ಪಹಲ್ಗಾಂ ದಾಳಿಯ ಪೂರ್ಣ ಘಟನೆ ವಿಡಿಯೋದಲ್ಲಿ ಸೆರೆ

KannadaprabhaNewsNetwork |  
Published : Apr 28, 2025, 12:50 AM ISTUpdated : Apr 28, 2025, 07:44 AM IST
ಪಾಕ್ | Kannada Prabha

ಸಾರಾಂಶ

ಬೈಸರನ್‌ನಲ್ಲಿ 26 ಪ್ರವಾಸಿಗರ ಹತ್ಯೆಗೈದ  ಘಟನೆ ಸ್ಥಳೀಯ ಫೋಟೋಗ್ರಾಫರ್‌ ಕ್ಯಾಮೆರಾದಲ್ಲಿ ಸೆರೆ

ಶ್ರೀನಗರ: ಬೈಸರನ್‌ನಲ್ಲಿ 26 ಪ್ರವಾಸಿಗರ ಹತ್ಯೆಗೈದ ಉಗ್ರರ ಕೃತ್ಯದ ಒಂದು ಸಣ್ಣ ಅಸ್ಪಷ್ಟ ವಿಡಿಯೋವೊಂದು ಸೆರೆಸಿಕ್ಕಿದ್ದು ಬಿಟ್ಟಿರೆ ಇದುವರೆಗೂ ಘಟನೆಯ ಕುರಿತು ಸ್ಪಷ್ಟ ಫೋಟೋ ಅಥವಾ ವಿಡಿಯೋ ಎಲ್ಲೂ ಕಂಡುಬಂದಿರಲಿಲ್ಲ. ಆದರೆ ಸ್ಥಳೀಯ ಫೋಟೋಗ್ರಾಫರ್ ಒಬ್ಬ ಇಡೀ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಘಟನೆ ನಡೆದಾಗ ಸ್ಥಳೀಯರ ಫೋಟೋ ಮತ್ತು ವಿಡಿಯೋಗಳನ್ನು ಈ ಫೋಟೋಗ್ರಾಫರ್‌ ಸೆರೆಹಿಡಿಯುತ್ತಿದ್ದ. ಈ ವೇಳೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಗಾಬರಿಗೊಂಡ ಆತ ಓಡಿ ಹೋಗಿ ಸಮೀಪದ ಮರವೊಂದನ್ನು ಹತ್ತಿ ಉಗ್ರರಿಗೆ ಕಾಣದಂತೆ ಕುಳಿತಿದ್ದಾನೆ. ಅಲ್ಲಿಂದಲೇ ದಾಳಿಯ ಎಲ್ಲಾ ದೃಶ್ಯಗಳನ್ನು ಸೆರೆಹಿಡಿದಿದ್ದಾನೆ. ಈ ವಿಡಿಯೋ ಇಡೀ ಪ್ರಕರಣದ ಮೇಲೆ ಬೆಳಕು ಚೆಲ್ಲಿದೆ ಮತ್ತು ಉಗ್ರರ ಪತ್ತೆಗೆ ತನಿಖಾ ಸಂಸ್ಥೆಗಳಿಗೆ ಅತ್ಯಂತ ನಿಖರ ಸಾಕ್ಷ್ಯವಾಗಿ ಹೊರಹೊಮ್ಮಿದೆ ಎಂದು ಮೂಲಗಳು ತಿಳಿಸಿವೆ.

ಇದು, ಉಗ್ರದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ದ ಪಾಲಿಗೆ ಪ್ರಮುಖ ಸಾಕ್ಷಿಯಾಗಿದೆ. ವೀಡಿಯೋಗ್ರಾಫರ್‌ನನ್ನು ತನಿಖೆಗೆ ಒಳಪಡಿಸಿದ ಎನ್‌ಐಎ ತಂಡ, ಉಗ್ರರನ್ನು ಗುರುತಿಸಲು ವೀಡಿಯೋವನ್ನು ಪರಿಶೀಲಿಸುತ್ತಿದೆ.

ಪಹಲ್ಗಾಂ ದಾಳಿಗೂ ಮುನ್ನ ಪಾಕ್‌ನಿಂದ 22 ಗಂಟೆ ನಡೆದು ಬಂದಿದ್ದ ಉಗ್ರರು!

