ಕಾಲ್ತುಳಿತ ಟೀಕಿಸಿ ಕುಂಭಮೇಳವನ್ನು ಮೃತ್ಯುಕುಂಭ ಎಂದು ಟೀಕಿಸಿದವರಿಗೆ ತಮ್ಮ ರಾಜ್ಯದಲ್ಲಿ ಹೋಳಿ ಗದ್ದಲ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ.
ಗೋರಖ್‌ಪುರ: ‘ಕಾಲ್ತುಳಿತ ಟೀಕಿಸಿ ಕುಂಭಮೇಳವನ್ನು ಮೃತ್ಯುಕುಂಭ ಎಂದು ಟೀಕಿಸಿದವರಿಗೆ ತಮ್ಮ ರಾಜ್ಯದಲ್ಲಿ ಹೋಳಿ ಗದ್ದಲ ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ, ‘ಯುಪಿ ಜನಸಂಖ್ಯೆ 25 ಕೋಟಿ. ಅಲ್ಲಿ ಶಾಂತಿಯುತ ಹೋಳಿ ನಡೆದಿದೆ.
ಆದರೆ ಬಂಗಾಳದಲ್ಲಿ ಹೋಳಿ ವೇಳೆ ಸಂಘರ್ಷ ನಡೆದಿದೆ. ಸಂಘರ್ಷ ನಿಯಂತ್ರಿಸಲು ಸಾಧ್ಯವಾಗದವರು ಮಹಾಕುಂಭವನ್ನು ಮೃತ್ಯು ಕುಂಭ ಎಂದಿದ್ದರು. ಇದು ಮೃತ್ಯು (ಸಾವು) ಅಲ್ಲ, ಮೃತ್ಯುಂಜಯ (ಸಾವಿನ ಮೇಲಿನ ಗೆಲುವು) ಮಹಾಕುಂಭ ಎಂದು ಹೇಳಿದ್ದೇವೆ’ ಎಂದು ಮಮತಾಗೆ ಯೋಗಿ ತಿರುಗೇಟು ನೀಡಿದ್ದಾರೆ.
ಹಸೀನಾ ಟೀಕಿಸಿದ್ದಕ್ಕೆ ಸಹಪಾಠಿ ಹತ್ಯೆ : 20 ವಿದ್ಯಾರ್ಥಿಗಳಿಗೆ ಗಲ್ಲು
ಢಾಕಾ: ಬಾಂಗ್ಲಾದೇಶದ ಪ್ರತಿಷ್ಠಿತ ವಿವಿಯಲ್ಲಿ 2019 ರಲ್ಲಿ ಸಹಪಾಠಿಯನ್ನೇ ಹತ್ಯೆಗೈದ 20 ವಿದ್ಯಾರ್ಥಿಗಳಿಗೆ ಮರಣದಂಡನೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ. 2019ರ ಅ.7ರಂದು ಬಾಂಗ್ಲಾದೇಶ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿವಿಯ ವಿದ್ಯಾರ್ಥಿ ಅಬ್ರಾರ್ ಫಹಾದ್‌ನನ್ನು ಅಂದಿನ ಶೇಖ್ ಹಸೀನಾ ಸರ್ಕಾರವನ್ನು ಟೀಕಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ ಎಂಬ ಕಾರಣಕ್ಕೆ ಸಹಪಾಠಿಗಳೇ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಎಲ್ಲಾ ಅಪರಾಧಿಗಳು ಬಾಂಗ್ಲಾದ ಪದಚ್ಯುತ ಪ್ರಧಾನಿ ಹಸೀನಾರ ಅವರ ಅವಾಮಿ ಲೀಗ್‌ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛತ್ರ ಲೀಗ್‌ಗೆ ಸೇರಿದವರಾಗಿದ್ದಾರೆ.
ಮೆಸಿಡೋನಿಯಾದ ನೈಟ್‌ಕ್ಲಬ್‌ನಲ್ಲಿ ಬೆಂಕಿ ಅವಘಡ: 51 ಸಾವು
ಸ್ಕೋಪ್ಜೆ: ಮೆಸಿಡೋನಿಯಾ ದೇಶದ ಕೊಕಾನಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ನೈಟ್‌ಕ್ಲಬ್‌ವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು 51 ಜನ ಮೃತಪಟ್ಟಿದ್ದಾರೆ. ಪ್ಲಸ್ ನೈಟ್‌ಕ್ಲಬ್‌ನಲ್ಲಿ ಸ್ಥಳೀಯ ಗುಂಪಿನ ಸಂಗೀತ ಕಚೇರಿ ವೇಳೆ ನಸುಕಿನ ಜಾವ 2.35ಕ್ಕೆ ಬೆಂಕಿ ಕಿಡಿ ಕಾಣಿಸಿಕೊಂಡಿದೆ. ಬೆಂಕಿಯಾಟದ ಪ್ರದರ್ಶನ ವೇಳೆ ಮೇಲ್ಛಾವಣಿಗೆ ಬೆಂಕಿ ತಗುಲಿದೆ. ಇದರಿಂದ ಅಲ್ಲಿದ್ದವರು ಗಲಿಬಿಲಿಗೊಂಡು ಓಡುತ್ತಿರುವುದನ್ನು ವಿಡಿಯೋಗಳು ತೋರಿಸಿವೆ. ಘಟನೆಯಲ್ಲಿ 118 ಮಂದಿಯನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಲ್ಲರ ಚೇತರಿಕೆಗೆ ಹೆಚ್ಚು ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಅರ್ಬೆನ್ ತಾರಾವರಿ ಸುದ್ದಿಗಾರರಿಗೆ ತಿಳಿಸಿದರು.
ಹೋಳಿ ವೇಳೆ ನಮಾಜ್: ಯುಪಿ ವಿದ್ಯಾರ್ಥಿ ಬಂಧನ
ಮೀರತ್: ಉತ್ತರ ಪ್ರದೇಶದ ಖಾಸಗಿ ವಿಶ್ವವಿದ್ಯಾನಿಲಯದ ಮುಕ್ತ ಆವರಣದಲ್ಲಿ ನಮಾಜ್ ಮಾಡಿ, ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಖಲೀದ್ ಪ್ರಧಾನ್, ಬಂಧನಕ್ಕೊಳಗಾಗಿರುವ ವಿದ್ಯಾರ್ಥಿ. ಇಲ್ಲಿನ ಐಐಎಂಟಿ ವಿಶ್ವವಿದ್ಯಾನಿಲಯದ ಹೋಳಿ ಆಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕ್ಯಾಂಪಸ್‌ನಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋ ಹರಿದಾಡತೊಡಗಿತ್ತು. ಇದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಬೆನ್ನಲ್ಲೇ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಧಿತ ವಿದ್ಯಾರ್ಥಿ ಪ್ರಧಾನ್ ಮತ್ತು ಮೂವರು ಭದ್ರತಾ ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅಮಾನತುಗೊಳಿಸಿದೆ.