ಜೈಪುರ: ಹಬ್ಬ ಹರಿದಿನಗಳಲ್ಲಿ ಸಿಹಿ ತಿಂಡಿಗಳಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಜೈಪುರದ ಉದ್ಯಮಿ ಮಹಿಳೆ ಅಂಜಲಿ ಜೈನ್ ಈ ಸಿಹಿತಿಂಡಿಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದರ ಭಾಗವಾಗಿ ಸ್ವರ್ಣ್ ಪ್ರಸಾದ ಎಂಬ ಸಿಹಿ ತಿಂಡಿಯನ್ನು ತಯಾರಿಸಿದ್ದಾರೆ. ಈ ತಿಂಡಿ ಕೇಜಿಗೆ 1.11 ಲಕ್ಷ ರು. ಅಷ್ಟೇ!! ಇದರ ಒಂದು ತುಂಡು 3,000 ರು. ಇದ್ದು, ಇದರಲ್ಲಿ ಚಿನ್ನದ ಭಸ್ಮ, ಉತ್ಕೃಷ್ಟ ಒಣ ಹಣ್ಣುಗಳು ಮತ್ತು ಶುದ್ಧ ಕೇಸರಿಯನ್ನು ಬಳಸಿ ತಯಾರಿಸಲಾಗಿದ್ದು, ಐಷಾರಾಮಿ ಜತೆಗೆ ಆರೋಗ್ಯಕರ ಅಂಶವನ್ನು ಇದರಲ್ಲಿ ಬೆರೆಸಿದ್ದಾರೆ. ಇದಿಷ್ಟೇ ಅಲ್ಲದೇ ಜೈನ್ ಇನ್ನಿತರ ಸಿಹಿ ತಿಂಡಿಗಳನ್ನು ಮಾಡಿದ್ದು, ಅದರ ಬೆಲೆಯೂ 50 ಸಾವಿರದ ಮೇಲೆಯೇ ಇದೆ.
==ಗರೀಬ್ ರಥ ರೈಲಿನ 3 ಬೋಗಿಗೆ ಬೆಂಕಿ: ಪ್ರಾಣ ಹಾನಿ ಇಲ್ಲ
ಫತೇಘರ್ ಸಾಹಿಬ್: ಪಂಜಾಬ್‌ನ ಅಮೃತಸರದಿಂದ ಸಹರ್ಸಾಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶನಿವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ.ಇಲ್ಲಿನ ಸಿರ್ಹಿಂದ್ ರೈಲು ನಿಲ್ದಾಣದ ಬಳಿ ಮುಂಜಾನೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಕೂಡಲೇ ಮತ್ತೊಂದೆಡೆಗೆ ಸ್ಥಳಾಂತರಿಸಲಾಯಿತು. ಇನ್ನು ಬೆಂಕಿ ಅವಘಢದಲ್ಲಿ ರೈಲಿನ ಮೂರು ಬೋಗಿಗಳು ಆಹುತಿಯಾಗಿದ್ದು, ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
==ಕೇರಳ ಹಿಜಾಬ್ ವಿವಾದ: ಶಾಲೆ ಬಿಟ್ಟ ವಿದ್ಯಾರ್ಥಿನಿಗೆ ಶಿಕ್ಷಣ ಸಚಿವ ಬೆಂಬಲ
ತಿರುವನಂತಪುರಂ: ಕೇರಳದ ಶಾಲೆಯೊಂದರಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ್ದಕ್ಕೆ ಆ ಶಾಲೆ ಬಿಡುವ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ ನೆರವಿಗೆ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ನಿಂತಿದ್ದು, ‘ಆಕೆ ಬೇರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದಕ್ಕೆ ಸರ್ಕಾರದಿಂದ ಬೇಕಾಗುವ ನೆರವು ನೀಡುತ್ತೇವೆ’ ಎಂದಿದ್ದಾರೆ.ಕೇರಳದ ಪಲ್ಲುರುತ್ತಿಯ ಸಂತ ರೀಟಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಮಗಳನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧಾರ ಕೈಗೊಂಡ ಬೆನ್ನಲ್ಲೇ ಸಚಿವರು ಈ ರೀತಿ ಹೇಳಿದ್ದಾರೆ. ಇದರ ಬಗ್ಗೆ ಮಾತನಾ ಡಿರುವ ಅವರು, ‘ ವಿದ್ಯಾರ್ಥಿನಿ ಆಸಕ್ತಿಯಿಂದ ಸರ್ಕಾರವನ್ನು ಸಂಪರ್ಕಿಸಿದರೆ ವಿಶೇಷ ಆದೇಶದ ಮೂಲಕ ಅವಳು ಯಾವ ಶಾಲೆಗೆ ಸೇರಬೇಕೆಂದು ಬಯಸುತ್ತಾಳೋ ಅಲ್ಲಿಗೆ ಪ್ರವೇಶ ನೀಡುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
==ಜೈನ ಸಮುದಾಯದಿಂದ ಒಮ್ಮಗೆ ₹149 ಕೋಟಿನ 186 ಲಕ್ಷುರಿ ಕಾರು ಖರೀದಿ
ಗುಜರಾತ್: ದಾಖಲೆಗಳನ್ನು ಹೀಗೂ ಬರೆಯಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಗುಜರಾತಿನಲ್ಲಿಜೈನ ಸಮುದಾಯದವರೆಲ್ಲ ಒಟ್ಟು ಸೇರಿ ಒಂದೇ ದಿನ ಬರೋಬ್ಬರಿ 149 ಕೋಟಿ ರು.ಗೆ 186 ಲಕ್ಷುರಿ ಕಾರು ಖರೀದಿಸಿದ್ದಾರೆ. ಮಾತ್ರವಲ್ಲದೇ ಅದರಿಂದಲೇ 21 ಕೋಟಿ ರು. ರಿಯಾಯಿತಿ ಕೂಡ ಪಡೆದಿದ್ದಾರೆ. ಜೈನ ಸಮುದಾಯದವರಿಗಾಗಿ ಸ್ಥಾಪನೆಗೊಂಡಿರುವ ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ( ಜೆಐಟಿಒ)ನ ಸದಸ್ಯರು 149 ಕೋಟಿ ರು. ಕೊಟ್ಟು 186 ಅತ್ಯಾಧುನಿಕ ಕಾರುಗಳನ್ನು ಖರೀದಿಸಿದ್ದಾರೆ. ಈ ಕಾರುಗಳು ದುಬಾರಿ ಬೆಲೆಯದ್ದಾಗಿದ್ದು 60 ಲಕ್ಷ ರು.ನಿಂದ 1.34 ಕೋಟಿ ರು. ಮೌಲ್ಯವುಳ್ಳದಾಗಿದೆ. ಆದರೆ ಒಂದೇ ಬ್ರೋಕರ್ ಬಳಿ ಕಾರುಗಳನ್ನು ಬುಕ್ಕಿಂಗ್ ಮಾಡಿದ್ದರಿಂದ 21.22 ಕೋಟಿ ರು. ರಿಯಾಯ್ತಿ ದೊರೆತಿದೆ. ದೇಶಾದ್ಯಂತ 65 ಸಾವಿರ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ಮರ್ಸಿಡಿಸ್, ಬಿಎಂಡಬ್ಲ್ಯೂ ಸೇರಿ 15 ಪ್ರಮುಖ ಕಂಪನಿಗಳ ಜತೆ ಮಾತುಕತೆ ನಡೆಸಿ ಡೀಲ್ ಕುದುರಿಸಿತ್ತು.