ಟೀಂ ಇಂಡಿಯಾಗೆ ಸರಣಿ ಸಮಬಲದ ಗುರಿ

KannadaprabhaNewsNetwork |  
Published : Oct 22, 2025, 01:03 AM IST
ವಿರಾಟ್ ಕೊಹ್ಲಿ  | Kannada Prabha

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯ ಗುರುವಾರ ನಡೆಯಲಿದ್ದು, ಭಾರತ ತಂಡ ಸರಣಿ ಸಮಬಲಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕ ಪಂದ್ಯದ ಹೀನಾಯ ಪ್ರದರ್ಶನ ತಂಡದ ಆತ್ಮವಿಶ್ವಾಸ ಕುಗ್ಗಿಸಿದ್ದು, 2ನೇ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ 

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯ ಗುರುವಾರ ನಡೆಯಲಿದ್ದು, ಭಾರತ ತಂಡ ಸರಣಿ ಸಮಬಲಗೊಳಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆರಂಭಿಕ ಪಂದ್ಯದ ಹೀನಾಯ ಪ್ರದರ್ಶನ ತಂಡದ ಆತ್ಮವಿಶ್ವಾಸ ಕುಗ್ಗಿಸಿದ್ದು, 2ನೇ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ. ಪಂದ್ಯಕ್ಕೆ ಅಡಿಲೇಡ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 

ಮಳೆ ಪೀಡಿತ ಆರಂಭಿಕ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ತೀರಾ ಕಳಪೆ ಪ್ರದರ್ಶನ ನೀಡಿದ್ದರು. 26 ಓವರ್‌ಗಳ ಪಂದ್ಯದಲ್ಲಿ ಭಾರತ 9 ವಿಕೆಟ್‌ ಕಳೆದುಕೊಂಡು 136 ರನ್‌ ಗಳಿಸಿತ್ತು. ಪ್ರಮುಖವಾಗಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮಿಂಚಲು ವಿಫಲರಾಗಿದ್ದರು. ಇಡೀ ಸರಣಿಯೇ ವಿರಾಟ್‌ ಹಾಗೂ ರೋಹಿತ್‌ ಮೇಲೆ ಕೇಂದ್ರೀಕೃತವಾಗಿದ್ದರೂ, ಅವರಿಬ್ಬರಿಂದ ದೊಡ್ಡ ಮೊತ್ತ ದಾಖಲಾಗಿರಲಿಲ್ಲ.  

ದಿಗ್ಗಜರಿಬ್ಬರ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯದ ದೃಷ್ಟಿಯಲ್ಲಿ ಈ ಸರಣಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ, 2ನೇ ಪಂದ್ಯದಲ್ಲಾದರೂ ಅಬ್ಬರಿಸಬಲ್ಲರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಉಳಿದಂತೆ ನಾಯಕ ಶುಭ್‌ಮನ್‌ ಗಿಲ್‌, ಉಪನಾಯಕ ಶ್ರೇಯಸ್‌ ಅಯ್ಯರ್‌ರಿಂದಲೂ ತಂಡ ದೊಡ್ಡ ಇನ್ನಿಂಗ್ಸ್‌ಗಾಗಿ ಕಾಯುತ್ತಿದೆ. ವಿಕೆಟ್‌ ಕೀಪರ್‌ ಆಗಿರುವ ಕೆ.ಎಲ್‌.ರಾಹುಲ್‌ ಮೊದಲ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದರೂ, ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ವಿದೇಶಿ ಪಿಚ್‌ಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಕನ್ನಡಿಗ ಬ್ಯಾಟರ್‌ ಈ ಪಂದ್ಯದಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ಇನ್ನು, ಎಡಗೈ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆಯುತ್ತಿಲ್ಲ. ಆರಂಭಿಕ ಪಂದ್ಯದಲ್ಲಿ ಅವರನ್ನು ಹೊರಗಿಟ್ಟ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಆದರೆ ಬ್ಯಾಟಿಂಗ್‌ ವಿಭಾಗ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಭಾರತ ಆಲ್ರೌಂಡರ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ವಾಷಿಂಗ್ಟನ್‌ ಸುಂದರ್‌, ನಿತೀಶ್‌ ರೆಡ್ಡಿ ತಂಡದಲ್ಲಿ ಸ್ತಾನ ಪಡೆಯುತ್ತಿದ್ದಾರೆ. ಹೀಗಾಗಿ ಕುಲ್ದೀಪ್‌ಗೆ ಅವಕಾಶ ಸಿಗುತ್ತಿಲ್ಲ. 2ನೇ ಪಂದ್ಯದಲ್ಲೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಮೊದಲ ಪಂದ್ಯದ ಕಳಪೆ ಪ್ರದರ್ಶನ ಹೊರತಾಗಿಯೂ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.