ಶ್ರೀನಗರ: ಏ.22ರಂದು ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸುವ ಮುನ್ನ ಸತತ 22 ತಾಸುಗಳ ಕಾಲ ನಡೆದುಕೊಂಡು ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ದಾಳಿಗೂ ಮುನ್ನ ಉಗ್ರರು ಕೋಕರ್‌ನಾಗ್‌ನಿಂದ 20-22 ತಾಸುಗಳ ಕಾಲ ಕೋಕರ್‌ನಾಗ್‌ನಿಂದ ದಟ್ಟ ಅರಣ್ಯದ ಮೂಲಕ ಬಂದಿದ್ದರು. ನಾಲ್ವರು ಈ ಮಾರ್ಗವಾಗಿ ಬಂದಿದ್ದು, ಅದರಲ್ಲಿ ಮೂರ್ವರು ಪಾಕಿಸ್ತಾನಿಯರು ಮತ್ತು ಓರ್ವ ಸ್ಥಳೀಯ ಉಗ್ರನಿದ್ದ ಎನ್ನಲಾಗಿದೆ. ದಾಳಿ ಮಾಡಿದ ಬಳಿಕ ಓರ್ವ ಸ್ಥಳೀಯ ಮತ್ತು ಓರ್ವ ಪ್ರವಾಸಿಗನ ಫೋನ್‌ಗಳನ್ನು ಉಗ್ರರು ವಶಪಡಿಸಿಕೊಂಡಿದ್ದರು. ವಿಧಿವಿಜ್ಞಾನ ಪರೀಕ್ಷೆ ವೇಳೆ ದಾಳಿಯಲ್ಲಿ ಉಗ್ರರು ಎಕೆ 47 ಮತ್ತು ಎಂ4 ರೈಫಲ್‌ಗಳನ್ನು ಬಳಸಿರುವುದು ಖಾತ್ರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ, ಚೀನಾ ನೇತೃತ್ವದಲ್ಲಿ ಹತ್ಯೆ ತನಿಖೆಗೆ ಪಾಕ್‌ ಒಲವು

ಮಾಸ್ಕೋ: ಪಹಲ್ಗಾಂ ಉಗ್ರದಾಳಿಯಲ್ಲಿ ತಮ್ಮ ಕೈವಾಡವಿರುವುದನ್ನು ತಳ್ಳಿಹಾಕಿ, ಆ ಕುರಿತ ತಟಸ್ಥ ದೇಶಗಳಿಂದ ಸ್ವತಂತ್ರ ತನಿಖೆಗೆ ಒಲವು ವ್ಯಕ್ತಪಡಿಸಿದ್ದ ಪಾಕಿಸ್ತಾನ, ಇಂಥ ತನಿಖೆಗೆ ರಷ್ಯಾ ಮತ್ತು ಚೀನಾ ಸೂಕ್ತ ಎಂದು ಬಯಿಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ರಷ್ಯಾ ಸರ್ಕಾರದ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸಿಫ್‌, ‘ರಷ್ಯಾ, ಚೀನಾ ಅಥವಾ ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳು ಪಹಲ್ಗಾಂ ದಾಳಿಯ ತನಿಖೆ ನಡೆಸಲು ತಂಡ ರಚಿಸಿ, ಭಾರತ ಮತ್ತು ಮೋದಿ ಹೇಳುತ್ತಿರುವುದು ಸತ್ಯವೇ, ಸುಳ್ಳೇ ಎಂಬುದನ್ನು ಪತ್ತೆಮಾಡಬಹುದು. ಪ್ರಧಾನಿ ಶಹಬಾಜ್‌ ಶರೀಫ್‌ ಕೂಡ ಅಂತಾರಾಷ್ಟ್ರೀಯ ತನಿಖೆಯ ಬಗ್ಗೆ ಪ್ರಸ್ತಾಪಿಸಿದ್ದರು’ ಎಂದು ಹೇಳಿದ್ದಾರೆ.

ಪಹಲ್ಗಾಂ ದಾಳಿ ತನಿಖೆ ಎನ್‌ಐಎ ತೆಕ್ಕೆಗೆ

ನವದೆಹಲಿ: 26 ಮಂದಿಯನ್ನು ಬಲಿಪಡೆದ ಪಹಲ್ಗಾಂ ಉಗ್ರ ದಾಳಿಯ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ತೆಕ್ಕೆಗೆ ತೆಗದುಕೊಂಡಿದೆ.ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಎನ್‌ಐಎ, ‘ಈಗಾಗಲೇ ನಾವು ತನಿಖೆಯನ್ನು ಆರಂಭಿಸಿದ್ದೇವೆ. ಕಳೆದ ಮಂಗಳವಾರ ಬೈಸರನ್‌ನಲ್ಲಿ ಘಟನೆ ನಡೆದ ಹೊತ್ತಿನಲ್ಲಿದ್ದ ಅಲ್ಲಿ ಇದ್ದ ವ್ಯಕ್ತಿಗಳಿಂದ ಸಣ್ಣಸಣ್ಣ ಮಾಹಿತಿಯನ್ನು ಕಲೆ ಹಾಕುವ ಯತ್ನ ಮಾಡುತ್ತಿದ್ದೇವೆ. ಈ ಮೂಲಕ ದಾಳಿಕೋರರ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದೆ.

‘ದಾಳಿಯ ಪ್ರತ್ಯಕ್ಷದರ್ಶಿಗಳನ್ನು ಪೊಲೀಸ್ ಮಹಾನಿರ್ದೇಶಕ (ಐಜಿಪಿ), ಉಪಪೊಲೀಸ್ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಭಯೋತ್ಪಾದನಾ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ)ಯ ಮೇಲ್ವಿಚಾರಣೆಯಲ್ಲಿ ಎನ್‌ಐಎ ತಂಡಗಳು ವಿಚಾರಿಸುತ್ತಿವೆ. ವಿಧಿವಿಜ್ಞಾನ ಮತ್ತು ಇತರ ತಜ್ಞರ ನೆರವಿನೊಂದಿಗೆ ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಉಗ್ರರ ಪತ್ತೆಗಾಗಿ ಸಾಕ್ಷ್ಯಗಳ ಹುಡುಕಾಟವನ್ನು ತೀವ್ರಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