ಲಿಂಗರಾಜು ಕೋರಾ
ಬೆಂಗಳೂರು : ಯಾವುದೇ ಪೂರ್ವ ಸಿದ್ಧತೆ, ಅನುದಾನ, ಕನಿಷ್ಠ ಸೌಲಭ್ಯವೂ ಇಲ್ಲದೆ ಅವೈಜ್ಞಾನಿಕವಾಗಿ ಆರಂಭ ಮಾಡಲಾಗಿದೆ ಎಂದು ಸರ್ಕಾರವೇ ಆರೋಪಿಸುವ ಹಾಗೂ ಬಂದ್ ಭೀತಿ ಎದುರಿಸುತ್ತಿರುವ 9 ವಿಶ್ವವಿದ್ಯಾಲಯಗಳು ವಾಸ್ತವವಾಗಿ ಹೆಸರಿಗಷ್ಟೇ ವಿಶ್ವವಿದ್ಯಾಲಯಗಳಾಗಿವೆ. ಏಕೆಂದರೆ, ಈ ವಿವಿಗಳಲ್ಲಿ ಕುಲಪತಿ ನೇಮಕ ಹೊರತುಪಡಿಸಿದರೆ ಉಳಿದ ಯಾವ ಪ್ರಕ್ರಿಯೆಯೂ ಸಮರ್ಪಕವಾಗಿ ನಡೆದೇ ಇಲ್ಲ.
ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಬಾಗಲಕೋಟೆ, ಕೊಪ್ಪಳ, ಹಾವೇರಿ ವಿಶ್ವವಿದ್ಯಾಲಯಗಳು ಹಾಗೂ ಬೆಂಗಳೂರಿನ ನೃಪತುಂಗ ಮತ್ತು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳು ಇದೀಗ ಬಂದ್ ಭೀತಿಗೆ ಸಿಲುಕಿರುವ ವಿವಿಗಳು. ಈ ವಿವಿಗಳು ರಚನೆಯಾಗಿ ಐದು ವರ್ಷ ಕಳೆದರೂ ಕುಲಪತಿ ನೇಮಕಾತಿಯಾಗಿರುವುದು ಬಿಟ್ಟರೆ ಉಳಿದ ಯಾವ ಪ್ರಕ್ರಿಯೆಗಳೂ ಪೂರ್ಣಗೊಂಡಿಲ್ಲ.
ಉದಾಹರಣೆಗೆ, ಕೊಡಗು ವಿವಿಗೆ ಇಂದಿಗೂ ಮೈಸೂರು ವಿವಿಯಿಂದ ಹಸ್ತಾಂತರವಾಗಬೇಕಿದ್ದ ಪ್ರಮುಖ ಕಾಲೇಜುಗಳು ಹಸ್ತಾಂತರವಾಗದೆ ಅಲ್ಲಿನ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನು, ಸಂಶೋಧನಾ ಚಟುವಟಿಕೆಗಳಿಗಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಐದು ವರ್ಷ ಕಳೆದರೂ ಸಂಶೋಧನಾ ಕಾರ್ಯಗಳೇ ಆರಂಭವಾಗಿಲ್ಲ.
ಇದೇ ರೀತಿ ಇತರೆ ಹೊಸ ವಿವಿಗಳಿಗೆ ಹಂಚಿಕೆಯಾಗಿರುವ ಕಾಲೇಜುಗಳನ್ನು ಮೂಲ ವಿವಿಯಿಂದ ಹಸ್ತಾಂತರಿಸುವುದಾಗಲಿ, ವಿದ್ಯಾರ್ಥಿಗಳಿಗೆ ಅನುಗುಣವಾಗಿ ಬೋಧಕ, ಬೋಧಕೇತರ ಸಿಬ್ಬಂದಿಯ ಮರು ಹಂಚಿಕೆಯಾಗಲಿ, ಸಂಬಂಧಿಸಿದ ಭೂಮಿ, ಪೀಠೋಪಕರಣ ಸಾಮಗ್ರಿಗಳ ವರ್ಗಾವಣೆಯಾಗಲಿ ಆಗಿಲ್ಲ. ಇದು ಆಯಾ ವಿಶ್ವವಿದ್ಯಾಲಯಗಳ ಕುಲಪತಿಗಳು, ಅಧಿಕಾರಿಗಳೇ ಹೇಳುವ ಬಹಿರಂಗ ಸತ್ಯ. ಇದರಿಂದ ಒಂಬತ್ತೂ ವಿವಿಗಳು ಡೋಲಾಯಮಾನ ಸ್ಥಿತಿಯಲ್ಲಿವೆ.
