ಇಂದು ಭಾರತ vs ಪಾಕ್‌ ಹೈವೋಲ್ಟೇಜ್‌ ಫೈನಲ್‌!

KannadaprabhaNewsNetwork |  
Published : Sep 28, 2025, 02:00 AM IST
ಭಾರತ-  ಪಾಕ್  | Kannada Prabha

ಸಾರಾಂಶ

ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಕಳೆದ 2 ವಾರಗಳಲ್ಲಿ ಸಾಧಿಸಿರುವ 2 ಗೆಲುವುಗಳಂತೆಯೇ ಮತ್ತೊಂದು ಜಯ ಸಾಧಿಸಿ ಟೂರ್ನಿಯಲ್ಲಿ ಪಾಕ್‌ ವಿರುದ್ಧದ ತನ್ನೆಲ್ಲಾ ನಡೆಗಳನ್ನು ಸಮರ್ಥಿಸಿಕೊಳ್ಳಲು ಕಾತರಿಸುತ್ತಿದೆ.

ದುಬೈ: ಕ್ರೀಡೆಯಲ್ಲಿ ಗೆಲ್ಲುವುದೇ ಎಲ್ಲಾ ಅಲ್ಲ. ಆದರೆ ಭಾನುವಾರ ಮೈದಾನಕ್ಕಿಳಿಯಲಿರುವ 11 ಮಂದಿ ಭಾರತೀಯ ಕ್ರಿಕೆಟಿಗರ ಮನಸಲ್ಲಿ ಗೆಲ್ಲುವುದನ್ನು ಹೊರತುಪಡಿಸಿ ಇನ್ಯಾವ ಯೋಚನೆಯೂ ಇರಲು ಸಾಧ್ಯವಿಲ್ಲ. ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಇಷ್ಟು ದಿನದ್ದು ಒಂದು ಲೆಕ್ಕವಾದರೆ, ಇವತ್ತಿನದ್ದು ಬೇರೆಯದ್ದೇ ಲೆಕ್ಕ. ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಕಳೆದ 2 ವಾರಗಳಲ್ಲಿ ಸಾಧಿಸಿರುವ 2 ಗೆಲುವುಗಳಂತೆಯೇ ಮತ್ತೊಂದು ಜಯ ಸಾಧಿಸಿ ಟೂರ್ನಿಯಲ್ಲಿ ಪಾಕ್‌ ವಿರುದ್ಧದ ತನ್ನೆಲ್ಲಾ ನಡೆಗಳನ್ನು ಸಮರ್ಥಿಸಿಕೊಳ್ಳಲು ಕಾತರಿಸುತ್ತಿದೆ.

ಗುಂಪು ಹಂತದಲ್ಲಿ ‘ನೋ ಹ್ಯಾಂಡ್‌ ಶೇಕ್‌’ನಿಂದ ಆರಂಭಗೊಂಡ ಪಾಕ್‌ ವಿರುದ್ಧದ ಸಮರ, ಬಹಿರಂಗವಾಗಿ ಆ ದೇಶದ ಉಗ್ರವಾದವನ್ನು ಖಂಡಿಸುವುದು, ಪಾಕ್‌ ನಮಗೆ ಪ್ರತಿಸ್ಪರ್ಧಿಯೇ ಅಲ್ಲ ಎನ್ನುವ ದಿಟ್ಟ ಹೇಳಿಕೆ ಹೀಗೆ ಹಲವು ಮಜಲುಗಳನ್ನು ಕಂಡಿದೆ. ಆದರೆ ಫೈನಲ್‌ನಲ್ಲಿ ಗೆಲ್ಲದಿದ್ದರೆ ಇದ್ಯಾವುದೂ ಲೆಕ್ಕಕ್ಕೆ ಬರಲ್ಲ ಎನ್ನುವ ಸತ್ಯ ಭಾರತೀಯ ಆಟಗಾರರಿಗೆ ಗೊತ್ತಿದೆ. ಹೀಗಾಗಿ, ತಮ್ಮೆಲ್ಲಾ ಕೌಶಲ್ಯ, ಸಾಮರ್ಥ್ಯವನ್ನು ಬಳಸಿ ಪಾಕಿಸ್ತಾನವನ್ನು ಮತ್ತೊಮ್ಮೆ ಹೊಸಕಿ ಹಾಕಲು ಸೂರ್ಯಕುಮಾರ್‌ ಪಡೆ ಕಾತರಿಸುತ್ತಿದೆ.

