ಆರ್‌ಟಿಐ ವ್ಯಾಪ್ತಿಗೆ ಅಪೆಕ್ಸ್‌ ಬ್ಯಾಂಕ್‌ : ರಾಜ್ಯ ಮಾಹಿತಿ ಆಯೋಗ ಮಹತ್ವದ ತೀರ್ಪು

KannadaprabhaNewsNetwork |  
Published : Mar 18, 2026, 02:00 AM ISTUpdated : Mar 18, 2026, 04:43 AM IST
Apex Bank

ಸಾರಾಂಶ

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅನ್ನು ಮಾಹಿತಿ ಹಕ್ಕು ಕಾಯ್ದೆ, 2005 ಅಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಮಾಹಿತಿ ಆಯೋಗ ಮಹತ್ವದ ತೀರ್ಪು ನೀಡಿದೆ. ಅಪೆಕ್ಸ್‌ ಬ್ಯಾಂಕ್‌ ಅನ್ನು ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಿದೆ. ಸಹಕಾರ ಬ್ಯಾಂಕಿಂಗ್‌ ಕ್ಷೇತ್ರ ಇನ್ನು ಪಾರದರ್ಶಕತೆಗೆ ಇದು ಅವಕಾಶ ಮಾಡಿಕೊಡಲಿದೆ.

  ಬೆಂಗಳೂರು :  ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚಿಸಲು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಅನ್ನು ಮಾಹಿತಿ ಹಕ್ಕು ಕಾಯ್ದೆ, 2005 ಅಡಿ ತರುವ ನಿಟ್ಟಿನಲ್ಲಿ ಕರ್ನಾಟಕ ಮಾಹಿತಿ ಆಯೋಗ ಮಹತ್ವದ ತೀರ್ಪು ನೀಡಿದೆ. ಅಪೆಕ್ಸ್‌ ಬ್ಯಾಂಕ್‌ ಅನ್ನು ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಿದೆ. ಸಹಕಾರ ಬ್ಯಾಂಕಿಂಗ್‌ ಕ್ಷೇತ್ರ ಇನ್ನು ಪಾರದರ್ಶಕತೆಗೆ ಇದು ಅವಕಾಶ ಮಾಡಿಕೊಡಲಿದೆ.

ಅದರಂತೆ ಬ್ಯಾಂಕ್ ತಕ್ಷಣವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು (ಪಿಐಒ) ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳನ್ನು (ಎಫ್‌ಎಎ) ನೇಮಿಸಿ ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಜಾರಿಗೆ ತರಬೇಕೆಂದು ಆಯೋಗ ಸೂಚಿಸಿದೆ.

ಹನುಮಂತ ವಸಂತ ಶಿಂಧೆ ಅವರು ನಿರಾಣಿ ಶುಗರ್ಸ್ ಲಿಮಿಟೆಡ್ ಸಂಸ್ಥೆಯು ಮಾರ್ಚ್ 2022ರಿಂದ ಜೂನ್ 2024ರವರೆಗೆ ಅಪೆಕ್ಸ್ ಬ್ಯಾಂಕಿನಿಂದ ಪಡೆದ ಸಾಲಗಳಿಗೆ ಸಂಬಂಧಿಸಿ ಸಲ್ಲಿಸಿದ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಬ್ಯಾಂಕ್ ತಾವು ಸಹಕಾರ ಸಂಘವಾಗಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಮಾಹಿತಿ ನೀಡಲು ನಿರಾಕರಿಸಿತ್ತು.

ಸರ್ಕಾರದ ನೆರವು ಇಲ್ಲ:

ಬ್ಯಾಂಕ್ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿಲ್ಲ, ಸರ್ಕಾರದಿಂದ ಹಣಕಾಸು ನೆರವೂ ಇಲ್ಲ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2(ಎಚ್) ಅಡಿ ಸಾರ್ವಜನಿಕ ಪ್ರಾಧಿಕಾರವಾಗಲು ಸಾಧ್ಯವಿಲ್ಲ ಎಂದು ವಾದಿಸಲಾಗಿತ್ತು. ಆದರೆ ಈ ವಾದವನ್ನು ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್. ತಳ್ಳಿಹಾಕಿ, ಬ್ಯಾಂಕ್ ಕಾರ್ಯಾಚರಣೆ ಮೇಲೆ ಸರ್ಕಾರದ ಆಳವಾದ ಮತ್ತು ವ್ಯಾಪಕ ನಿಯಂತ್ರಣ ಇದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದೇಶದಲ್ಲಿ ಬ್ಯಾಂಕಿನ ಇತಿಹಾಸವನ್ನು ವಿವರವಾಗಿ ಪರಿಶೀಲಿಸಲಾಗಿದ್ದು, ಹಳೆ ಮೈಸೂರು ರಾಜ್ಯದಲ್ಲಿ ಆರಂಭವಾದ ಸಹಕಾರ ಚಳುವಳಿಯ ಭಾಗವಾಗಿ ಸಹಕಾರ ಸಂಘಗಳ ನಿಬಂಧಕರು ತಮ್ಮ ಅಧಿಕೃತ ಹುದ್ದೆಯಲ್ಲಿ ಈ ಬ್ಯಾಂಕನ್ನು ಸ್ಥಾಪಿಸಿದ್ದರು. ನಂತರದ ಅವಧಿಯಲ್ಲಿ ಸರ್ಕಾರದ ನೀತಿ ಹಾಗೂ ಮಾರ್ಗಸೂಚಿಗಳ ಮೂಲಕ ಬ್ಯಾಂಕಿನ ಕಾರ್ಯಾಚರಣೆ ಮೇಲೆ ಸರ್ಕಾರದ ಪ್ರಭಾವ ಮುಂದುವರೆದಿದೆ ಎಂದು ಹೇಳಲಾಗಿದೆ.