ಇನ್ನು, ಹೊಸ ವಿವಿಯಾದರೂ 250 ಸಂಯೋಜಿತ ಕಾಲೇಜುಗಳನ್ನು ಹೊಂದಿದೆ, ಹಾಗಾಗಿ ವಿವಿಯನ್ನು ನಡೆಸಲು ಆಂತರಿಕ ಆದಾಯಕ್ಕೆ ಕೊರತೆಯಾಗುವುದಿಲ್ಲ ಎನ್ನುವ ಕಾರಣಕ್ಕೆ ಮುಚ್ಚುವ ಭೀತಿಯಿಂದ ಪಾರಾಗಿರುವ ಬೀದರ್ ವಿಶ್ವವಿದ್ಯಾಲಯದ ಸ್ಥಿತಿಯೂ ಇದೇ ಆಗಿದೆ.
9 ವಿವಿಗಳ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದರೆ ಒಂದೆರಡು ವಿವಿಗಳನ್ನು ಬಿಟ್ಟರೆ ಉಳಿದವುಗಳಲ್ಲಿ ಕುಲಪತಿಗಳಿಗೆ ವಾಹನ ಖರೀದಿಸಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿವೆ. ಈ ವಿವಿಗಳಿಗೆ ಹಿಂದಿನ ಸರ್ಕಾರ 2 ಕೋಟಿ ರು. ಅನುದಾನ ಘೋಷಿಸಿತ್ತು. ಆದರೆ, ಮಂಡ್ಯ ಹಾಗೂ ಬಾಗಲಕೋಟೆ ವಿವಿಗಳಿಗೆ ಕ್ರಮವಾಗಿ 1 ಕೋಟಿ ರು ಹಾಗೂ 50 ಲಕ್ಷ ರು.ನೀಡಿರುವುದನ್ನು ಬಿಟ್ಟರೆ ಉಳಿದ ಯಾವ ವಿವಿಗಳಿಗೂ ಅನುದಾನ ಬಿಡುಗಡೆಯೇ ಆಗಿಲ್ಲ.
ಕೆಲವೇ ವಿವಿಗಳಲ್ಲಿ ಖಾಯಂ ಸಿಬ್ಬಂದಿ ಜೊತೆಗೆ ಬಹುಪಾಲು ಅತಿಥಿ ಉಪನ್ಯಾಸಕರು, ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಈ ಪೈಕಿ ಕೆಲ ವಿವಿಗಳಲ್ಲಿ ಗುತ್ತಿಗೆ ನೌಕರರಿಗೆ 4 ತಿಂಗಳಿಂದ ವೇತನ ನೀಡಿಲ್ಲ. ಆದರೂ, ಈ ವಿವಿಗಳ 40-50 ಸಂಯೋಜಿತ ಕಾಲೇಜುಗಳ ಶುಲ್ಕ, ವಿದ್ಯಾರ್ಥಿಗಳಿಂದ ಪಡೆದ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕದಲ್ಲೇ ವಿಶ್ವವಿದ್ಯಾಲಯಗಳನ್ನು ಒಲ್ಲದ ಮನಸ್ಸಿನಿಂದ ನಡೆಸಲಾಗುತ್ತಿದೆ.