ಮತ್ತೊಂದೆಡೆ ಪಾಕಿಸ್ತಾನ ಕೂಡ ಭಾರತಕ್ಕೆ ದಿಟ್ಟ ಉತ್ತರ ನೀಡಲು ಕಾತರಿಸುತ್ತಿದೆ. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಸುಧಾರಿತ ಆಟವಾಡಿದೆ. ಹೀಗಾಗಿ ಫೈನಲ್‌ನಲ್ಲಿ ತಂಡದಿಂದ ಕಠಿಣ ಪೈಪೋಟಿ ಎದುರಾದರೆ ಸೂರ್ಯಕುಮಾರ್‌ ಪಡೆ ಅಚ್ಚರಿಗೊಳ್ಳಬೇಕಿಲ್ಲ.

ಪಾಂಡ್ಯ ಅಲಭ್ಯ?: ದುಬೈನ ಧಗೆಯಿಂದ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಫೈನಲ್‌ಗೆ ಅಲಭ್ಯರಾಗುವ ಆತಂಕವಿದೆ. ಅವರ ಲಭ್ಯತೆ ಬಗ್ಗೆ ಪಂದ್ಯದ ದಿನ ಬೆಳಗ್ಗೆ ನಿರ್ಧರಿಸುವುದಾಗಿ ಬೌಲಿಂಗ್‌ ಕೋಚ್‌ ಮಾರ್ಕೆಲ್‌ ಹೇಳಿದ್ದಾರೆ. ಒಂದು ವೇಳೆ ಪಾಂಡ್ಯ ಹೊರಬಿದ್ದರೆ ಅರ್ಶ್‌ದೀಪ್‌ ಹೆಗಲಿಗೆ ಬೌಲಿಂಗ್‌ ಜವಾಬ್ದಾರಿ ಬೀಳಲಿದೆ. ಆದರೆ ಬ್ಯಾಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ತುಸು ಹಿನ್ನಡೆ ಆಗಬಹುದು. ಕುಲ್ದೀಪ್‌ ಹಾಗೂ ವರುಣ್‌ ರನ್‌ ನೀಡುವುದರಲ್ಲಿ ಎಷ್ಟು ಕಂಜೂಸುತನ ಮಾಡುತ್ತಾರೋ ಭಾರತಕ್ಕೆ ಅಷ್ಟು ಲಾಭ. ಜಸ್‌ಪ್ರೀತ್‌ ಬೂಮ್ರಾ ಪವರ್‌-ಪ್ಲೇನಲ್ಲಿ ಎಸೆಯುವ 3, ಡೆತ್‌ ಓವರ್ಸ್‌ನಲ್ಲಿ ಎಸೆಯುವ 1 ಓವರ್‌ ಪಂದ್ಯದ ಫಲಿತಾಂಶದ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ. 

ಪಂದ್ಯ ಆರಂಭ: ರಾತ್ರಿ 8ಕ್ಕೆ, 

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌/ಸೋನಿ ಲಿವ್‌  

ಅಭಿ vs ಶಾಹೀನ್‌

ರೌಂಡ್‌ 3 ಜಿದ್ದಾಜಿದ್ದಿ!