ಮತ್ತೊಂದೆಡೆ ಆಸ್ಟ್ರೇಲಿಯಾ ತುಂಬು ಆತ್ಮವಿಶ್ವಾಸದಲ್ಲಿದ್ದು, ಸತತ 2ನೇ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳಲು ಕಾತರಿಸುತ್ತಿದೆ. ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ವುಡ್‌ ಮತ್ತೊಮ್ಮೆ ಭಾರತೀಯ ತಾರಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಎದುರು ನೋಡುತ್ತಿದ್ದಾರೆ. --

ಮುಖಾಮುಖಿ: 153

ಭಾರತ: 58

ಆಸೀಸ್‌: 85

ಫಲಿತಾಂಶವಿಲ್ಲ: 10ಸಂಭಾವ್ಯ ಆಟಗಾರರು

ಭಾರತ: ರೋಹಿತ್‌, ಶುಭ್‌ಮನ್(ನಾಯಕ), ವಿರಾಟ್‌, ಶ್ರೇಯಸ್‌, ರಾಹುಲ್‌, ಅಕ್ಷರ್‌, ನಿತೀಶ್‌, ವಾಷಿಂಗ್ಟನ್‌, ಹರ್ಷಿತ್‌, ಅರ್ಶ್‌ದೀಪ್‌, ಸಿರಾಜ್‌.

ಆಸ್ಟ್ರೇಲಿಯಾ: ಮಿಚೆಲ್‌ ಮಾರ್ಷ್‌(ನಾಯಕ), ಹೆಡ್‌, ಶಾರ್ಟ್‌, ಫಿಲಿಪ್‌, ರೆನ್ಶಾ, ಕೊನೊಲ್ಲಿ, ಓವೆನ್‌, ಸ್ಟಾರ್ಕ್‌, ಎಲ್ಲಿಸ್‌, ಹೇಜಲ್‌ವುಡ್‌, ಕುನ್ಹೆಮಾನ್‌.

ಪಂದ್ಯ ಆರಂಭ: ಬೆಳಗ್ಗೆ 9 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

ಅಡಿಲೇಡಲ್ಲಿ ದಾಖಲೆ

ಅಂಚಿನಲ್ಲಿ ವಿರಾಟ್

ವಿರಾಟ್‌ ಕೊಹ್ಲಿ ಅಡಿಲೇಡ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈ ಕ್ರೀಡಾಂಗಣದಲ್ಲಿ 17 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 65ರ ಸರಾಸರಿಯಲ್ಲಿ 975 ರನ್‌ ಗಳಿಸಿದ್ದಾರೆ. ಇನ್ನು 25 ರನ್‌ ಬಾರಿಸಿದರೆ ಅಡಿಲೇಡ್‌ನಲ್ಲಿ ಸಾವಿರ ರನ್‌ ಗಳಿಸಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇನ್ನು, ಅಡಿಲೇಡ್‌ನಲ್ಲಿ ಕೊಹ್ಲಿ 5 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. ಏಕದಿನದಲ್ಲಿ 2, ಟೆಸ್ಟ್‌ನಲ್ಲಿ 3 ಸೆಂಚುರಿ ಸಿಡಿಸಿದ್ದಾರೆ. ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಯಾವುದೇ ಕ್ರೀಡಾಂಗಣವೊಂದರಲ್ಲಿ ಗರಿಷ್ಠ ಶತಕ ಸಿಡಿಸಿದ ವಿದೇಶಿ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

09 ಗೆಲುವು

ಭಾರತ ಅಡಿಲೇಡ್‌ನಲ್ಲಿ ಈವರೆಗೂ 15 ಏಕದಿನ ಪಂದ್ಯಗಳನ್ನಾಡಿದ್ದು, 9ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಒಂದು ಟೈ ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ರಿಮಿನಲ್‌ ಕಾಯ್ದೆ ಜಾರಿ ದಿನದಿಂದಷ್ಟೇ ಅನ್ವಯ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