ತಮಿಳುನಾಡಿನ 21 ದೇವಸ್ಥಾನಗಳಿಗೆ ಭಕ್ತರು ದಾನ ರೂಪದಲ್ಲಿ ನೀಡಿದ್ದ 1000 ಕೆ.ಜಿ. ಚಿನ್ನ ಕರಗಿಸಿದ ಸರ್ಕಾರ

KannadaprabhaNewsNetwork |  
Published : Apr 18, 2025, 12:38 AM ISTUpdated : Apr 18, 2025, 06:09 AM IST
ತಮಿಳು ನಾಡು | Kannada Prabha

ಸಾರಾಂಶ

‘ತಮಿಳುನಾಡಿನ 21 ದೇವಸ್ಥಾನಗಳಿಗೆ ಭಕ್ತರು ದಾನ ರೂಪದಲ್ಲಿ ನೀಡಿದ್ದ ಹಾಗೂ ಬಳಕೆಯಾಗದ 1000 ಕೆ.ಜಿ. ಚಿನ್ನದ ಆಭರಣಗಳನ್ನು ಕರಗಿಸಲಾಗಿದೆ. ಅವನ್ನು 24 ಕ್ಯಾರೆಟ್‌ ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಿ ಬ್ಯಾಂಕ್‌ನಲ್ಲಿಡಲಾಗಿದೆ. 

ಚೆನ್ನೈ: ‘ತಮಿಳುನಾಡಿನ 21 ದೇವಸ್ಥಾನಗಳಿಗೆ ಭಕ್ತರು ದಾನ ರೂಪದಲ್ಲಿ ನೀಡಿದ್ದ ಹಾಗೂ ಬಳಕೆಯಾಗದ 1000 ಕೆ.ಜಿ. ಚಿನ್ನದ ಆಭರಣಗಳನ್ನು ಕರಗಿಸಲಾಗಿದೆ. ಅವನ್ನು 24 ಕ್ಯಾರೆಟ್‌ ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಿ ಬ್ಯಾಂಕ್‌ನಲ್ಲಿಡಲಾಗಿದೆ. ಈ ಚಿನ್ನದಿಂದಾಗಿಯೇ ವಾರ್ಷಿಕ 17.81 ಕೋಟಿ ರು. ಆದಾಯ ಬರುತ್ತಿದೆ’ ಎಂದು ತಮಿಳುನಾಡು ಸರ್ಕಾರ ಗುರುವಾರ ತಿಳಿಸಿದೆ.

ಹಿಂದೂ ಧಾರ್ಮಿಕ ಮತ್ತು ದಾನ ಹಾಗೂ ದತ್ತಿ ಇಲಾಖೆಯ ಟಿಪ್ಪಣಿಯನ್ನು ತಮಿಳುನಾಡಿನ ವಿಧಾನಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವ ಪಿ.ಕೆ.ಶೇಖರ್‌ ಬಾಬು ಮಂಡಿಸಿ ಈ ಮಾಹಿತಿ ನೀಡಿದ್ದಾರೆ.

‘ಭಕ್ತರು ದಾನವಾಗಿ ನೀಡಿದ ಆದರೆ ದೇವರ, ದೇವಸ್ಥಾನದ ಕಾರ್ಯಕ್ಕೆ ಬಳಸದ ಚಿನ್ನವನ್ನು ಮುಂಬೈನಲ್ಲಿರುವ ಸರ್ಕಾರಿ ಟಂಕಕಸಾಲೆಯಲ್ಲಿ ಕರಗಿಸಿ 24 ಕ್ಯಾರೆಟ್‌ನ ಬಾರ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಇದನ್ನು ನಂತರ ಸ್ಟೇಟ್‌ ಬ್ಯಾಂಕ್‌ನ ಗೋಲ್ಡ್‌ ಇನ್‌ವೆಸ್ಟ್‌ ಮೆಂಟ್‌ ಸ್ಕೀಂನಡಿ ಹೂಡಿಕೆ ಮಾಡಲಾಗಿದೆ. ಈ ಹೂಡಿಕೆಯಿಂದ ಬರುವ ಬಡ್ಡಿದರದಿಂದ ಸಂಬಂಧಿಸಿದ ದೇಗುಲಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಸಮಿತಿಯನ್ನೂ ರಚಿಸಲಾಗಿದೆ.

ಮಾ.31, 2025ರ ವರೆಗೆ ಒಟ್ಟಾರೆ 10,74,123.488 ಗ್ರಾಂ. ಶುದ್ಧ ಚಿನ್ನವನ್ನು 21 ದೇವಸ್ಥಾನಗಳಿಂದ ಸಂಗ್ರಹಿಸಲಾಗಿದ್ದು, ಇದಕ್ಕೆ ವಾರ್ಷಿಕ 1,781.25 ಲಕ್ಷ ಬಡ್ಡಿದರ ಸಿಗುತ್ತಿದೆ. ಇದರಲ್ಲಿ ತಿರುಚಿನಾಪಳ್ಳಿಯ ಸಮಯಪುರಂನ ಅರುಳ್‌ಮಿಗು ಮಾರಿಯಮ್ಮನ್‌ ದೇಗುಲದ ಪಾಲು 424.26 ಕೆ.ಜಿ. ಆಗಿದೆ. ಇದೇ ರೀತಿ ಈವರೆಗೆ ಬಳಕೆ ಮಾಡದ ಮತ್ತು ಬಳಕೆ ಮಾಡಲಾಗದ ಬೆಳ್ಳಿಯ ವಸ್ತುಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ.

PREV

Recommended Stories

ಉತ್ತರಾಖಂಡ ಮೇಘಸ್ಫೋಟಕ್ಕೆ ಅರ್ಧ ಹಳ್ಳಿಯೇ ಭೂಸಮಾಧಿ
ಕೇರಳದ ಎಲ್ಲಾ ಶಾಲೆಗಳಲ್ಲಿ ಇನ್ನು ಲಾಸ್ಟ್‌ ಬೆಂಚೇ ಇರಲ್ಲ!