ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ

KannadaprabhaNewsNetwork | Published : Nov 6, 2024 12:41 AM

ಸಾರಾಂಶ

2004ರಲ್ಲಿ ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್‌ ಯಾದವ್‌ ಸರ್ಕಾರ ಜಾರಿಗೆ ತಂದಿದ್ದ ಮದರಸಾ ಕಾಯ್ದೆ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.

ಪಿಟಿಐ ನವದೆಹಲಿ

2004ರಲ್ಲಿ ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂಸಿಂಗ್‌ ಯಾದವ್‌ ಸರ್ಕಾರ ಜಾರಿಗೆ ತಂದಿದ್ದ ಮದರಸಾ ಕಾಯ್ದೆ ಸಿಂಧುತ್ವವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಈ ಮೂಲಕ ‘ಮದರಸಾ ಕಾಯ್ದೆ ಸಂವಿಧಾನದ ಮೂಲ ಪರಿಕಲ್ಪನೆಯಾದ ಜಾತ್ಯತೀತ ತತ್ವಗಳ ಉಲ್ಲಂಘನೆ ಮಾಡುತ್ತದೆ. ಅದು ಅಸಾಂವಿಧಾನಿಕ’ ಎಂಬ ಅಲಹಾಬಾದ್‌ ಹೈಕೋರ್ಟ್‌ ತೀರ್ಪನ್ನು ವಜಾ ಮಾಡಿದೆ.

ಹೀಗಾಗಿ ಮುಚ್ಚುವ ಭೀತಿಯಲ್ಲಿದ್ದ ಉತ್ತರಪ್ರದೇಶದ 16000 ಮದರಸಾಗಳು ಮತ್ತು ಮದರಸಾಗಳಿಂದ ಸಾಮಾನ್ಯ ಶಿಕ್ಷಣಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಎದುರಿಸುತ್ತಿದ್ದ 17 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.ಮದರಸಾ ಕಾಯ್ದೆ ಕಾನೂನು ಬದ್ಧ- ಸುಪ್ರೀಂ:

ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಮಂಗಳವಾರ ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ, ‘ಯಾವುದೇ ಕಾಯ್ದೆಯನ್ನು, ಅದು ಶಾಸನದ ಬೆಂಬಲ ಹೊಂದಿಲ್ಲವೆಂದಾದಲ್ಲಿ ಮಾತ್ರ ವಜಾಗೊಳಿಸಬಹುದು. ಆದರೆ ಮದರಸಾ ಕಾಯ್ದೆ ಶಾಸನದ ಬೆಂಬಲ ಹೊಂದಿದೆ. ಮದರಸಾಗಳಲ್ಲಿ ಅಧುನಿಕ ಶಿಕ್ಷಣ ಇಲ್ಲ ಅಥವಾ ಐಚ್ಛಿಕ ಎನ್ನಬಹುದಾದರೂ, ಇಡೀ ಕಾಯ್ದೆಯ ಉದ್ದೇಶವೇ ಇಸ್ಲಾಂ ಅನ್ವಯ, ಅದರ ನಿಯಮಗಳ ಅನ್ವಯ, ಅದರ ತತ್ವಗಳ ಅನ್ವಯ ಶಿಕ್ಷಣ ನೀಡುವುದು ಮತ್ತು ಅದನ್ನು ಪ್ರಚುರಪಡಿಸುವುದಾಗಿದೆ. ಜೊತೆಗೆ ಮದರಸಾ ಕಾಯ್ದೆಯು, ಮದ್ರಸಾಗಳ ಮೂಲಕ ಬೋಧಿಸುವ ಶಿಕ್ಷಣವನ್ನು ನಿರ್ದಿಷ್ಟಗೊಳಿಸುವ ಉದ್ದೇಶ ಹೊಂದಿದೆ. ಹೀಗಾಗಿ ಕಾಯ್ದೆಯನ್ನು ಅಸಾಂವಿಧಾನಿಕ ಎನ್ನಲಾಗದು’ ಎಂದು ಸ್ಪಷ್ಟಪಡಿಸಿತು.ಜೊತೆಗೆ, ರಾಜ್ಯ ಸರ್ಕಾರಗಳು ಶಿಕ್ಷಣದ ಗುಣಮಟ್ಟ ನಿಯಂತ್ರಿಸುವ ಅಧಿಕಾರ ಹೊಂದಿದೆ. ಜೊತೆಗೆ ಕಾಯ್ದೆಯು ಮದರಸಾಗಳ ದೈನಂದಿನ ಆಡಳಿತಾತ್ಮಕ ವಿಷಯದಲ್ಲಿ ನೇರವಾಗಿ ಯಾವುದೇ ಹಸ್ತಕ್ಷೇಪ ಹೊಂದಿಲ್ಲ. ಅಲ್ಲದೆ, ಮಕ್ಕಳಿಗೆ ಸೂಕ್ತ ಶಿಕ್ಷಣ ಖಾತರಿಪಡಿಸುವ ರಾಜ್ಯಗಳ ಬಾಧ್ಯತೆಯ ನಿಲುವಿನಂತೆಯೇ ಕಾಯ್ದೆ ರೂಪುಗೊಂಡಿದೆ. ಹೀಗಾಗಿ, ಕೆಲವೊಂದು ಧಾರ್ಮಿಕ ತರಬೇತಿಗಳನ್ನು ಹೊಂದಿದೆ ಎಂಬ ಕಾರಣಕ್ಕೆ ಮದ್ರಸಾ ಕಾಯ್ದೆ ಅಸಾಂವಿಧಾನಿಕ ಆಗುವುದಿಲ್ಲ. ಹೀಗಾಗಿ ಮದರಸಾ ಕಾಯ್ದೆ ತೀರ್ಪು ನೀಡುವಲ್ಲಿ ಅಲಹಾಬಾದ್ ಹೈಕೋರ್ಟ್‌ ತಪ್ಪು ಎಸಗಿದೆ ಎಂದು ಹೇಳಿ ಅದರ ಆದೇಶವನ್ನು ವಜಾ ಮಾಡಿತು.

