ಬಂಗಾಳ ಪಡಿತರ ಹಗರಣ: ಟಿಎಂಸಿ ನಾಯಕ ಶಂಕರ್ ಅಧ್ಯ ಬಂಧನ

KannadaprabhaNewsNetwork | Updated : Jan 07 2024, 10:55 AM IST

ಸಾರಾಂಶ

ಪ.ಬಂಗಾಳದ ಪಡಿತರ ಹಗರಣದಲ್ಲಿ ಟಿಎಂಸಿ ನಾಯಕ ಆದ್ಯನನ್ನು ಬಂಧಿಸಿದ್ದು ಮತ್ತೊಬ್ಬ ಆರೋಪಿ ಶೇಖ್‌ಗೆ ಲುಕೌಟ್‌ ನೋಟಿಸ್‌ ನೀಡಲಾಗಿದೆ. ಸರ್ಚ್‌ ವಾರಂಟ್‌ ಇಲ್ಲದೆ ಇ.ಡಿ. ರೇಡ್‌ ಮಾಡಿದೆ ಎಂದು ಶೇಖ್‌ ಬೆಂಬಲಿಗರು ಪ್ರತಿದೂರು ನೀಡಿದೆ.

ಕೋಲ್ಕತಾ: ಪ.ಬಂಗಾಳದ ಪಡಿತರ ಹಗರಣದ ತನಿಖೆಗೆ ಆಗಮಿಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಮೇಲೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆನ್ನಲ್ಲೇ ಹಗರಣದ ಆರೋಪಿ ಹಾಗೂ ಬೊಂಗಾವ್ ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ಅಧ್ಯ ಅವರನ್ನು ಶನಿವಾರ ಮಧ್ಯರಾತ್ರಿ ಇ.ಡಿ. ಬಂಧಿಸಿದೆ.

ಇನ್ನೊಂದೆಡೆ ಪರಾರಿಯಾಗಿರುವ ಹಗರಣದ ಇನ್ನೊಬ್ಬ ಆರೋಪಿ ಹಾಗೂ ತೃಣಮೂಲ ಕಾಂಗ್ರೆಸ್‌ ನಾಯಕ ಶಹಜಹಾನ್‌ ಶೇಖ್‌ ವಿರುದ್ಧ ಶನಿವಾರ ಇ.ಡಿ. ಲುಕೌಟ್‌ ನೋಟಿಸ್‌ ಜಾಗೊಳಿಸಿದೆ. ಆಧ್ಯ ಅವರನ್ನು ತೀವ್ರ ಶೋಧದ ಬಳಿಕ ಇ.ಡಿ. ಬಂಧಿಸಿದರೆ, ಶೇಖ್‌ಗೆ ಹುಡುಕಾಟ ಮುಂದುವರಿದಿದೆ.

ಗುರುವಾರ ರಾತ್ರಿ ಇ.ಡಿ. ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಡಿತರ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧ್ಯಾ ಮತ್ತು ಶೇಖ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದರು. ಆಗ ಅಧಿಕಾರಿಗಳ ಮೇಲೆ ಸಾವಿರಾರು ತೃಣಮೂಲ ಕಾರ್ಯಕರ್ತರು ಹಿಂಸಾತ್ಮಕ ದಾಳಿ ನಡೆಸಿದ್ದರು. 

ಇ.ಡಿ. ವಿರುದ್ಧವೇ ದೂರು: ಈ ನಡುವೆ, ಇ.ಡಿ. ಅಧಿಕಾರಿಗಳು ಯಾವುದೇ ಸರ್ಚ್ ವಾರಂಟ್‌ ಇಲ್ಲದೇ ದಾಳಿಗೆ ಬಂದಿದ್ದರು. ಸರ್ಚ್‌ ವಾರಂಟ್‌ ತೋರಿಸು ಎಂದಾಗ ನಮ್ಮನ್ನು ಬಲವಂತವಾಗಿ ನೂಕಿ ಶಹಜಹಾನ್ ಶೇಖ್‌ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿದರು ಎಂದು ಇ.ಡಿ. ವಿರುದ್ಧ ಶೇಖ್‌ ಅವರ ನೌಕರ ನಜಾತ್‌ ಪೊಲೀಸ್‌ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.

ಈಗಾಗಲೇ 1000 ಜನರು ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದರು. ನಮ್ಮನ್ನು ಹತ್ಯೆ ಮಾಡಲೆಂದೇ ಈ ದಾಳಿ ನಡೆದಿತ್ತು ಎಂದು ಇದೇ ಠಾಣೆಯಲ್ಲಿ ಇ.ಡಿ. ಅಧಿಕಾರಿಗಳು ದೂರು ನೀಡಿದ್ದಾರೆ.

ಏತನ್ಮಧ್ಯೆ, ಇ.ಡಿ. ತಂಡದ ಮೇಲೆ ನಡೆದ ದಾಳಿಯು ‘ಪ್ರಚೋದನೆಯ ಪರಿಣಾಮ’ವಾಗಿದೆ. ಬಿಜೆಪಿ ಇಚ್ಛೆಯ ಮೇರೆಗೆ ಕೇಂದ್ರೀಯ ಸಂಸ್ಥೆ ತನ್ನ ಪಕ್ಷದ ನಾಯಕನ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಆರೋಪಿಸಿದ್ದಾರೆ.

Share this article