ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇದೆ ಎಂದ ಪಠ್ಯಪುಸ್ತಕ ನಿಷೇಧ

Published : Feb 27, 2026, 06:16 AM IST
Supreme Court vs NCERT

ಸಾರಾಂಶ

ಕೇಂದ್ರೀಯ ಪಠ್ಯಕ್ರಮದ 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ‘ದೇಶದ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಲೋಪಗಳಿವೆ’ ಎಂಬ ಟೀಕೆ-ಟಿಪ್ಪಣಿ ಇರುವುದನ್ನು ಬಲವಾಗಿ ಖಂಡಿಸಿರುವ ಸುಪ್ರೀಂ ಕೋರ್ಟ್ ವಾಪಸ್‌ ತೆಗೆದುಕೊಳ್ಳಬೇಕು’ ಎಂದು ಕಟುನುಡಿಗಳಲ್ಲಿ ಆದೇಶಿಸಿದೆ.

 ನವದೆಹಲಿ :  ಕೇಂದ್ರೀಯ ಪಠ್ಯಕ್ರಮದ 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ‘ದೇಶದ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಸೇರಿದಂತೆ ಹಲವು ಲೋಪಗಳಿವೆ’ ಎಂಬ ಟೀಕೆ-ಟಿಪ್ಪಣಿ ಇರುವುದನ್ನು ಬಲವಾಗಿ ಖಂಡಿಸಿರುವ ಸುಪ್ರೀಂ ಕೋರ್ಟ್, ‘ಈ ಪಠ್ಯಪುಸ್ತಕ ನಿಷೇಧಿಸಬೇಕು ಹಾಗೂ ಎಲ್ಲ ಮುದ್ರಿತ ಪುಸ್ತಕ/ಡಿಜಿಟಲ್‌ ಪ್ರತಿಗಳನ್ನು ತಡೆಹಿಡಿದು ವಾಪಸ್‌ ತೆಗೆದುಕೊಳ್ಳಬೇಕು’ ಎಂದು ಕಟುನುಡಿಗಳಲ್ಲಿ ಆದೇಶಿಸಿದೆ.

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಪಾಠವಿತ್ತು. ಅದರಲ್ಲಿ, ‘ಕೋರ್ಟ್‌ಗಳಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಭಾರಿ ಪ್ರಮಾಣದ ಪ್ರಕರಣ ಬಾಕಿ ಇವೆ. ಮತ್ತು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರ ಕೊರತೆ ಇದೆ- ಇವು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ಬರೆಯಲಾಗಿತ್ತು. ಇದು ವಿವಾದಕ್ಕೀಡಾದ ಬಳಿಕ ಬುಧವಾರ, ವಿವಾದಿತ ಅಂಶ ಕೈಬಿಡುವುದಾಗಿ ಎನ್‌ಸಿಇಆರ್‌ಟಿ ಹೇಳಿತ್ತು.

ಸುಪ್ರೀಂ ಹಿಗ್ಗಾಮುಗ್ಗಾ ತರಾಟೆ:

ಆದರೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸೂರ್ಯಕಾಂತ್‌ ಅವರು ಗುರುವಾರ ವಿಚಾರಣೆ ಮುಂದುವರಿಸಿ, ‘ಎನ್‌ಸಿಇಆರ್‌ಟಿ ಗುಂಡು ಹಾರಿಸಿದ್ದು, ನ್ಯಾಯಾಂಗಕ್ಕೆ ರಕ್ತಸ್ರಾವವಾಗುತ್ತಿದೆ. ಇದು ಆಳವಾಗಿ ಬೇರೂರಿರುವ ಮತ್ತು ಪೂರ್ವನಿಯೋಜಿತ ಪಿತೂರಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ನ್ಯಾಯಾಂಗವನ್ನು ದುರ್ಬಲಗೊಳಿಸುವ ಮತ್ತು ಅದರ ಘನತೆಯನ್ನು ಕುಗ್ಗಿಸುವ ಉದ್ದೇಶಪೂರ್ವಕ ನಡೆದಿರುವ ಕೃತ್ಯ. ಒಂದೊಮ್ಮೆ ಇದು ಬೆಳಕಿಗೆ ಬರದಿದ್ದರೆ, ಕೋರ್ಟ್‌ಗಳ ಮೇಲಿನ ಜನರ ವಿಶ್ವಾಸವೇ ನಶಿಸುತ್ತಿತ್ತು. ಹಾಗಾಗಿ ಇದನ್ನು ಕ್ರಿಮಿನಲ್‌ ಪ್ರಕರಣವೆಂದೂ ಪರಿಗಣಿಸಬಹುದು. ಇದಕ್ಕೆ ಯಾರು ಕಾರಣೀಕರ್ತರು ಎಂಬುದನ್ನು ಕಂಡುಹಿಡಿಯುವುದು ಹಾಗೂ ಅವರ ತಲೆದಂಡ ನೀಡುವುದು ನ್ಯಾಯಾಂಗ ವ್ಯವಸ್ಥೆಯ ಮುಖ್ಯಸ್ಥನಾಗಿರುವ ನನ್ನ ಜವಾಬ್ದಾರಿ. ಆದ್ದರಿಂದ ಈ ಬಗ್ಗೆ ಆಳವಾದ ತನಿಖೆ ನಡೆಸಬೇಕು’ ಎಂದರು. ನ್ಯಾ। ಜಯಮಾಲ್ಯ ಬಾಗ್ಚಿ ಹಾಗೂ ವಿಪುಲ್‌ ಪಾಂಚೋಲಿ ಅವರೂ ಈ ಪ್ರಕರಣದ ತ್ರಿಸದಸ್ಯ ಪೀಠದಲ್ಲಿದ್ದರು.

