ರಾಜ್ಯಪಾಲರು-ಸರ್ಕಾರದ ಗುದ್ದಾಟ ಮತ್ತೊಂದು ಹಂತಕ್ಕೆ - ಗೌರ್‍ನರ್‌ ಪತ್ರಾಸ್ತ್ರಕ್ಕೆ ಸರ್ಕಾರದ ಪ್ರತ್ಯಸ್ತ್ರ!

KannadaprabhaNewsNetwork |  
Published : Sep 27, 2024, 01:20 AM ISTUpdated : Sep 27, 2024, 06:41 AM IST
ವಿಧಾನಸೌಧ | Kannada Prabha

ಸಾರಾಂಶ

ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಗುದ್ದಾಟ ಮತ್ತಷ್ಟು ಉಲ್ಬಣಗೊಂಡಿದ್ದು, ಸಚಿವ ಸಂಪುಟದ ಅನುಮತಿಯಿಲ್ಲದೆ ಯಾವುದೇ ಮಾಹಿತಿಯನ್ನು ರಾಜ್ಯಪಾಲರಿಗೆ ನೀಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯಪಾಲರಿಗೆ ನೇರವಾಗಿ ಮಾಹಿತಿ ನೀಡುವುದನ್ನು ನಿರ್ಬಂಧಿಸಲಾಗಿದೆ.

 ಬೆಂಗಳೂರು : ‘ರಾಜ್ಯಪಾಲರು ಅಥವಾ ರಾಜ್ಯಪಾಲರ ಸಚಿವಾಲಯವು ಸರ್ಕಾರದಿಂದ ವಿವರಣೆ, ವರದಿ ಸೇರಿದಂತೆ ಯಾವುದೇ ಮಾಹಿತಿ ಕೇಳಿದರೂ ಅಧಿಕಾರಿಗಳು ನೇರವಾಗಿ ನೀಡುವಂತಿಲ್ಲ. ಸಚಿವ ಸಂಪುಟ ಸಭೆಯು ಪರಿಶೀಲಿಸಿ ಅನುಮತಿಸಿದ ಮಾಹಿತಿಯನ್ನು ಮಾತ್ರ ರಾಜ್ಯಪಾಲರಿಗೆ ನೀಡಬೇಕು’ ಎಂದು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ತನ್ಮೂಲಕ ತಕ್ಷಣದಿಂದ ಜಾರಿಯಾಗುವಂತೆ ಯಾವುದೇ ಮಾಹಿತಿಯನ್ನೂ ಸಚಿವ ಸಂಪುಟ ಸಭೆ ಮುಂದೆ ಮಂಡಿಸದೆ ನೇರವಾಗಿ ರಾಜ್ಯಪಾಲರಿಗೆ ನೀಡುವಂತಿಲ್ಲ. ಈವರೆಗೆ ರಾಜ್ಯಪಾಲರು ಬರೆದಿರುವ ಪತ್ರಗಳಿಗೂ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಿ ಸಭೆ ಅನುಮತಿಸಿದರೆ ಮಾತ್ರ ಮಾಹಿತಿ ಅಥವಾ ವಿವರಣೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ತನ್ಮೂಲಕ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ನಡೆಯುತ್ತಿದ್ದ ಗುದ್ದಾಟ ಮತ್ತೊಂದು ಹಂತಕ್ಕೆ ತಲುಪಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ‘ಎಚ್.ಡಿ.ಕುಮಾರಸ್ವಾಮಿ ಮತ್ತಿತರರ ವಿರುದ್ಧದ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವ ಕಡತಗಳು ಎಂಟು ತಿಂಗಳಿಂದ ಕಾನೂನು ಬಾಹಿರವಾಗಿ ರಾಜಭವನದಲ್ಲೇ ಇವೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದಾಗ ಈ ಮಾಹಿತಿ ಸೋರಿಕೆ ಹೇಗೆ ಆಯಿತು ಎಂದು ಸರ್ಕಾರಕ್ಕೆ ವಿವರಣೆ ಕೋರಿದ್ದಾರೆ. 

