ಕಾಟನ್‌ ಕ್ಯಾಂಡಿಯಲ್ಲಿ ಕ್ಯಾನ್ಸರ್‌ ಅಂಶ ಪತ್ತೆ: ತಮಿಳುನಾಡು ನಿಷೇಧ

KannadaprabhaNewsNetwork | Updated : Feb 18 2024, 08:23 AM IST

ಸಾರಾಂಶ

ಮಕ್ಕಳಿಗೆ ಪ್ರಿಯವಾದ ತಿನಿಸುಗಳಲ್ಲಿ ಒಂದಾದ ಕಾಟನ್‌ ಕ್ಯಾಂಡಿ (ಸಕ್ಕರೆ ಮಿಠಾಯಿ, ಬಾಂಬೆ ಮಿಠಾಯಿ) ಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ಮಾರಾಟಕ್ಕೆ ತಮಿಳುನಾಡು ಸರ್ಕಾರ ನಿಷೇಧ ಹೇರಿದೆ.

ಚೆನ್ನೈ: ಮಕ್ಕಳಿಗೆ ಪ್ರಿಯವಾದ ತಿನಿಸುಗಳಲ್ಲಿ ಒಂದಾದ ಕಾಟನ್‌ ಕ್ಯಾಂಡಿ (ಸಕ್ಕರೆ ಮಿಠಾಯಿ, ಬಾಂಬೆ ಮಿಠಾಯಿ) ಯಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳ ಮಾರಾಟಕ್ಕೆ ತಮಿಳುನಾಡು ಸರ್ಕಾರ ನಿಷೇಧ ಹೇರಿದೆ.

ಇತ್ತೀಚೆಗಷ್ಟೇ ಗೋವಾದ ಮಾಪುಸಾ ನಗರದಲ್ಲಿ ಸೋಪ್‌ ಪೌಡರ್‌ ಬಳಸಿ ತಯಾರಿಸಿದ ಸಾಸ್‌ಗಳನ್ನು ಬಳಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಗೋಬಿ ಮಂಚೂರಿ ಮಾರಾಟ ನಿಷೇಧಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಜನಪ್ರಿಯ ತಿನಿಸಿಗೆ ನಿಷೇಧ ಹೇರಲಾಗಿದೆ.

ನಿಷೇಧ ಏಕೆ?
ಕಾಟನ್‌ ಕ್ಯಾಂಡಿಯನ್ನು ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ವಿವಿಧೆಡೆ ಮಾರಾಟ ಮಾಡುತ್ತಿದ್ದ ಕಾಟನ್‌ ಕ್ಯಾಂಡಿಯನ್ನು ಪರೀಕ್ಷೆಗೆ ಒಳಪಡಿಸಿತ್ತು.

ಈ ವೇಳೆ ಕ್ಯಾಂಡಿಗೆ ಬಣ್ಣ ನೀಡಲು ಬಳಸಲಾಗುವ ರಾಸಾಯನಿಕದಲ್ಲಿ ಕ್ಯಾನ್ಸರ್‌ ತರುವ ‘ರೊಡಾಮಿನ್ಬೆ-ಬಿ’ ಇರುವುದು ದೃಢಪಟ್ಟಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದು ಆಹಾರ ಭದ್ರತಾ ಕಾಯ್ದೆ ಉಲ್ಲಂಘನೆಯಾಗಿದೆ. 

ಹೀಗಾಗಿ ಕಾಟನ್‌ ಕ್ಯಾಂಡಿಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತಮಿಳುನಾಡು ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆದೇಶಿಸಿದೆ.

Share this article