ಇದೇ ವೇಳೆ ಪೀಠವು, ಎನ್‌ಸಿಇಆರ್‌ಟಿ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರಿಗೆ ಶೋಕಾಸ್‌ ನೋಟಿಸ್‌ ನೀಡಿ, ‘ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಏಕೆ ದಾಖಲಿಸಿ ಕ್ರಮ ಕೈಗೊಳ್ಳಬಾರದು? ಎಂದು ಪ್ರಶ್ನಿಸಿತು.

ಜತೆಗೆ ಕೇಂದ್ರ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳ ಸಹಕಾರದಲ್ಲಿ, ನ್ಯಾಯಾಂಗವನ್ನು ಅವಹೇಳನ ಮಾಡಿರುವ ಪಠ್ಯವುಳ್ಳ ಎಲ್ಲಾ (ಮುದ್ರಿತ ಅಥವಾ ಡಿಜಿಟಲ್‌) ಪುಸ್ತಕಗಳ ಪ್ರತಿಗಳನ್ನು ಹಿಂಪಡೆಯುವಂತೆ ಆದೇಶಿಸಿತು. ಇವುಗಳು ಮತ್ತೆ ಮುದ್ರಣವಾಗದಂತೆಯೂ ನಿರ್ಬಂಧ ವಿಧಿಸಿತು. ಒಂದೊಮ್ಮೆ ಇದು ಮತ್ತೆ ಮಕ್ಕಳ ಕೈಸೇರಿದರೆ, ಕೋರ್ಟ್‌ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದೂ ಎಚ್ಚರಿಸಿತು ಹಾಗೂ ಮಾ.11ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿತು.

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಸೇರಿ ಹಲವು ಲೋಪ’

ಎನ್‌ಸಿಇಆರ್‌ಟಿ ಪುಸ್ತಕದಲ್ಲಿ, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಸೇರಿ ಹಲವು ಲೋಪ’ ಎಂಬ ಪಠ್ಯ

ವಿಷಯ ಗಮನಕ್ಕೆ ಬರುತ್ತಲೇ ಸ್ವಯಂ ಪ್ರಕರಣ ದಾಖಲಿಸಿದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌

ಇದು ಆಳವಾಗಿ ಬೇರೂರಿರುವ ಮತ್ತು ಪೂರ್ವನಿಯೋಜಿತ ಪಿತೂರಿ ಎಂದು ನ್ಯಾಯಪೀಠ ಆಕ್ರೋಶ

ಎನ್‌ಸಿಇಆರ್‌ಟಿ ಗುಂಡಿಂದ, ನ್ಯಾಯಾಂಗಕ್ಕೆ ರಕ್ತಸ್ರಾವ ಆಗಿದೆ ಎಂದು ಸಿಜೆಐ ಸೂರ್ಯಕಾಂತ್‌ ಕಿಡಿ

ಪುಸ್ತಕ ನಿಷೇಧಿಸಿ ಆದೇಶ. ಕೂಡಲೇ ಪುಸ್ತಕ ವಾಪಸ್‌ಗೆ ಆದೇಶ, ಮಾ.11ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ ನ್ಯಾಯಾಲಯ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕಸ ಹೊಡೆವ ನೌಕರರಿಗೆ ₹ 2 ಲಕ್ಷ ವೇತನ! ಇಷ್ಟೊಂದು ವೇತನ ಹೇಗೆ?
ಮೋದಿಗೆ 10 ಕೋಟಿ ಇನ್‌ಸ್ಟಾ ಹಿಂಬಾಲಕರು: ವಿಶ್ವದ ನಂ.1!