗೃಹ ಸಚಿವಾಲಯವು ಉನ್ನತ ಮಟ್ಟದ ಸಮಿತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ಡಿಜಿಟಲ್‌ ಅರೆಸ್ಟ್‌ ವಂಚನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡಿದೆ. ಡಿಜಿಟಲ್‌ ಅರೆಸ್ಟ್‌ ಅಡಿಯಲ್ಲಿ ಈ ವರ್ಷ 6000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಮೇಲ್ವಿಚಾರಣೆ ನಡೆಸುತ್ತಿರುವ ಸಚಿವಾಲಯದ ಸೈಬರ್‌ ವಿಭಾಗವು ,ಇದರಲ್ಲಿ ಭಾಗಿಯಾಗಿರುವ 6 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳಿಗೆ ನಿರ್ಬಂಧ ಹೇರಿದೆ. ಈ ವಂಚನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಟಿಟಿಡಿಗೆ ಕರ್ನಾಟಕದ

ನ್ಯಾ. ಎಚ್‌.ಎಲ್‌ ದತ್ತು ಸೇರಿ ಮೂವರಿಗೆ ಸ್ಥಾನ

ಅಮರಾವತಿ: ತಿರುಪತಿ ತಿರುಮಲ ದೇಗುಲ ಮಂಡಳಿಗೆ 24 ಸದಸ್ಯರ ನೂತನ ಸಮಿತಿ ರಚನೆ ಮಾಡಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಟೀವಿ 5 ಸಮೂಹದ ಮುಖ್ಯಸ್ಥ ಬಿ.ರಾಜಗೋಪಾಲ ನಾಯ್ಡು ಅವರನ್ನು ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಸಮಿತಿಯಲ್ಲಿ ಕರ್ನಾಟಕದ ಮೂವರಿಗೆ ಸ್ಥಾನ ಸಿಕ್ಕಿದೆ. ಅವರೆಂದರೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು. ನರೇಶ್‌ ಕುಮಾರ್‌, ದರ್ಶನ್‌ ಆರ್‌.ಎನ್‌. ಅವರಿಗೂ ಸ್ಥಾನ ಕಲ್ಪಿಸಲಾಗಿದೆ. ಉಳಿದಂತೆ ಕೋವ್ಯಾಕ್ಸಿನ್‌ ಕೋವಿಡ್‌ ಲಸಿಕೆ ಉತ್ಪಾದಿಸಿದ್ದ ಭಾರತ್‌ ಬಯೋಟೆಕ್‌ನ ಸುಚಿತ್ರಾ ಎಲ್ಲಾ, ಕೇಂದ್ರದ ಮಾಜಿ ಸಚಿವೆ ಪನಬಾಕ ಲಕ್ಷ್ಮೀ ಸ್ಥಾನ ಪಡೆದ ಪ್ರಮುಖರಾಗಿದ್ದಾರೆ.

Share this article