ಪ್ರಸ್ತುತ ಸರ್ಕಾರದ ಚಿಂತನೆಯೇನು?:
ಒಂಬತ್ತೂ ವಿವಿಗಳನ್ನು ಸಾಮೂಹಿಕವಾಗಿ ಮುಚ್ಚುವ ಆಲೋಚನೆಯಲ್ಲಿದ್ದ ಸರ್ಕಾರ ವಿದ್ಯಾರ್ಥಿ ಸಂಘಟನೆಗಳು, ಪ್ರತಿಪಕ್ಷವಷ್ಟೇ ಅಲ್ಲದೆ, ಸ್ಥಳೀಯ ಸ್ವಪಕ್ಷೀಯ ಜನಪ್ರತಿನಿಧಿಗಳಿಂದಲೂ ವಿರೋಧ ವ್ಯಕ್ತವಾಗಿದ್ದರಿಂದ ಪರ್ಯಾಯ ಆಯ್ಕೆಗಳನ್ನು ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಐದು ವರ್ಷಗಳವರೆಗೂ ಈ ಹೊಸ ವಿಶ್ವವಿದ್ಯಾಲಯಗಳನ್ನು ಕೇವಲ ನಡೆಸಿಕೊಂಡು ಹೋಗಲು (ಅಂದರೆ, ಜಮೀನು, ಕಟ್ಟಡದಂತಹ ವೆಚ್ಚಗಳನ್ನು ಹೊರತುಪಡಿಸಿ) 342 ಕೋಟಿ ರು.ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಪರಿಷತ್ ವರದಿ ನೀಡಿತ್ತು. ಈ ಪ್ರಮಾಣದಲ್ಲಿ ವೆಚ್ಚ ಮಾಡುವ ಮನಸ್ಸು ಸರ್ಕಾರಕ್ಕೆ ಇದ್ದಂತಿಲ್ಲ. ಹೀಗಾಗಿ, ವಿವಿಗಳ ಕಾರ್ಯಕ್ಷಮತೆ ಮತ್ತು ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ಸಮಿತಿ, ‘ಹೊಸ ವಿವಿಗಳು ವೈಜ್ಞಾನಿಕವಾಗಿ ರಚನೆ ಆಗಿಲ್ಲ, ಸಂಪೂರ್ಣ ಹೊರೆ ಸರ್ಕಾರದ ಮೇಲೆಯೇ ಬೀಳುತ್ತದೆ. ಜೊತೆಗೆ, ಮೂಲ ವಿವಿಗಳನ್ನೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿವೆ. ಇದಕ್ಕೆ ಪರಿಹಾರವೆಂದರೆ ಮೂಲ ವಿವಿಗಳೊಂದಿಗೆ ಇವನ್ನು ವಿಲೀನಗೊಳಿಸುವುದು’ ಎಂಬ ಚಿಂತನೆ ಹೊಂದಿತ್ತು.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಗೆ ವರದಿ ಸಲ್ಲಿಸಿದೆ. ಈ ವರದಿ ಆಧಾರದ ಮೇಲೆ ಉಪ ಸಮಿತಿ ತನ್ನ ಶಿಫಾರಸ್ಸುಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಬೇಕಿದೆ. ಉಪ ಸಮಿತಿಯ ಶಿಫಾರಸ್ಸುಗಳ ಬಗ್ಗೆ ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಆಗಬೇಕಿದೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಮಂಡ್ಯ ವಿವಿ:
ಮೈಸೂರು ವಿವಿಯಿಂದ ಬೇರ್ಪಡಿಸಿ ಸ್ಥಾಪಿಸಿದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಮಂಡ್ಯದಲ್ಲಿ ಸ್ವಂತ ಕಟ್ಟಡ, 32 ಎಕರೆ, ತೋಬಿನಕೆರೆ ಬಳಿ 100 ಎಕರೆ ಸೇರಿ 132 ಎಕರೆ ಜಮೀನು, 47 ಕಾಲೇಜುಗಳನ್ನು ನೀಡಲಾಗಿದೆ. ಆದರೆ, ಈ ವಿವಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣವಾಗಿಲ್ಲ. ಸದ್ಯ ವಿವಿಯಲ್ಲಿ 19,600 ವಿದ್ಯಾರ್ಥಿಗಳಿದ್ದಾರೆ. 135 ಅತಿಥಿ ಉಪನ್ಯಾಸಕರು, 75 ಬೋಧಕೇತರ ಸಿಬ್ಬಂದಿ ನೇಮಕ ಆಗಬೇಕಿದೆ. ಐದು ವರ್ಷದಲ್ಲಿ ಕೇವಲ 1 ಕೋಟಿ ರು. ಅನುದಾನ ಬಂದಿದೆ. ವಿವಿಗೆ ಮಾಸಿಕ 25 ಲಕ್ಷ ರು. ನಿರ್ವಹಣಾ ವೆಚ್ಚ ಬೇಕಾಗಿದೆ. ಮೈಸೂರು ವಿವಿಗೆ ಅತಿ ಸಮೀಪದ ವಿವಿ ಇದಾಗಿದೆ.
