ಲಾಸ್ ಏಂಜಲಿಸ್: ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್‌ನಲ್ಲಿ ಭಾರೀ ಕಾಳ್ಗಿಚ್ಚು ಸಂಭವಿಸಿದ್ದು ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದ್ದು, ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.
ಮಂಗಳವಾರ ಸಂಜೆ ಕಾಣಿಸಿಕೊಂಡ ಬೆಂಕಿ, ಬುಧವಾರದ ವೇಳೆಗೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪರಿಸ್ಥಿತಿ ಅಧಿಕಾರಿಗಳ ಕೈಮೀರಿದೆ. ಹೀಗಾಗಿ ನೂರಾರು ಮನೆಗಳು, ವಾಹನಗಳು ಅಗ್ನಿಗೆ ಆಹುತಿಯಾಗಿದ್ದು, ಸಾವಿರಾರು ಎಕರೆ ಕಾಡು ಸುಟ್ಟು ಭಸ್ಮವಾಗಿದೆ.
ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಾವಿರಾರು ಜನರು ಮನೆಗಳಿಂದ ಹೊರಗೆ ಓಡಿಬಂದ ಕಾರಣ ಸಂಚಾರಕ್ಕೂ ಅಡ್ಡಿಯಾಗಿದೆ. ಜೊತೆಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ವಯಸ್ಕರು ಆಂಬ್ಯುಲೆನ್ಸ್, ಬಸ್‌ಗಳಿಗೆ ಕಾಯುತ್ತಿದ್ದರೆ, ಹಿರಿಯ ನಾಗರಿಕರಿದ್ದ ಕೇಂದ್ರವೊಂದರಲ್ಲಿದ್ದವರನ್ನು ಗಾಲಿಕುರ್ಚಿ ಹಾಗೂ ಹಾಸಿಗೆಗಳ ಸಮೇತ ಹೊರಕರೆತಂದ ಘಟನೆ ನಡೆದಿದೆ.
ಅತ್ತ ಖ್ಯಾತ ವ್ಯಕ್ತಿಗಳು ವಾಸವಿರುವ, ಕರಾವಳಿ ಪ್ರದೇಶವಾದ ಪೆಸಿಫಿಕ್ ಪಾಲಿಸೇಡ್ಸ್‌ನತ್ತಲೂ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದ್ದು, ಹಲವು ಮನೆ ಹಾಗೂ ಕಚೇರಿಗಳನ್ನು ಆವರಿಸಿಕೊಂಡಿದೆ. ಈ ವೇಳೆ ಜನ ನಡುರಸ್ತೆಯಲ್ಲೇ ವಾಹನಗಳಿಂದ ಇಳಿದು ಬರಿಗಾಲಲ್ಲೇ ಓಡತೊಡಗಿದ ವಿಡಿಯೋಗಳು ಹರಿದಾಡುತ್ತಿವೆ.
ರಾತ್ರಿ ವೇಳೆ ಸ್ಯಾನ್ ಫೆರ್ನಾಂಡೋ ಕಣಿವೆಯಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಈ ವೇಳೆ ಗಾಳಿಯು ಗಂಟೆಗೆ 97 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ರಕ್ಷಣೆಗೆ ಧಾವಿಸಿ ಅಗ್ನಿಶಾಮಕ ವಿಮಾನಗಳ ಹಾರಾಟವನ್ನೂ ಕಷ್ಟಕರಗೊಳಿಸಿದೆ.
ಬೈಡನ್ ಪ್ರವಾಸ ರದ್ದು: 2 ರಾಷ್ಟ್ರೀಯ ಸ್ಮಾರಕಗಳ ಸ್ಥಾಪನೆಗೆ ಇನ್‌ಲೆಂಡ್‌ಗೆ ತೆರಳಬೇಕಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಪ್ರವಾಸವನ್ನು ಕಾಡ್ಗಿಚ್ಚಿನ ಕಾರಣ ರದ್ದುಗೊಳಿಸಲಾಗಿದೆ.
ಎಷ್ಟು ಹಾನಿ?: ಕಾಡ್ಗಿಚ್ಚಿನಿಂದ ಎಷ್ಟು ಕಟ್ಟಡಗಳಿಗೆ ಹಾನಿಯಾಗಿದೆ ಎಂಬ ನಿಖರ ಮಾಹಿತಿ ಇಲ್ಲವಾದರೂ ಸುಮಾರು 30,000 ಜನರ ಸ್ಥಳಾಂತರಿಸಲಾಗಿದೆ. 13,000ಕ್ಕೂ ಅಧಿಕ ಕಟ್ಟಡಗಳಿಗೆ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 167,000 ಜನರು ವಿದ್ಯುತ್ ಸರಬರಾಜಿಲ್ಲದೆ ಪರದಾಡುತ್ತಿದ್ದಾರೆ.
ಕಾಡ್ಗಿಚ್ಚಿಗೆ ಕಾರಣವೇನು?
ಕಳೆದ ಮೇ ತಿಂಗಳಿಂದ 0.1 ಇಂಚಿಗಿಂತ ಅಧಿಕ ಮಳೆಯನ್ನೇ ಕಾಣದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಒಣ ಗಾಳಿ ಬೀಸುತ್ತಿದ್ದು, ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಉಂಟಾದ ಕಾಡ್ಗಿಚ್ಚು ಸುತ್ತಮುತ್ತಲಿನ ಪ್ರದೇಶಗಳಿಗೆ ವೇಗವಾಗಿ ಹಬ್ಬಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಸ್ಥಳಾಂತರಗೊಂಡ ನಟರು
ನಟ ಬೆನ್ ಅಫ್ಲೆಕ್, ನಟ ಟಾಮ್ ಹ್ಯಾಂಕ್ಸ್, ನಟಿ ರೀಟಾ ವಿಲ್ಸನ್, ಮಾರ್ಕ್ ಹ್ಯಾಮಿಲ್, ಪಾಪ್ ಸ್ಟಾರ್ ಹಾಗೂ ನಟಿ ಮ್ಯಾಂಡಿ ಮೂರ್ ಸೇರಿದಂತೆ ಹಲವರು ವಾಸಿಸುತ್ತಿದ್ದ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ ಕಾರಣ ಅವರನ್ನು ಸ್ಥಳಾಂತರಿಸಲಾಯಿತು.