ಪ್ರತಿಪಕ್ಷ ಬಿಜೆಪಿಯಲ್ಲಿ ಸಮನ್ವಯ ಕೊರತೆ ಇರುವುದು ಪದೇ ಪದೇ ಸಾಬೀತು: ಸದನ ಒಳಗೆ, ಹೊರಗೆ ಮತ್ತೆ ಬಿಜೆಪಿ ಒಡಕು

KannadaprabhaNewsNetwork | Updated : Dec 13 2024, 04:30 AM IST

ಸಾರಾಂಶ

ಪ್ರತಿಪಕ್ಷ ಬಿಜೆಪಿಯಲ್ಲಿ ಸಮನ್ವಯ ಕೊರತೆ ಇರುವುದು ಪದೇ ಪದೇ ಸಾಬೀತಾಗುತ್ತಿದೆ. ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಆಡಳಿತಾರೂಢ ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಒಗ್ಗಟ್ಟಿನ ಹೋರಾಟ ತೋರುವಲ್ಲಿ ಬಿಜೆಪಿ ಮತ್ತೊಮ್ಮೆ ಎಡವಿದೆ

  ಸುವರ್ಣ ವಿಧಾನಸೌಧ : ಪ್ರತಿಪಕ್ಷ ಬಿಜೆಪಿಯಲ್ಲಿ ಸಮನ್ವಯ ಕೊರತೆ ಇರುವುದು ಪದೇ ಪದೇ ಸಾಬೀತಾಗುತ್ತಿದೆ. ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಆಡಳಿತಾರೂಢ ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಲು ಒಗ್ಗಟ್ಟಿನ ಹೋರಾಟ ತೋರುವಲ್ಲಿ ಬಿಜೆಪಿ ಮತ್ತೊಮ್ಮೆ ಎಡವಿದೆ. ಸದನದೊಳಗೆ ಮತ್ತು ಸದನದ ಹೊರಗೆ ಗುರುವಾರ ನಡೆದ ಹೋರಾಟದಲ್ಲಿ ಪಕ್ಷದ ಮುಖಂಡರ ನಡುವೆ ಒಗ್ಗಟ್ಟು ಬದಲಾಗಿ ಒಡಕು ಇನ್ನೊಮ್ಮೆ ಅನಾವರಣಗೊಂಡಿದೆ.

ಪಂಚಮಸಾಲಿ ಲಿಂಗಾಯತ ಹೋರಾಟಗಾರರ ಮೇಲಿನ ಲಾಠಿ ಪ್ರಹಾರ ಘಟನೆ ವಿರೋಧಿಸಿ ಬಿಜೆಪಿ ಸುವರ್ಣ ವಿಧಾನಸೌಧದ ಎದುರು ಇರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿತು. ಆದರೆ, ಧರಣಿಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗೈರಾಗಿ ಪಕ್ಷದಿಂದ ಅಂತರ ಕಾಯ್ದುಕೊಂಡರು. ಇದು ಬಿಜೆಪಿಯಲ್ಲಿ ಭಿನ್ನಮತ ಮುಂದುವರಿದಿದೆ ಎಂಬ ಸಂದೇಶವನ್ನು ರವಾನಿಸಿತು. ಇದಲ್ಲದೇ, ಪಕ್ಷದ ನಾಯಕರು ಸಹ ಮುಖಂಡರಲ್ಲಿನ ಒಡಕಿನ ಭಾವನೆಗೆ ಬೇಸರಗೊಂಡಿದ್ದಾರೆ. ಆರ್‌.ಅಶೋಕ್‌ ಮತ್ತು ಬಿ.ವೈ.ವಿಜಯೇಂದ್ರ ಅವರಿಗೆ ನೇರವಾಗಿಯೇ ಸಮನ್ವಯ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಈ ನಡುವೆ, ಒಂದೇ ವಿಷಯ ಬಗ್ಗೆ ಇಬ್ಬರು ಸಚಿವರು ಉತ್ತರ ನೀಡಿರುವುದಕ್ಕೆ ಬಿಜೆಪಿ ಕ್ರಿಯಾಲೋಪ ಎತ್ತಿದ್ದರೂ ಸಚಿವರ ಉತ್ತರಕ್ಕೆ ಅವಕಾಶ ನೀಡಿದ ಸಭಾಧ್ಯಕ್ಷ ಯು.ಟಿ.ಖಾದರ್‌ ನಡೆ ಪ್ರಶ್ನಿಸುವ ವಿಚಾರದಲ್ಲಿಯೂ ಭಿನ್ನರಾಗ ಕಾಣಿಸಿಕೊಂಡಿತು. ತೀವ್ರ ಗದ್ದಲ ಪರಿಣಾಮ ಕಲಾಪ ಮುಂದೂಡುತ್ತಿದ್ದಂತೆ ಸುನೀಲ್‌ಕುಮಾರ್‌, ಸುರೇಶ್‌ ಗೌಡ ಸೇರಿದಂತೆ ಇತರರು ಸಭಾಧ್ಯಕ್ಷರ ಕೊಠಡಿಗೆ ತೆರಳಿ ಅವರ ನಡೆಯನ್ನು ಪ್ರಶ್ನಿಸಲು ಮುಂದಾದರು. ಆದರೆ, ಅದಕ್ಕೆ ಆರ್‌. ಅಶೋಕ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಈಗ ಮಾತನಾಡುವುದು ಬೇಡ. ನಮ್ಮ ಕಚೇರಿಯಲ್ಲಿ ಕುಳಿತು ಚರ್ಚೆ ಮಾಡಿ, ಯಾವ ರೀತಿಯಲ್ಲಿ ಮಾತನಾಡಬೇಕು ಎಂಬುದನ್ನು ನಿರ್ಧರಿಸೋಣ. ಅನಂತರ ಸ್ಪೀಕರ್‌ ಬಳಿ ಮಾತನಾಡೋಣ’ ಎಂದು ಹೇಳಿದರು.  ಅದಕ್ಕೊಪ್ಪದ ಸುನೀಲ್‌ಕುಮಾರ್‌, ಸುರೇಶ್‌ ಗೌಡ, ಸಿದ್ದು ಸವದಿ ಸೇರಿ ಇತರರು, ‘ನೀವು ಬೇಕಾದರೆ ಹೋಗಿ. ನಾವು ಈಗಲೇ ಸ್ಪೀಕರ್‌ ಕಚೇರಿಗೆ ಹೋಗುತ್ತೇವೆ’ ಎಂದು ಹೊರಟರು. ತಮ್ಮ ನಾಯಕತ್ವ ಇಲ್ಲದೆ, ಸಭಾಧ್ಯಕ್ಷರ ಕಚೇರಿಗೆ ಶಾಸಕರು ತೆರಳಿದ್ದು, ಅಶೋಕ್‌ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಪಕ್ಷದಲ್ಲಿ ‘ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಾಗಿದೆ’ ಎಂದು ಅಶೋಕ್ ಬೇಸರ ಹೊರಹಾಕಿದರು. ಸಭಾಧ್ಯಕ್ಷರ ಕಚೇರಿಗೆ ತೆರಳಿದ ಸುನಿಲ್‌ ಕುಮಾರ್‌ ನೇತೃತ್ವದ ತಂಡ ಸಭಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ತೀವ್ರ ಗದ್ದಲ ಉಂಟಾಯಿತು.

Share this article