ವಿಶ್ವ ಮಾರುಕಟ್ಟೆ ಅಲ್ಲೋಲ, ಕಲ್ಲೋಲ ಸೃಷ್ಟಿಸಿರುವ ಟ್ರಂಪ್‌ ತೆರಿಗೆ ನೀತಿ ಹಿಂದಿದ್ದಾರೆ ಆರ್ಥಿಕ ತಜ್ಞ ಸ್ಟಿಫೆನ್‌ ಮಿರಾನ್‌

KannadaprabhaNewsNetwork |  
Published : Apr 11, 2025, 12:32 AM ISTUpdated : Apr 11, 2025, 04:46 AM IST
ಅಮೆರಿಕ | Kannada Prabha

ಸಾರಾಂಶ

ವಿಶ್ವ ಮಾರುಕಟ್ಟೆಯಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿರುವ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿ ತೆರಿಗೆ ನೀತಿ ಹಿಂದೆ ಹಾರ್ವರ್ಡ್‌ ವಿವಿಯ ಆರ್ಥಿಕ ತಜ್ಞ ಸ್ಟಿಫೆನ್‌ ಮಿರಾನ್‌ ಅವರ ಹೆಜ್ಜೆಗುರುತು ಇದೆ.

 ವಾಷಿಂಗ್ಟನ್‌: ವಿಶ್ವ ಮಾರುಕಟ್ಟೆಯಲ್ಲಿ ಅಲ್ಲೋಲ, ಕಲ್ಲೋಲ ಸೃಷ್ಟಿಸಿರುವ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿ ತೆರಿಗೆ ನೀತಿ ಹಿಂದೆ ಹಾರ್ವರ್ಡ್‌ ವಿವಿಯ ಆರ್ಥಿಕ ತಜ್ಞ ಸ್ಟಿಫೆನ್‌ ಮಿರಾನ್‌ ಅವರ ಹೆಜ್ಜೆಗುರುತು ಇದೆ.

2024ರ ಡಿ.22 ರಂದು ಸ್ಟಿಫೆನ್‌ ಅವರನ್ನು ಟ್ರಂಪ್‌ ಅವರು ಆರ್ಥಿಕ ಸಲಹೆಗಾರರ ಕೌನ್ಸಿಲ್‌ನ ಮುಖ್ಯಸ್ಥರಾಗಿ ನೇಮಿಸಿದ್ದರು. ಹಾರ್ವರ್ಡ್‌ ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಮಾಡಿರುವ ಸ್ಟಿಫೆನ್‌ ಹೆಸರಾಂತ ಆರ್ಥಿಕ ತಜ್ಞ ಮಾರ್ಟಿನ್‌ ಫೀಲ್ಡ್‌ಸ್ಟೈನ್‌ ಅವರ ಗರಡಿಯಲ್ಲಿ ಪಳಗಿದವರು. 1980ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್‌ ಅವರ ಸರ್ಕಾರದಲ್ಲಿ ಮಾರ್ಟಿನ್‌ ಅವರು ಆರ್ಥಿಕ ಸಲಹೆಗಾರರ ಕೌನ್ಸಿಲ್‌ನ ಮಖ್ಯಸ್ಥರಾಗಿದ್ದರು.

ಟ್ರಂಪ್‌ ಆಡಳಿತದ ಭಾಗವಾಗುವ ಮೊದಲು ಸ್ಟಿಫೆನ್‌ ಅವರು ಅಂತಾರಾಷ್ಟ್ರೀಯ ಹೂಡಿಕೆ ಸಂಸ್ಥೆ ಹುಡ್ಸನ್‌ ಬೇ ಕ್ಯಾಪಿಟಲ್‌ನಲ್ಲಿ ಸೀನಿಯರ್‌ ಸ್ಟ್ರ್ಯಾಟೆಜಿಸ್ಟ್‌ ಆಗಿದ್ದರು. ಕಳೆದ ನವೆಂಬರ್‌ನಲ್ಲಿ ಸ್ಟಿಫೆನ್‌ ಅ‍ವರು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಹೊಸರೂಪ ನೀಡುವ 41 ಪುಟಗಳ ಮಾರ್ಗಸೂಚಿಯೊಂದನ್ನು ಪ್ರಕಟಿಸಿದ್ದರು. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸು ವ್ಯವಸ್ಥೆಯನ್ನು ಅಮೆರಿಕದ ಅನುಕೂಲಕ್ಕೆ ತಕ್ಕಂತೆ ಸರಿಹೊಂದಾಣಿಕೆ ಮಾಡಿಕೊಳ್ಳುವ ವಿವರಣೆ ಇದರಲ್ಲಿತ್ತು. ಅಮೆರಿಕದ ಉತ್ಪನ್ನಗಳ ರಫ್ತಿಗೆ ತೆರಿಗೆಯನ್ನು ಹೇಗೆ ಸಂಧಾನದ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕೆಂಬ ಕುರಿತು ಅದರಲ್ಲಿ ವಿವರಿಸಲಾಗಿತ್ತು. ಟ್ರಂಪ್‌ ಅವರ ಈಗಿನ ತೆರಿಗೆ ನಡೆ ಕೂಡ ಇದೇ ಮಾದರಿಯ ಮೇಲೆ ನಿಂತಿದೆ. 

