ಜನ್ಮ ದಿನದಂದೂ ಹಿಂದಿ ವಿರುದ್ಧ ಸಿಎಂ ಸ್ಟಾಲಿನ್‌ ಸಮರ : ತಮಿಳುನಾಡು ಹೋರಾಡುತ್ತದೆ, ಜಯಿಸುತ್ತದೆ’ ಎಂದು ಪ್ರಮಾಣ

KannadaprabhaNewsNetwork | Updated : Mar 02 2025, 06:18 AM IST

ಸಾರಾಂಶ

ಶನಿವಾರ 72ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌, ಕೇಂದ್ರದ ಹಿಂದಿ ಹೇರಿಕೆ ವಿರುದ್ಧದ ಸಮರವನ್ನು ಮುಂದುವರೆಸಿದ್ದಾರೆ.

ಚೆನ್ನೈ: ಶನಿವಾರ 72ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌, ಕೇಂದ್ರದ ಹಿಂದಿ ಹೇರಿಕೆ ವಿರುದ್ಧದ ಸಮರವನ್ನು ಮುಂದುವರೆಸಿದ್ದಾರೆ.

ಪರಿವಾರ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದ ಅವರು, ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡಿ ಹಿಂದಿ ಹೇರಿಕೆಯನ್ನು ವಿರೋಧಿಸುವ ಏಕೈಕ ಗುರಿಯನ್ನು ತಲುಪುವ ಉದ್ದೇಶದಿಂದ ‘ತಮಿಳುನಾಡು ಹೋರಾಡುತ್ತದೆ, ಜಯಿಸುತ್ತದೆ’ ಎಂದು ಪ್ರಮಾಣ ಮಾಡಿಸಿದರು.

ಬಳಿಕ ತಮ್ಮ ಜನ್ಮದಿನದ ಸಂದೇಶವಾಗಿ, ‘ರಾಜ್ಯ ಸ್ವಾಯತ್ತತೆ, ಹಿಂದಿ ಹೇರಿಕೆಗೆ ವಿರೋಧ ಮತ್ತು ದ್ವಿಭಾಷಾ ನೀತಿ ತತ್ವಗಳಿಗೆ ಬದ್ಧವಾಗಿರುತ್ತೇನೆ. ತಮಿಳು ತಾಯನ್ನು ರಕ್ಷಿಸುತ್ತೇನೆ ಮತ್ತು ತಮಿಳುನಾಡಿನ ಹಕ್ಕುಗಳನ್ನು ಎತ್ತಿಹಿಡಿಯುತ್ತೇನೆ’ ಎಂದರು.

ಸ್ಟಾಲಿನ್‌ ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಆರ್‌.ಎನ್‌. ರವಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಹಲವು ನಾಯಕರು ಶುಭ ಕೋರಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಸಭೆಗೆ ಬಿಜೆಪಿ ಹೋಗಲ್ಲ: ಅಣ್ಣಾಮಲೈ

ಚೆನ್ನೈ: ಕ್ಷೇತ್ರ ಮರುವಿಂಗಡಣೆ ಕುರಿತು ಮಾ.5ರಂದು ಸಿಎಂ ಎಂ.ಕೆ. ಸ್ಟಾಲಿನ್‌ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಈ ಬಗ್ಗೆ ಸ್ಟಾಲಿನ್‌ಗೆ ಬರೆದ ಪತ್ರದಲ್ಲಿ, ಕ್ಷೇತ್ರ ಮರುವಿಂಗಡಣೆಯ ಬಗ್ಗೆ ಅಧಿಕೃತ ಮಾಹಿತಿ ಲಭಿಸುವ ಮೊದಲೇ ಈ ಬಗ್ಗೆ ನಿಮ್ಮ ಕಾಲ್ಪನಿಕ ಭಯವನ್ನು ಹರಡಲಾಗುತ್ತಿದೆ’ ಎಂದು ಹೇಳಲಾಗಿದೆ.

ದಿಲ್ಲಿಯ ತಮಿಳುನಾಡು ಭವನಕ್ಕೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯ ತಮಿಳುನಾಡು ಭವನಕ್ಕೆ ಶನಿವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಆದರೆ ದೆಹಲಿ ಪೊಲೀಸರು ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ತಕ್ಷಣದ ಪ್ರತಿಕ್ರಿಯೆ ನೀಡಿ ಶೋಧ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಡಿಎಫ್‌ಎಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this article