ಮೇಕೆದಾಟಿಗೆ ಅವಕಾಶವಿಲ್ಲ: ಡಿಕೆಶಿ ಭೇಟಿ ಬೆನ್ನಲ್ಲೇ ತಮಿಳ್ನಾಡು ಗುನ್ನ - ಹೋರಾಟ ಬೆಂಬಲಿಸಿದ್ದಕ್ಕೆ ಶಾಕ್‌

ಸಾರಾಂಶ

ತಮಿಳುನಾಡು ಸರ್ಕಾರ, ‘ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಅಗತ್ಯ ಕ್ರಮಗಳನ್ನು ಹಾಗೂ ಕಾನೂನು ಹೋರಾಟ ನಡೆಸುತ್ತೇವೆ’ ಎಂದಿದೆ.

 ಚೆನ್ನೈ: ರಾಜಧಾನಿ ಬೆಂಗಳೂರಿಗೆ ನೀರು ಪೂರೈಸಲು ಮೇಕೆದಾಟು ಯೋಜನೆ ಜಾರಿಗೆ ಕರ್ನಾಟಕ ಸರ್ಕಾರ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲಿಯೇ, ತಮಿಳುನಾಡು ಸರ್ಕಾರ, ‘ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸುವ ಮೇಕೆದಾಟು ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧ ಅಗತ್ಯ ಕ್ರಮಗಳನ್ನು ಹಾಗೂ ಕಾನೂನು ಹೋರಾಟ ನಡೆಸುತ್ತೇವೆ’ ಎಂದಿದೆ.

ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆಗೆ ಆದ್ಯತೆ ಮೇರೆಗೆ ಅನುಮತಿ ನೀಡುವಂತೆ ಕೇಂದ್ರ ಸಚಿವಾಲಯಕ್ಕೆ ಮನವಿ ಮಾಡಿದ ಬೆನ್ನಲ್ಲಿಯೇ ತಮಿಳುನಾಡು ಸರ್ಕಾರದಿಂದ ಈ ಹೇಳಿಕೆ ಬಂದಿದೆ. ಲೋಕಸಭಾ ಕ್ಷೇತ್ರ ಮರುವಿಂಗಡನೆ ವಿರೋಧಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿದ ಹೋರಾಟಕ್ಕೆ ಬೆಂಬಲ ನೀಡಿದ್ದರು. ಅವರು ಅಲ್ಲಿಂದ ಮರಳಿದ ಬೆನ್ನಲ್ಲೇ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ದ್ರೋಹ ಎಸಗಿದೆ.

ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ‘ಕರ್ನಾಟಕ ಸರ್ಕಾರವು ಕಾವೇರಿ ಜಲಾನಯ ಪ್ರದೇಶವಾದ ಮೇಕೆದಾಟು ಅಥವಾ ಇನ್ಯಾವುದೇ ಪ್ರದೇಶದಲ್ಲಿ ಜಲಾಶಯ ನಿರ್ಮಿಸುವ ನಿರ್ಧಾರದ ವಿರುದ್ಧ ತಮಿಳುನಾಡು ಸರ್ಕಾರ ಕಾನೂನು ಹೋರಾಟ ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಕರ್ನಾಟಕದ ನಿಲುವು ನ್ಯಾಯಮಂಡಳಿಯ ಅಂತಿಮ ಆದೇಶ, ಸುಪ್ರೀಂ ಕೋರ್ಟ್‌ನ ತೀರ್ಪ ಮತ್ತು ತಮಿಳುನಾಡಿನ ಹಕ್ಕುಗಳ ಸುರಕ್ಷತೆಯ ಉಲ್ಲಂಘನೆ ಆಗಿದೆ’ ಎಂದರು.

ಅಲ್ಲದೆ, ‘ಮೇಕೆದಾಟು ಅಣೆಕಟ್ಟೆಗೆ ಕೇಂದ್ರ ಪರಿಸರ ಹಾಗೂ ಜಲ ಸಚಿವಾಲಯದ ಅನುಮತಿ ಅಗತ್ಯ. ತಮಿಳುನಾಡಿನ ಸಮ್ಮತಿ ಕೂಡ ಅಗತ್ಯ. ಈ ಸಮ್ಮತಿ ಇಲ್ಲದೆ ಯಾರಿಗೂ ಅಣೆಕಟ್ಟು ನಿರ್ಮಿಸಲಾಗದು’ ಎಂದು ಹೇಳಿದರು.

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ 67.16 ಟಿಂಎಂಸಿ ಅಡಿಯ ಜಲಾಶಯ ನಿರ್ಮಿಸುವ ಯೋಜನೆಗೆ ಮುಂದಾಗಿದೆ. ಆದರೆ ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ‘ ಅನುಮತಿಯಿಲ್ಲದೇ ಕರ್ನಾಟಕ ಸರ್ಕಾರ ಮುಂದುವರೆಯಲು ಸಾಧ್ಯವಿಲ್ಲ. ಜೊತೆಗೆ ಈ ಯೋಜನೆಯಿಂದ ಕರ್ನಾಟಕದಿಂದ ಹರಿಯುವ ನೈಸರ್ಗಿಕ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ’ ಎನ್ನುವುದು ತಮಿಳುನಾಡು ಸರ್ಕಾರದ ವಾದ.

Share this article