ದುಬೈ: ಪಾಕಿಸ್ತಾನವನ್ನು ಈ ಏಷ್ಯಾಕಪ್‌ನಲ್ಲಿ 2ನೇ ಬಾರಿಗೆ ಹೊಸಕಿ ಹಾಕಿದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಮೈದಾನದಾಚೆಗೂ ಬದ್ಧವೈರಿಗೆ ತಕ್ಕ ಉತ್ತರ ನೀಡಿದ್ದಾರೆ. ಭಾನುವಾರ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸೂರ್ಯ ನಗುತ್ತಲೇ ನೀಡಿದ ಉತ್ತರ, ಪಾಕಿಸ್ತಾನಿಯರಿಗೆ ಅರಗಿಸಿಕೊಳ್ಳಲಾಗದಂತಹ ಪೆಟ್ಟು ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನಿ ಪತ್ರಕರ್ತರೊಬ್ಬರು ಸೂರ್ಯರನ್ನು ‘ಪಾಕ್ ತಂಡದಿಂದ ಎದುರಾದ ಪೈಪೋಟಿ ಹಾಗೂ ಆ ತಂಡವು ಭಾರತಕ್ಕೆ ಎಷ್ಟು ದೊಡ್ಡ ಪ್ರತಿಸ್ಪರ್ಧಿ?’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸೂರ್ಯ, ‘ಸರ್, ದಯವಿಟ್ಟು ಪಾಕಿಸ್ತಾನ ತಂಡವನ್ನು ಭಾರತದ ಪ್ರತಿಸ್ಪರ್ಧಿ ಎಂದು ಕರೆಯುವುದನ್ನು ನಿಲ್ಲಿಸಿ’ ಎಂದರು. ಆಗ ಪಾಕಿಸ್ತಾನಿ ಪತ್ರಕರ್ತ, ‘ನಾನು ಪಾಕ್ ತಂಡದ ಗುಣಮಟ್ಟದ ಬಗ್ಗೆ ಕೇಳುತ್ತಿದ್ದೇನೆ, ಪ್ರತಿಸ್ಪರ್ಧೆ ಬಗ್ಗೆ ಅಲ್ಲ’ ಎಂದು ಸ್ಪಷ್ಟನೆ ನೀಡಲು ಮುಂದಾದರು. ಅದಕ್ಕೆ ಸೂರ್ಯ, ‘ಸರ್, ಪ್ರತಿಸ್ಪರ್ಧೆ ಹಾಗೂ ಗುಣಮಟ್ಟ ಎರಡೂ ಒಂದೇ. ಪೈಪೋಟಿ ಎಂದರೆ ಏನು ಹೇಳಿ?. ಎರಡು ತಂಡಗಳು 15 ಪಂದ್ಯಗಳಲ್ಲಿ ಸೆಣಸಿದ್ದು, 8-7 ಗೆಲುವು-ಸೋಲಿನ ದಾಖಲೆ ಹೊಂದಿದ್ದರೆ ಅದನ್ನು ಪೈಪೋಟಿ ಎನ್ನಬಹುದು. ಆದರಿಲ್ಲಿ ನಮ್ಮ ದಾಖಲೆ ಗಮನಿಸಿದರೆ ಪೈಪೋಟಿಯೇ ಇಲ್ಲ’ ಎಂದು ನಗುತ್ತಲೇ ನುಡಿದರು.
ಪಾಕಿಸ್ತಾನ ವಿರುದ್ಧ ಭಾರತ 15 ಟಿ20 ಪಂದ್ಯಗಳನ್ನು ಆಡಿದ್ದು 12ರಲ್ಲಿ ಗೆದ್ದು 3ರಲ್ಲಿ ಸೋತಿದೆ. 8 ಪಂದ್ಯಗಳಲ್ಲಿ ಚೇಸ್ ಮಾಡಿದ್ದು, 8ರಲ್ಲೂ ಜಯಿಸಿದೆ.
ಹ್ಯಾರಿಸ್ ರೌಫ್ ಹುಚ್ಚಾಟ!
ಭಾರತ ವಿರುದ್ಧದ ಪಂದ್ಯದ ವೇಳೆ ಪಾಕ್ ವೇಗಿ ಹ್ಯಾರಿಸ್ ರೌಫ್ ಹುಚ್ಚಾಟ ಪ್ರದರ್ಶಿಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೌಂಡರಿ ಗೆರೆ ಬಳಿ ಫೀಲ್ಡ್ ಮಾಡುವಾಗ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ಜೆಟ್‌ಗಳು ಕೆಳಕ್ಕೆ ಬೀಳುವಂತೆ ಕೈಸನ್ನೆ ಮಾಡಿದ ರೌಫ್, ಭಾರತದ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎನ್ನುವ ಪಾಕ್ ಸೇನೆಯ ಸುಳ್ಳು ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು 6-0 ಎಂದು ಕೈಸನ್ನೆ ಮಾಡಿದರು. ಪಂದ್ಯದ ಬಳಿಕ ರೌಫ್‌ರ ಪತ್ನಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ರೌಫ್ 6-0 ಎಂದು ತೋರಿಸುತ್ತಿರುವ ಫೋಟೋವನ್ನು ಹಾಕಿ, ‘ಪಂದ್ಯ ಸೋತಿರಬಹುದು ಆದರೆ ಯುದ್ಧ ಗೆದ್ದಿದ್ದೇವೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದು ಭಾರೀ ಟ್ರೋಲ್ ಆಗಿದೆ.