ಭಾರತ ತನ್ನ ಆರಂಭಿಕ ಅಭಿಷೇಕ್‌ ಶರ್ಮಾ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. 6 ಇನ್ನಿಂಗ್ಸಲ್ಲಿ ಅಭಿಷೇಕ್‌ 309 ರನ್‌ ಕಲೆಹಾಕಿದ್ದಾರೆ. ತಂಡದ ಪರ 2ನೇ ಗರಿಷ್ಠ ರನ್‌ ಸರದಾರ ತಿಲಕ್‌ ಗಳಿಸಿರುವುದು 144 ರನ್‌. ಈ ಅಂತರವೇ ಅಭಿಷೇಕ್‌ರ ಕೊಡುಗೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ. ಪಾಕ್‌ನ ಮುಂಚೂಣಿ ವೇಗಿ ಶಾಹೀನ್‌ ಅಫ್ರಿದಿ ವಿರುದ್ಧ ಅಭಿ ಕಳೆದೆರಡು ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ. ಶಾಹೀನ್‌ರಿಂದ ಎದುರಿಸಿದ 14 ಎಸೆತದಲ್ಲಿ 31 ರನ್‌ ಚಚ್ಚಿದ್ದಾರೆ. ಇಬ್ಬರ ನಡುವಿನ ಜಿದ್ದಾಜಿದ್ದಿಯ 3ನೇ ಸುತ್ತು ಎರಡೂ ತಂಡಗಳಿಗೆ ನಿರ್ಣಾಯಕ.

 ಭಾರತಕ್ಕೆ ಕ್ಯಾಚಿಂಗ್,

ಸೂರ್ಯರ ಲಯದ್ದೇ ಚಿಂತೆ!

ಅಭಿಷೇಕ್‌ರ ಅಬ್ಬರ, ಕುಲ್ದೀಪ್‌ರ ಅಮೋಘ ಬೌಲಿಂಗ್‌ (13 ವಿಕೆಟ್‌) ಟೂರ್ನಿಯಲ್ಲಿ ಭಾರತವನ್ನು ಅಜೇಯವಾಗಿರಿಸಿದೆ. ಭಾರತ ಆಡಿರುವ ಆರೂ ಪಂದ್ಯ ಗೆದ್ದಿದೆ ಎಂದ ಮಾತ್ರಕ್ಕೆ ತಂಡದಲ್ಲಿ ಸಮಸ್ಯೆ ಇಲ್ಲ ಅಂತೇನೂ ಇಲ್ಲ. ಟೂರ್ನಿಯಲ್ಲಿ ಭಾರತ 20 ಕ್ಯಾಚ್‌ ಕೈಚೆಲ್ಲಿದೆ. ನಾಯಕ ಸೂರ್ಯ 6 ಇನ್ನಿಂಗ್ಸಲ್ಲಿ ಗಳಿಸಿರುವುದು 71 ರನ್‌. ಎರಡೂ ಸಮಸ್ಯೆಗೆ ಭಾರತ ಪರಿಹಾರ ಕಂಡುಕೊಳ್ಳಬೇಕಿದೆ.

 ಭಾರತಕ್ಕೆ 9ನೇ, ಪಾಕ್‌ಗೆ

3ನೇ ಟ್ರೋಫಿ ಜಯದ ಗುರಿ

1984ರಲ್ಲಿ ಆರಂಭಗೊಂಡ ಏಷ್ಯಾಕಪ್‌ನಲ್ಲಿ ಇದು 17ನೇ ಆವೃತ್ತಿ. ಹಿಂದಿನ 16 ಆವೃತ್ತಿಗಳಲ್ಲಿ ಭಾರತ 8 ಬಾರಿ, ಪಾಕಿಸ್ತಾನ 2 ಬಾರಿ ಚಾಂಪಿಯನ್‌ ಆಗಿವೆ. ಎರಡೂ ತಂಡಗಳು ಮತ್ತೊಮ್ಮೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿವೆ.

PREV
Read more Articles on

Recommended Stories

ವಿಜಯ್‌ ರ್‍ಯಾಲಿ ವೇಳೆ ಕಾಲ್ತುಳಿತಕ್ಕೆ 36 ಬಲಿ
ಅಮೆರಿಕದಲ್ಲಿ ಕನ್ನಡಿಗ ದಿ.ಚಂದ್ರಮೌಳಿ ಕುಟುಂಬಕ್ಕೆ 4 ಕೋಟಿ ರು. ನೆರವು