ಶ್ರೀ ಶೈಲಂ ಸುರಂಗ ಕುಸಿತ : 2ನೇ ದಿನವೂ ಒಳಗೆ ಸಿಲುಕಿರುವ 8 ಕಾರ್ಮಿಕರ ರಕ್ಷಣಾ ಕಾರ್ಯ

KannadaprabhaNewsNetwork | Updated : Feb 24 2025, 05:27 AM IST

ಸಾರಾಂಶ

ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗ ಕುಸಿದು, 14 ಕಿ.ಮೀ. ಒಳಗೆ ಸಿಲುಕಿರುವ 8 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 2ನೇ ದಿನವೂ ಮುಂದುವರೆದಿದೆ.

ನಾಗರಕುರ್ನೂಲ್‌(ತೆಲಂಗಾಣ): ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗ ಕುಸಿದು, 14 ಕಿ.ಮೀ. ಒಳಗೆ ಸಿಲುಕಿರುವ 8 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ 2ನೇ ದಿನವೂ ಮುಂದುವರೆದಿದೆ. ರಕ್ಷಣಾ ತಂಡ ಈಗಾಗಲೇ ಬೋರಿಂಗ್‌ ಯಂತ್ರದಿಂದ ಸುರಂಗ ಕೊರೆಯಲಾಗುತ್ತಿದ್ದ ಸ್ಥಳವನ್ನು ತಲುಪಿದೆ.

ಆದರೆ ಕಾರ್ಮಿಕರು ಸಿಲುಕಿರುವ ಪ್ರದೇಶವನ್ನು ತಲುಪುವುದು ಸವಾಲಾಗಿ ಪರಿಣಮಿಸಿದೆ. ಆದಾಗ್ಯೂ ಸುರಂಗಕ್ಕೆ ಆಮ್ಲಜನಕ ಹಾಗೂ ವಿದ್ಯುತ್‌ ಸರಬರಾಜು ಮಾಡಲಾಗಿದ್ದು, ನೀರು ಹಾಗೂ ಕೆಸರು ತೆರವು ಮಾಡಲಾಗುತ್ತಿದೆ. ರಕ್ಷಣಾ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿರುವ ನಾಗರಕುರ್ನೂಲ್‌ ಜಿಲ್ಲಾಧಿಕಾರಿ ಬಿ. ಸಂತೋಷ್‌ ಮಾತನಾಡಿ, ’ಒಳಗಿರುವವರೊಂದಿಗೆ ಸಂಪರ್ಕ ಸಾಧಿಸಲೂ ಸಾಧ್ಯವಾಗಿಲ್ಲ. ಹೇಗೆ ಮುಂದುವರೆಯುವುದು ಎಂಬ ಬಗ್ಗೆ ಎನ್‌ಡಿಆರ್‌ಎಫ್‌ ತಂಡ ಯೋಜನೆ ರೂಪಿಸುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ಎನ್‌ಡಿಆರ್‌ಎಫ್‌ ಅಧಿಕಾರಿಗಳು ಮಾತನಾಡಿ, ‘ಕುಸಿದ ಸುರಂಗದೊಳಗೆ ಅವಶೇಷ ತುಂಬಿದ್ದು, ಸುರಂಗ ಕೊರೆಯುವ ಯಂತ್ರಕ್ಕೂ ಹಾನಿಯಾಗಿದೆ. 13.5 ಕಿ.ಮೀ.ಗೂ 2 ಕಿ.ಮೀ. ಮೊದಲು ನೀರು ನಿಂತಿದ್ದು, ಯಂತ್ರೋಪಕರಣಗಳನ್ನು ಸಾಗಿಸಲು ಕಷ್ಟವಾಗುತ್ತಿದೆ. ಆದ್ದರಿಂದ ನೀರನ್ನು ಹೊರಹಾಕಿ, ಬಳಿಕ ಅವಶೇಷಗಳ ತೆರವು ಆರಂಭಿಸಲಾಗುವುದು. ಕೆಲಸವನ್ನು ಇನ್ನಷ್ಟು ಬೇಗ ಮಾಡಲು ಹೆಚ್ಚುವರಿ ಮೋಟರ್‌ಗಳನ್ನು ಬಳಸಲಾಗುತ್ತಿದೆ’ ಎಂದಿದ್ದಾರೆ.

ಸುರಂಗ ನಿರ್ಮಾಣ ಕಂಪನಿಯ ಸಿಬ್ಬಂದಿಯ ಜತೆ ಹೈದರಾಬಾದ್‌ನ 1 ಹಾಗೂ ವಿಜಯವಾಡದ 3 ಎನ್‌ಡಿಆರ್‌ಎಫ್‌ ತಂಡಗಳು, 24 ಸೇನಾ ಸಿಬ್ಬಂದಿ, ಎಸ್‌ಡಿಆರ್‌ಎಫ್‌ ಸಿಬ್ಬಂದಿ, ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಾದ ಎಸ್‌ಸಿಸಿಎಲ್‌ನ 23 ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿರುದ್ದಾರೆ.ಕುಸಿತ ಸಂಭವಿಸಿದಾಗ 70 ಜನ ಕೆಲಸ ಮಾಡುತ್ತಿದ್ದು, ಬಹುತೇಕರು ಸುರಂಗದಲ್ಲಿ ಸಂಚರಿಸಲು ಬಳಸುತ್ತಿದ್ದ ರೈಲಿನಲ್ಲಿ ಹೊರಬಂದರು. ಉಳಿದವರು ಸಿಲುಕಿದರು ಎಂದು ನೀರಾವರಿ ಸಚಿವ ಉತ್ತಮಕುಮಾರ್‌ ರೆಡ್ಡಿ ಘಟನೆಯನ್ನು ವಿವರಿಸಿದ್ದಾರೆ.

Share this article