ಮುಡಾ ಹಗರಣ : ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು ಭವಿಷ್ಯ ಇಂದು ಕೋರ್ಟ್‌ನಲ್ಲಿ ನಿರ್ಧಾರ

KannadaprabhaNewsNetwork |  
Published : Aug 13, 2024, 12:49 AM ISTUpdated : Aug 13, 2024, 08:25 AM IST
Siddaramaiah

ಸಾರಾಂಶ

ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತ ಆದೇಶವನ್ನು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.

  ಬೆಂಗಳೂರು :  ಮುಡಾ ಹಗರಣ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾದ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತ ಆದೇಶವನ್ನು ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ.

ನ್ಯಾಯಾಲಯದ ಈ ಆದೇಶ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ಇನ್ನು, ನ್ಯಾಯಾಲಯ ನೀಡುವ ಆದೇಶವನ್ನು ನೋಡಿಕೊಂಡು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿರುವ ದೂರನ್ನು ಪರಿಗಣಿಸಿ ಅಭಿಯೋಜನೆಗೆ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯಪಾಲರು ನಿರ್ಧರಿಸುವ ಸಾಧ್ಯತೆಯಿದೆ. ಹೀಗಾಗಿ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದತ್ತ ಎಲ್ಲರ ಚಿತ್ತ ಇದೆ.

ಕಳೆದ ವಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರುದಾರರ ಪರವಾಗಿ ವಕೀಲರಾದ ಲಕ್ಷ್ಮೀ ಐಯ್ಯಂಗಾರ್ ವಾದ ಮಂಡಿಸಿದ್ದರು. ಮುಡಾ ಹಗರಣದ ವಿಚಾರದಲ್ಲಿ ತಕ್ಷಣಕ್ಕೆ ಅಭಿಯೋಜನೆಯ ಅಗತ್ಯ ಇಲ್ಲ. ಅದು ಇಲ್ಲದೆಯೇ ಪ್ರಕರಣವನ್ನು ವಿಚಾರಣೆಗೊಳಪಡಿಸಬಹುದು ಎಂದು ವಾದ ಮಂಡಿಸಿ, ಅಯ್ಯಪ್ಪ ಮತ್ತು ಮಂಜು ಸುರಾನಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿದ್ದರು. ಅಲ್ಲದೇ, ಪ್ರಕರಣ ದಾಖಲಿಸಿ ವಿಚಾರಣೆ ಆರಂಭಗೊಂಡರೆ ವಿಚಾರಣಾಧಿಕಾರಿಗೆ ಯಾವುದೇ ಅನುಮಾನಗಳಿದ್ದರೆ, ವಿಶೇಷ ನ್ಯಾಯಾಲಯದ ಸಲಹೆ ಪಡೆದು ಮುಂದುವರಿಯಲು ಅವಕಾಶ ಇದೆ ಎಂದು ವಾದಿಸಿದ್ದರು.

ಲಕ್ಷ್ಮೀ ಐಯ್ಯಂಗಾರ್‌ ವಾದವನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರಕ್ಕೆ ಆದೇಶವನ್ನು ಕಾಯ್ದಿರಿಸಿದೆ. ಒಂದು ವೇಳೆ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದರೆ ಸಿದ್ದರಾಮಯ್ಯ ಕಾನೂನಿನ ಸಂಕಷ್ಟ ಎದುರಿಸಬೇಕಾಗುತ್ತದೆ. ಇದು ಅವರ ರಾಜಕೀಯ ಜೀವನಕ್ಕೆ ಕಂಟಕವಾಗಬಹುದು. ನ್ಯಾಯಾಲಯದ ಆದೇಶವನ್ನು ಗಮನಿಸಿದ ಬಳಿಕ ರಾಜ್ಯಪಾಲರ ಬಳಿ ಅಭಿಯೋಜನೆಗೆ ಬಾಕಿ ಇರುವ ಅರ್ಜಿಗೆ ಮುಕ್ತಿ ಸಿಗುವ ಸಾಧ್ಯತೆ ಇದೆ. ರಾಜ್ಯಪಾಲರು ಈಗಾಗಲೇ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರನ್ನು ಕರೆಸಿಕೊಂಡು ಸುದೀರ್ಘವಾಗಿ ಚರ್ಚಿಸಿದ್ದಾರೆ. ಅಲ್ಲದೇ, ಹಲವು ಅನುಮಾನಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಮತ್ತು ಮಾಹಿತಿಗಳನ್ನು ಕ್ರೋಢೀಕರಿಸಿದ್ದಾರೆ. ನ್ಯಾಯಾಲಯದಲ್ಲಿನ ಬೆಳವಣಿಗೆಗಳನ್ನು ಗಮನಿಸಿ ರಾಜ್ಯಪಾಲರು ಮುಂದಿನ ಹೆಜ್ಜೆ ಇಡುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!