ಬಾಗಲಕೋಟೆ ವಿವಿ:
ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಿಂದ 73 ಕಾಲೇಜುಗಳನ್ನು ಬೇರ್ಪಡಿಸಿ ಸ್ಥಾಪಿಸಿರುವ ಬಾಗಲಕೋಟೆ ವಿವಿಗೆ ಸ್ವಂತ ಕಟ್ಟಡ, ಸೂಕ್ತ ಸಿಬ್ಬಂದಿಯೂ ಇಲ್ಲ. ಆರ್ಥಿಕ ಸಂಪನ್ಮೂಲವೂ ಇಲ್ಲ. ಜಮಖಂಡಿ ಹಳೆಯ ಮಿನಿ ವಿಧಾನಸೌಧ ಕಟ್ಟಡದಲ್ಲಿಯೇ ಈ ವಿವಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಜಮಖಂಡಿಯಲ್ಲಿ 39 ಎಕರೆ ಜಾಗ ನೀಡಲಾಗಿದೆ. ಒಟ್ಟು 12 ಬೋಧಕ, 52 ಬೋಧಕೇತರ ಹುದ್ದೆ ಮಂಜೂರಾಗಿದ್ದು, ಅದರಲ್ಲಿ 3 ಬೋಧಕ, 15 ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 29 ಸಾವಿರ ವಿದ್ಯಾರ್ಥಿಗಳಿದ್ದು, ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ.
ಕೊಡಗು ವಿವಿ:ಮಂಗಳೂರು ವಿವಿಯಿಂದ 25 ಕಾಲೇಜುಗಳನ್ನು ಪ್ರತ್ಯೇಕಿಸಿ ರಚಿಸಿದ ಕೊಡಗು ವಿಶ್ವವಿದ್ಯಾಲಯ, ಕುಶಾಲನಗರದ ಅಳುವಾರದಲ್ಲಿ ಮೂಲ ವಿವಿಯ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. 100 ಎಕರೆ ಜಾಗ, ಸ್ವಂತ ಕಟ್ಟಡ ನೀಡಲಾಗಿದೆ. ಸೂಕ್ತ ಸಿಬ್ಬಂದಿ ಇಲ್ಲ, ಆರ್ಥಿಕ ಸಂಪನ್ಮೂಲ ಇಲ್ಲ. 2 ವರ್ಷಗಳಿಂದ ಸರ್ಕಾರದಿಂದ ಅನುದಾನ ಇಲ್ಲ. ಬೋಧಕ, ಬೋಧಕೇತರ ಸಿಬ್ಬಂದಿ ಕೊರತೆ ಇದೆ. 5000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.
ನೃಪತುಂಗ ಕ್ಲಸ್ಟರ್ ವಿವಿ:1821ರಲ್ಲಿ ಮೈಸೂರು ಮಹಾರಾಜರು ಆರಂಭಿಸಿದ ಸರ್ಕಾರಿ ವಿಜ್ಞಾನ ಕಾಲೇಜಿಗೆ 2020ರಲ್ಲಿ ನೃಪತುಂಗ ಕ್ಲಸ್ಟರ್ ವಿವಿ ಸ್ಥಾನಮಾನ ನೀಡಲಾಯಿತು. 3.80 ಎಕರೆ ಜಾಗ, ಸ್ವಂತ ಕಟ್ಟಡ. ಅಗತ್ಯ ಖಾಯಂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದಾರೆ. ವಿಜ್ಞಾನ ಶಿಕ್ಷಣಕ್ಕೆ ಹೆಚ್ಚು ಜನಪ್ರಿಯಾಗಿರುವ ಈ ವಿವಿಯಲ್ಲಿ 2,118 ವಿದ್ಯಾರ್ಥಿಗಳಿದ್ದಾರೆ. ವಿವಿಯು ತನ್ನ ನಿರ್ವಹಣೆಗೆ ತಕ್ಕಷ್ಟು ಹಣ ಹೊಂದಿದೆ. ಪಿಎಂ ಉಷಾ ಯೋಜನೆಯಡಿ 55 ಕೋಟಿ ರು. ಅನುದಾನ ಕೂಡ ಬಂದಿದೆ. ಈ ವಿವಿಯ ಕೂಗಳತೆ ದೂರದಲ್ಲೇ ಬೆಂಗಳೂರು ನಗರ ವಿವಿ, ಯುವಿಸಿಇ, ಮಹಾರಾಣಿ ಕ್ಲಸ್ಟರ್ ವಿವಿಗಳಿವೆ.