ಏನಿದು ಪ್ರಕರಣ?:

2004ರಲ್ಲಿ ಅಂದಿನ ಸಮಾಜವಾದಿ ಸರ್ಕಾರ ಮದ್ರಸಾ ಕಾಯ್ದೆ ಮೂಲಕ, ರಾಜ್ಯದಲ್ಲಿ ಮದರಸಾಗಳ ಮೂಲಕ ನೀಡುವ ಶಿಕ್ಷಣಕ್ಕೂ ಶಾಸನಾತ್ಮಕ ಮಾನ್ಯತೆ ನೀಡಿತ್ತು. ಆದರೆ ಇಂಥ ಕಾಯ್ದೆಯು, ಸಂವಿಧಾನದ ಮೂಲ ಪರಿಕಲ್ಪನೆಯಾದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ. ಮದರಸಾಗಳು ಪ್ರತ್ಯೇಕ ಇಲಾಖೆ ಅಡಿ ಬರುತ್ತವೆ. ಶಿಕ್ಷಣ ಇಲಾಖೆಯಡಿ ಬರಲ್ಲ. ಜೊತೆಗೆ 14 ವರ್ಷದದವರೆಗೆ ಕಡ್ಡಾಯ ಶಿಕ್ಷಣ ಕಾಯ್ದೆ ಅನ್ವಯ ನೀಡಬೇಕಾದ ಶಿಕ್ಷಣ ನಿಯಮ ಉಲ್ಲಂಘನೆ ಮಾಡುತ್ತವೆ ಎಂದು ಎಂದು ಅಂಶುಮನ್‌ ಸಿಂಗ್ ಎಂಬುವವರು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಈ ಕಾಯ್ದೆ ಅಸಾಂವಿಧಾನಿಕ. ಇದು ಜಾತ್ಯತೀತ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಕಳೆದ ಮಾ.22ರಂದು ತೀರ್ಪು ನೀಡಿತ್ತು. ಜೊತೆಗೆ ಕಾಯ್ದೆಯನ್ನು ವಜಾ ಮಾಡಿ, ರಾಜ್ಯದ ಎಲ್ಲಾ ನೊಂದಾಯಿತ 16000 ಮದರಸಾಗಳನ್ನು ಮುಚ್ಚಿ, ಅದರಲ್ಲಿನ 17 ಲಕ್ಷ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಿಗೆ ಸೇರ್ಪಡೆ ಮಾಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

Share this article