ತನಿಖೆಯಲ್ಲಿ ರಾಜಭವನದ ಸಚಿವಾಲಯದಲ್ಲೇ ಎಂಟು ತಿಂಗಳಿಂದ ಕಡತಗಳು ಇರುವುದು ಹಾಗೂ ರಾಜಭವನದ ಸಚಿವಾಲಯದಿಂದಲೇ ಸೋರಿಕೆಯಾಗಿರುವುದು ಬಯಲಾಗಿದೆ. ಹೀಗಿದ್ದರೂ ಸರ್ಕಾರ, ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಗೂಬೆ ಕೂರಿಸಲು ಯತ್ನಿಸಿದ್ದರು’ ಎಂದು ಕಿಡಿಕಾರಿದ್ದಾರೆ.ಇಂತಹ ಕಾರಣಗಳಿಗಾಗಿಯೇ ಸಚಿವ ಸಂಪುಟ ಈ ನಿರ್ಧಾರ ಮಾಡಿದೆ. ರಾಜ್ಯಪಾಲರು ಮೇಲಿಂದ ಮೇಲೆ ಒಂದು ರೀತಿಯಲ್ಲಿ ಅಸಹನೆಯ ವರ್ತನೆ ತೋರಿ ಪತ್ರ ಬರೆಯುತ್ತಿದ್ದಾರೆ. 

ಮಾಹಿತಿಗಳನ್ನು ತಕ್ಷಣವೇ ಕಳುಹಿಸಬೇಕು, ಶೀಘ್ರ ಕಳುಹಿಸಬೇಕು ಎಂದೆಲ್ಲಾ ಸೂಚನೆ ನೀಡುತ್ತಿದ್ದಾರೆ. ಜತೆಗೆ ವಿನಾಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹೀಗಾಗಿ ರಾಜಭವನಕ್ಕೆ ಯಾವುದೇ ಮಾಹಿತಿ ನೀಡಬೇಕಿದ್ದರೂ ಸಚಿವ ಸಂಪುಟ ಸಭೆಯ ಗಮನಕ್ಕೆ ತರುವುದು ಕಡ್ಡಾಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಅನಿವಾರ್ಯವಿದ್ದರೆ ಮಾತ್ರ ಮಾಹಿತಿ:

ರಾಜಭವನ ಹಾಗೂ ಸರ್ಕಾರದ ನಡುವಿನ ಯಾವುದೇ ಪತ್ರ ವ್ಯವಹಾರಕ್ಕೂ ಇದೇ ನಿಯಮ ಅನ್ವಯ. ಈಗಾಗಲೇ ಅವರು ಬರೆದಿರುವ ಪತ್ರಗಳಿಗೆ ಉತ್ತರ ನೀಡದಿದ್ದರೆ ಅಂತಹವುಗಳನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅಧಿಕಾರಿಗಳು ಅನುಮತಿ ಪಡೆಯಬೇಕು. ಮಾಹಿತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಸಂಪುಟ ನಿರ್ಧಾರ ಮಾಡಲಿದೆ. ಅನಿವಾರ್ಯವಾಗಿದ್ದರೆ ಮಾತ್ರ ಮಾಹಿತಿ ನೀಡುತ್ತೇವೆ ಎಂದರು.

ಸಚಿವ ಸಂಪುಟ ಸಭೆಯು ನನಗೆ ಯಾವುದೇ ಸಲಹೆ ನೀಡಿಲ್ಲ ಎಂಬ ರಾಜ್ಯಪಾಲರ ಹೇಳಿಕೆಗೆ, ಎತ್ತರದ ಅಧಿಕಾರದಲ್ಲಿ ಇರುವವರಿಗೆ ಯಾವ ಭಾಷೆಯ ಮೂಲಕ ಬರೆಯಬೇಕಿತ್ತೋ ಆ ರೀತಿ ಬರೆದಿದ್ದೀವೆ. ಅವರು ಸಲಹೆ ನೀಡಿಲ್ಲ ಎಂದರೆ ನಾವು ಏನೂ ಹೇಳಲಾಗಲ್ಲ ಎಂದು ಸೂಚ್ಯವಾಗಿ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