ಸರ್ಕಾರದ ಮೇಲ್ವಿಚಾರಣೆ:

ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಸಹಕಾರ ಸಂಘಗಳ ನೋಂದಣಾಧಿಕಾರಿ ಎಕ್ಸ್‌ಆಫೀಶಿಯೋ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಅಡಿ ಸರ್ಕಾರಕ್ಕೆ ಬ್ಯಾಂಕಿನ ದಾಖಲೆಗಳನ್ನು ಪರಿಶೀಲಿಸುವುದು, ತನಿಖೆ ನಡೆಸುವುದು ಮತ್ತು ಆಡಿಟ್ ಮಾಡಲು ಆದೇಶಿಸುವ ಅಧಿಕಾರವಿದೆ. ಇದಲ್ಲದೆ ಅಪೆಕ್ಸ್ ಮಟ್ಟದ ಸಹಕಾರ ಸಂಸ್ಥೆಗಳ ಆಡಿಟ್ ವರದಿಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ವಿಧಾನಸಭೆಯ ಮುಂದೆ ಇಡುವುದು ಕಡ್ಡಾಯ. ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಂಸ್ಥೆಗಳ ನಿಯಂತ್ರಣವೂ ಇದೆ ಎಂದು ಆಯೋಗ ತಿಳಿಸಿದೆ.

ಸುಪ್ರೀಂ ಕೋರ್ಟ್ ನೀಡಿದ ಅಜಯ್ ಹಾಸಿಯಾ ವಿರುದ್ಧ ಖಾಲಿದ್ ಮುಜೀಬ್ ಪ್ರಕರಣದ ತೀರ್ಪು ಸೇರಿ ಕರ್ನಾಟಕ ಹೈಕೋರ್ಟ್ ನೀಡಿದ ಬಿ.ಟಿ.ಕೃಷ್ಣೇಗೌಡ ವಿರುದ್ಧ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಪ್ರಕರಣದ ತೀರ್ಪಿನ್ನೂ ಆಯೋಗ ಉಲ್ಲೇಖಿಸಿದೆ.

ಆರ್‌ಟಿಐ ಜಾರಿಗೆ ಸೂಚನೆ:

ಆಯೋಗವು ಅಪೆಕ್ಸ್ ಬ್ಯಾಂಕ್ ತನ್ನ ಎಲ್ಲ ಕಚೇರಿಗಳಲ್ಲಿ ತಕ್ಷಣವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಬೇಕು. ಜೊತೆಗೆ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)(ಎ) ಮತ್ತು 4(1)(ಬಿ) ಅಡಿ ಪ್ರಮುಖ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ತಿಳಿಸಿದೆ. ಈ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಹಕಾರ ಸಂಘಗಳ ನೋಂದಣಾಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.

ಪರಿಣಾಮ ಏನು?:

ಈ ತೀರ್ಪು ರಾಜ್ಯದ ಸಹಕಾರ ಹಣಕಾಸು ಸಂಸ್ಥೆಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ. ಸಹಕಾರ ಸಂಸ್ಥೆಗಳಾಗಿರುವ ಕಾರಣ ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿದ್ದೇವೆ ಎಂದು ಹೇಳಿ ಹಲವು ಸಂಸ್ಥೆಗಳು ಮಾಹಿತಿ ನೀಡುವುದನ್ನು ತಪ್ಪಿಸುತ್ತಿದ್ದವು. ಈಗ ಅಪೆಕ್ಸ್ ಬ್ಯಾಂಕ್ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಣೆಯಾಗಿರುವುದರಿಂದ ಬ್ಯಾಂಕಿನ ಆಡಳಿತ, ಸಾಲ ಮಂಜೂರು ಪ್ರಕ್ರಿಯೆ ಮತ್ತು ಹಣಕಾಸು ನಿರ್ಧಾರಗಳ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುದ್ಧದ ಕಾರಣ ಎಲ್‌ಪಿಜಿ ಪೂರೈಕೆ : ಕೇಂದ್ರ ಸರ್ಕಾರದಿಂದ ದೊಡ್ಡ ವಾರ್ನಿಂಗ್
ಆಫ್ಘನ್‌ ಮೇಲೆ ಪಾಕ್‌ ದಾಳಿಗೆ 400ಕ್ಕೂ ಹೆಚ್ಚು ಮಂದಿ ಸಾವು?