ಮಹಾರಾಣಿ ಕ್ಲಸ್ಟರ್ ವಿವಿ:
ಮೈಸೂರು ಮಹಾರಾಜರು 1938ರಲ್ಲಿ ಸ್ಥಾಪಿಸಿದ್ದ ಮಹಾರಾಣಿ ಕಾಲೇಜನ್ನು, ಮಹಾರಾಣಿ ಮಹಿಳಾ ವಿಜ್ಞಾನ, ಕಲಾ ಮತ್ತು ಗೃಹವಿಜ್ಞಾನ ಕಾಲೇಜನ್ನು ಸಂಯೋಜಿಸಿ ಮಹಾರಾಣಿ ಕ್ಲಸ್ಟರ್ ವಿವಿ ಸ್ಥಾಪಿಸಲಾಗಿದೆ. 15 ಎಕರೆ ಜಾಗ, ಸ್ವಂತ ಕಟ್ಟಡ, ಸೂಕ್ತ ಸಿಬ್ಬಂದಿ, ತಕ್ಕಷ್ಟು ಆರ್ಥಿಕ ಸಂಪನ್ಮೂಲವೂ ಇದೆ. ಪ್ರಸ್ತುತ 4,500 ವಿದ್ಯಾರ್ಥಿಗಳಿದ್ದಾರೆ. 2024-25ರಲ್ಲಿ ಸರ್ಕಾರ 50 ಲಕ್ಷ ರು. ಅನುದಾನ ಘೋಷಿಸಿತ್ತು. ಈ ಪೈಕಿ 12.5 ಲಕ್ಷ ರು. ವಿವಿಗೆ ಬಂದಿದೆ.
ಕೊಪ್ಪಳ ವಿವಿ:
ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಯಿಂದ 40 ಕಾಲೇಜುಗಳನ್ನು ಬೇರ್ಪಡಿಸಿ ಸ್ಥಾಪಿಸಿದ ಕೊಪ್ಪಳ ವಿವಿಗೆ ಸ್ವಂತ ಕಟ್ಟಡ, ಕೊಪ್ಪಳದಲ್ಲಿ 10 ಎಕರೆ ಜಾಗ ಇದೆ. ಯಲಬುರ್ಗಾದಲ್ಲಿ 10 ಎಕರೆ ಗುರುತಿಸಲಾಗಿದೆ. ಗಂಗಾವತಿಯಲ್ಲಿರುವ ಜಾಗ ಇನ್ನೂ ಮೂಲ ವಿವಿಯಿಂದ ಹಸ್ತಾಂತರ ಆಗಿಲ್ಲ. ಮಂಜೂರಾಗಿರುವ 63 ಹುದ್ದೆಗಳಿಗೆ ನೇಮಕಾತಿ ಆಗಿಲ್ಲ, ಬದಲಿಗೆ ಅತಿಥಿ ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ 15 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸರ್ಕಾರದಿಂದ ಒಂದು ನಯಾಪೈಸೆ ಅನುದಾನ ಬಂದಿಲ್ಲ. ಸಂಯೋಜನಾ ಶುಲ್ಕ, ವಿದ್ಯಾರ್ಥಿಗಳ ಶುಲ್ಕದಲ್ಲಿ ವಿವಿ ಸಾಗುತ್ತಿದೆ.