ಅಮೆರಿಕಕ್ಕೆ ತೆರಳುವವರು ಜಾಗರೂಕರಾಗಿರಿ: ಚೀನಾ ಸಲಹೆ

ಬೀಜಿಂಗ್: ಅಮೆರಿಕ ಮತ್ತು ಚೀನಾದ ನಡುವೆ ಪ್ರತಿತೆರಿಗೆ ಸಮರದ ನಡುವೆಯೇ ಅಮೆರಿಕಗೆ ತೆರಳುವ ತನ್ನ ದೇಶದ ಪ್ರಜೆಗಳಿಗೆ ಎಚ್ಚರವಾಗಿರುವಂತೆ ಚೀನಾ ಸಲಹೆ ನೀಡಿದೆ. ಚೀನಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ‘ ಚೀನಾ ಮತ್ತು ಅಮೆರಿಕದ ವ್ಯಾಪಾರ ಸಂಬಂಧಗಳು ಮತ್ತು ಅಮೆರಿಕದಲ್ಲಿ ಭದ್ರತಾ ವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಚೀನಾದ ನಾಗರಿಕರಿಗೆ ಅಮೆರಿಕಗೆ ತೆರಳುತ್ತಿರುವವರು ಅಪಾಯಗಳನ್ನು ಎಚ್ಚರಿಕೆಯಿಂದ ಎದುರಿಸಿ ಮತ್ತು ಜಾಗರೂಕರಾಗಿರಿ’ ಎಂದಿದೆ. ಇದರ ಜೊತೆಗೆ ಕೆಲವು ಅಮೇರಿಕನ್ ರಾಜ್ಯಗಳಲ್ಲಿ ಭದ್ರತಾ ಅಪಾಯ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕೂಡ ಎಚ್ಚರವಾಗಿರುವಂತೆ ಚೀನಾ ಶಿಕ್ಷಣಾ ಸಚಿವಾಲಯ ಸೂಚಿಸಿದೆ.

ಜು.9ರವರೆಗೆ ಭಾರತದ ಮೇಲೆ ಅಮೆರಿಕ ತೆರಿಗೆ ಇಲ್ಲ

ನವದೆಹಲಿ: ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ ಎಂದು ಅಮೆರಿಕ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ. ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಫ್‌, ಚೀನಾ ಹೊರತುಪಡಿಸಿ 75 ದೇಶಗಳಿಗೆ 90 ದಿನಗಳ ಕಾಲ ಪ್ರತಿತೆರಿಗೆಯಿಂದ ವಿನಾಯ್ತಿ ನೀಡುವುದಾಗಿ ಘೋಷಿಸಿದ್ದರು. ಆದರೆ ದೇಶಗಳ ಹೆಸರನ್ನು ಪ್ರಕಟ ಮಾಡಿರಲಿಲ್ಲ. ಹೀಗಾಗಿ ಗುರುವಾರ ಶ್ವೇತಭವನ ಈ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಆದರೆ ಈಗಾಗಲೇ ಜಾರಿಯಲ್ಲಿದ್ದ ಶೇ.10ರಷ್ಟು ಮೂಲ ತೆರಿಗೆ ಹಿಂದಿನಂತೆ ಮುಂದುವರೆಯಲಿದೆ.

ಅಮೆರಿಕದ ಮೇಲೆ ಹೆಚ್ಚುವರಿ ಸುಂಕಕ್ಕೆ ಇಯು 90 ದಿನ ಬ್ರೇಕ್‌ 

ಬ್ರಸೆಲ್ಸ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 75 ದೇಶಗಳ ಮೇಲೆ ಪ್ರತಿತೆರಿಗೆಯನ್ನು 90 ದಿನಗಳ ಅವಧಿಗೆ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಯುರೋಪಿಯನ್ ಒಕ್ಕೂಟವು ಅಮೆರಿಕದ ಉತ್ಪನ್ನಗಳಿಗೆ ವಿಧಿಸಿದ ಪ್ರತಿಸುಂಕವನ್ನು 90 ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ಬಗ್ಗೆ ಇಯು ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಪ್ರತಿಕ್ರಿಯಿಸಿದ್ದು, ‘ಯುರೋಪಿಯುನ್ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಘೋಷಣೆಯನ್ನು ಗಮನಿಸಿದೆ. ಅಮೆರಿಕದ ಸರಕುಗಳ ಮೇಲೆ 19.55 ಲಕ್ಷ ಕೋಟಿ ಹೊಸ ಸುಂಕಗಳನ್ನು 90 ದಿನಗಳವರೆಗೆ ತಡೆ ಹಿಡಿಯಲಾಗುವುದು. ಏಕೆಂದರೆ ನಾವು ಮಾತುಕತೆಗಳಿಗೆ ಅವಕಾಶ ನೀಡಲು ಬಯಸುತ್ತೇವೆ. ಮಾತುಕತೆಗಳು ತೃಪ್ತಿಕರವಾಗಿಲ್ಲದಿದ್ದರೆ, ನಮ್ಮ ಪ್ರತಿತೆರಿಗೆ ಪ್ರಾರಂಭವಾಗುತ್ತದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