ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದು, ಕನ್ನಡ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ

KannadaprabhaNewsNetwork | Updated : Feb 25 2025, 05:54 AM IST

ಸಾರಾಂಶ

ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದು, ಸೋಮವಾರವೂ ಕನ್ನಡ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗಿದೆ.

 ವಿಜಯಪುರ/ಬೆಳಗಾವಿ : ಗಡಿಭಾಗದಲ್ಲಿ ಮರಾಠಿ ಪುಂಡರ ಹಾವಳಿ ಮತ್ತಷ್ಟು ಮಿತಿ ಮೀರಿದ್ದು, ಸೋಮವಾರವೂ ಕನ್ನಡ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸೋಮವಾರ ಸಂಜೆ ಕನ್ನಡದಲ್ಲಿ ಮಾತಾಡಿದ್ದಕ್ಕೆ ಖಾನಾಪುರ ತಾಲೂಕು ಕರವೇ (ನಾರಾಯಣ ಗೌಡ ಬಣ) ಉಪಾಧ್ಯಕ್ಷ ಜಯವಂತ ನಿಡಗಲ್ಕರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ್ದಾರೆ. 

ಮತ್ತೊಂದೆಡೆ ಖಾನಾಪುರ ಘಟನೆಗೂ ಮೊದಲು, ಸೋಮವಾರ ಬೆಳಗ್ಗೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶಿವಸೇನಾ ಠಾಕ್ರೆ ಸಂಘಟನೆಯ ಕಾರ್ಯಕರ್ತರು ಇಳಕಲ್‌ನಿಂದ ತೆರಳಿದ್ದ ಎರಡು ಬಸ್‌ಗಳನ್ನು ತಡೆದು, ಚಾಲಕನ ಮುಖಕ್ಕೆ ಕೇಸರಿ ಬಣ್ಣ ಬಳಿದು, ಹೂಮಾಲೆ ಹಾಕಿ, ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿಸಿ ದರ್ಪ ಮೆರೆದಿದ್ದಾರೆ. ಜೊತೆಗೆ ಬಸ್‌ಗಳಿಗೆ ಮಸಿ ಬಳಿದು, ಜೈ ಮಹಾರಾಷ್ಟ್ರ ಎಂದು ಬರೆದು, ಮಹಾರಾಷ್ಟ್ರ ಪರ ಘೋಷಣೆ ಕೂಗಿದ್ದಾರೆ. ಇದು ಕನ್ನಡಪರ ಸಂಘಟನೆಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಚಾಲಕನಿಗೆ ಕೇಸರಿ ಬಣ್ಣ:

ಸೋಮವಾರ ಬೆಳಗ್ಗೆ ಬಾಗಲಕೋಟೆಯ ಇಳಕಲ್‌ನಿಂದ (ಕೆಎ 29 ಎಫ್ 1350) ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಿದ್ದ ಬಸ್‌ನ್ನು ಸೊಲ್ಲಾಪುರ ನಗರದ ಸಾಥ್ ರಸ್ತೆಯಲ್ಲಿ ಶಿವಸೇನೆಯ (ಉದ್ಧವ್‌ ಠಾಕ್ರೆ ಬಣ) 15 ರಿಂದ 20 ಕಿಡಿಗೇಡಿಗಳು ತಡೆದಿದ್ದಾರೆ. ಬಸ್‌ಗೆ ಮಸಿ ಬಳಿದು, ‘ಜೈ ಮಹಾರಾಷ್ಟ್ರ’ ಎಂದು ಬರೆದಿದ್ದಾರೆ. ಬಳಿಕ ಬಸ್ ಚಾಲಕನನ್ನು ಕೆಳಗಿಳಿಸಿ, ಚಾಲಕನ ಮುಖಕ್ಕೆ ಕೇಸರಿ ಬಣ್ಣ ಬಳಿದು, ಹೂಮಾಲೆ ಹಾಕಿ, ‘ಜೈ ಮಹಾರಾಷ್ಟ್ರ’ ಎಂದು ಘೋಷಣೆ ಕೂಗಿಸಿ ದರ್ಪ ಮೆರೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ. ಜೈ ಮಹಾರಾಷ್ಟ್ರ, ಜೈ ಭವಾನಿ ಎಂದು ಘೋಷಣೆ ಕೂಗುತ್ತಾ ದಾಂದಲೆ ನಡೆಸಿದ್ದಾರೆ. ಬಳಿಕ, ಬಸ್ ಬಿಟ್ಟು ಕಳುಹಿಸಿದ್ದಾರೆ. ಬಸ್‌ನಲ್ಲಿ ಅಂದಾಜು 35 ಪ್ರಯಾಣಿಕರಿದ್ದರು. ಇದಾದ ಬಳಿಕ, ಮಧ್ಯಾಹ್ನದ ವೇಳೆ ಇಳಕಲ್‌ನಿಂದ ತೆರಳಿದ್ದ ಮತ್ತೊಂದು ಬಸ್‌ಗೂ ಪುಂಡರು ಮಸಿ ಬಳಿದಿದ್ದಾರೆ.

ಕರವೇ ಮುಖಂಡನ ಮೇಲೆ ಹಲ್ಲೆ:

ಈ ಮಧ್ಯೆ, ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಜಾಂಬೋಟಿ ವೃತ್ತದ ಬಳಿ ಸೋಮವಾರ ಸಂಜೆ ಖಾನಾಪುರ ತಾಲೂಕು ಕರವೇ (ನಾರಾಯಣ ಗೌಡ ಬಣ) ಉಪಾಧ್ಯಕ್ಷ, ತಾಲೂಕಿನ ದೇವಲತ್ತಿ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ, ಜಯವಂತ ನಿಡಗಲ್ಕರ್ ಮೇಲೆ ನಾಲ್ಕೈದು ಯುವಕರ ಮರಾಠಿ ಪುಂಡರ ಗುಂಪು ಹಲ್ಲೆ ನಡೆಸಿದೆ.

ಅವರು ತಮ್ಮ ಸ್ನೇಹಿತರೊಂದಿಗೆ ಹೊಟೇಲ್‌ಗೆ ಬಂದಾಗ ಈ ಘಟನೆ ನಡೆದಿದೆ. ಹೋಟೆಲ್ ನಲ್ಲಿ ಕುಳಿತಿದ್ದ ಯುವಕರ ಜೊತೆ ಕನ್ನಡದಲ್ಲಿ ಮಾತನಾಡಿ, ಪಕ್ಕಕ್ಕೆ ಸರಿದು ಕುಳಿತುಕೊಳ್ಳಲು ಹೇಳಿದ್ದಕ್ಕೆ ಆಕ್ರೋಶಗೊಂಡ ಯುವಕರು, ನಿಡಗಲ್ಕರ್‌ ಜೊತೆ ಜಗಳ ತೆಗೆದು, ರಕ್ತ ಬರುವ ಹಾಗೆ ಹಲ್ಲೆ ನಡೆಸಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share this article