ಹಾಸನ ವಿವಿ:ಮೈಸೂರು ವಿವಿಯ 70 ಕಾಲೇಜುಗಳನ್ನು ಸೇರಿಸಿ ಮಂಡ್ಯ ವಿವಿಯನ್ನು ರಚಿಸಲಾಗಿದೆ. ಮೈಸೂರು ವಿವಿ ಸ್ನಾತಕೋತ್ತರ ಕೇಂದ್ರವಾಗಿದ್ದ ಹೇಮಗಂಗೋತ್ರಿಯಲ್ಲಿಯೇ ಕಾರ್ಯಾರಂಭಿಸಿದೆ. 70 ಎಕರೆ ಕ್ಯಾಂಪಸ್ ಜಾಗವಿದೆ. ಸ್ವಂತ ಕಟ್ಟಡ, ತಕ್ಕಷ್ಟು ಸಿಬ್ಬಂದಿ ಇದ್ದಾರೆ. 21 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2 ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಹೊಸ ವಿವಿ ಅಸ್ಥಿತ್ವಕ್ಕೆ ಬಂದಾಗ 272 ಹುದ್ದೆಗಳನ್ನು ಸೃಜಿಸಿದ್ದರೂ ನೇಮಕಾತಿ ಆಗಿಲ್ಲ. ಅತಿಥಿ ಸಿಬ್ಬಂದಿಯನ್ನೇ ಅವಲಂಬಿಸಿದೆ.
ಚಾಮರಾಜನಗರ ವಿವಿ:
ಮೈಸೂರು ವಿವಿಯಿಂದ ರಚನೆಯಾದ ಮೂರನೇ ಹೊಸ ವಿವಿ ಇದು. ಮೈಸೂರು ವಿವಿ ಸ್ನಾತಕೋತ್ತರ ವಿಸ್ತರಣಾ ಕೇಂದ್ರದಲ್ಲಿ ಚಾಮರಾಜನಗರ ವಿವಿ ನಡೆಯುತ್ತಿದೆ. ಚಾಮರಾಜನಗರ ತಾಲೂಕಿನಲ್ಲಿ 54 ಎಕರೆ ಜಾಗ, ಸ್ವಂತ ಕಟ್ಟಡ ಇದೆ. ಕೇವಲ 20 ಕಾಲೇಜುಗಳಿದ್ದು ಆರ್ಥಿಕ ಸಂಪನ್ಮೂಲ ಬಹಳ ಕಡಿಮೆ. ವಿವಿಗೆ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. 60 ಬೋಧಕ, 35 ಬೋಧಕೇತರ ಸಿಬ್ಬಂದಿ ಅತಿಥಿ, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹಾವೇರಿ ವಿವಿ:ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಹಾವೇರಿ ಜಿಲ್ಲೆಯ 8 ತಾಲೂಕುಗಳ ವ್ಯಾಪ್ತಿಯ 42 ಕಾಲೇಜುಗಳನ್ನು ಬೇರ್ಪಡಿಸಿ ಹಾವೇರಿ ವಿವಿ ರಚಿಸಲಾಗಿದೆ. ಕರಿ ಕೊತ್ತಿಹಳ್ಳಿ ಪಿಜಿ ಕೇಂದ್ರದಲ್ಲಿ ಹಾವೇರಿ ವಿವಿ ಆರಂಭಿಸಲಾಗಿದೆ. 43 ಎಕರೆ ಜಾಗ, ಸ್ವಂತ ಆಡಳಿತ ಕಟ್ಟಡ, 15 ಸಾವಿರ ವಿದ್ಯಾರ್ಥಿಗಳು ಇದ್ದಾರೆ. 18 ಬೋಧಕ, 20 ಬೋಧಕೇತರ ಸಿಬ್ಬಂದಿ ಮಾತ್ರ ಇದ್ದಾರೆ.
ಒಂಬತ್ತು ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೂ ಮೊದಲು ನಮ್ಮ ಮುಂದೆ ಕೆಲವೊಂದು ಆಯ್ಕೆಗಳಿವೆ. ಯಾವ ವಿವಿಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ಉಳಿಸಿಕೊಂಡು ಬಲಗೊಳಿಸಬಹುದು, ಕಡಿಮೆ ಸಂಯೋಜಿತ ಕಾಲೇಜುಗಳಿರುವ ವಿವಿಗಳನ್ನು ಏನು ಮಾಡಬಹುದು ಎಂಬುದು ಸೇರಿದಂತೆ ಬಹಳಷ್ಟು ಪರ್ಯಾಯ ವಿಚಾರಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಂತಿಮವಾಗಿ ಇದು ಸಚಿವ ಸಂಪುಟದ ಮುಂದೆ ಬಂದು ಮುಖ್ಯಮಂತ್ರಿ ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. -
- ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ.