ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ: ಯಾರಿಗೆ ಒಲಿಯಲಿದೆ ಪಟ್ಟ..?

KannadaprabhaNewsNetwork | Updated : Oct 08 2024, 04:42 AM IST

ಸಾರಾಂಶ

ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ.  

ಪಿಟಿಐ ಚಂಡೀಗಢ/ಜಮ್ಮು/ಶ್ರೀನಗರ :  ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ. ಚುನಾವಣೋತ್ತರ ಸಮೀಕ್ಷೆಗಳು ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಮತ್ತು ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್‌- ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟಕ್ಕೆ ಮುನ್ನಡೆ ಇಲ್ಲವೇ ಸರಳ ಬಹುಮತದ ಸುಳಿವು ನೀಡಿವೆ.

ಒಂದು ವೇಳೆ ಸಮೀಕ್ಷಾ ವರದಿಗಳು ನಿಜವಾದಲ್ಲಿ ಹರ್ಯಾಣದಲ್ಲಿ ಹ್ಯಾಟಿಕ್ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಮತ್ತು ರಾಜ್ಯದಲ್ಲಿ ಬೇರೂರುವ ಯತ್ನದಲ್ಲಿದ್ದ ಆಪ್‌ಗೆ ಭಾರೀ ಹೊಡೆತ ನೀಡಲಿದೆ. ಮತ್ತೊಂದೆಡೆ ದಶಕದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಹಿಡಿಯಲಿದೆ. ಇನ್ನು ಜಮ್ಮು- ಕಾಶ್ಮೀರದಲ್ಲೂ 2014ರ ಬಳಿಕದ ಮೊದಲ ಮತ್ತು ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ನಡೆಯುತ್ತಿರುವ ಪ್ರಥಮ ಚುನಾವಣೆ ಇದಾದ ಕಾರಣ ಎಲ್ಲರ ಗಮನ ಅತ್ತಲೂ ನೆಟ್ಟಿದೆ.

ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ 1 ಹಂತದಲ್ಲಿ, ಜಮ್ಮು-ಕಾಶ್ಮೀರದ 90 ಸ್ಥಾನಕ್ಕೆ 3 ಹಂತದಲ್ಲಿ ಚುನಾವಣೆ ನಡೆದಿತ್ತು. ಎರಡೂ ರಾಜ್ಯಗಳಲ್ಲಿ ಬಹುಮತಕ್ಕೆ 46 ಸ್ಥಾನ ಬೇಕಿದೆ..

ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಕನಸು:

ಹರ್ಯಾಣದಲ್ಲಿ ಬಿಜೆಪಿ ಸತತ 3ನೇ ಸಲ ಗೆದ್ದು ಅಧಿಕಾರಕ್ಕೇರಲು ಯತ್ನಿಸುತ್ತಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌, ಬಿಜೆಪಿ, ಜೆಜೆಪಿ ಮೈತ್ರಿಕೂಟ, ಐಎನ್‌ಎಲ್‌ಡಿ ಮೈತ್ರಿಕೂಟ, ಆಪ್‌ ಮತ್ತು ಪಕ್ಷೇತರರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆದರೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ ಬಹುಮತದೊಂದಿಗೆ ಜಯ ಸಾಧಿಸಲಿದ್ದು, ಬಿಜೆಪಿ ಘೋರ ಪರಾಭವ ಅನುಭವಿಸಲಿದೆ ಎಂದಿವೆ.

ಕಾಂಗ್ರೆಸ್ ಗೆದ್ದರೆ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಹಾಗೂ ದಲಿತ ನಾಯಕಿ ಕುಮಾರಿ ಸೆಲ್ಜಾ ನಡುವೆ ಸಿಎಂ ಗಾದಿಗೆ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಬಿಜೆಪಿ ತಾನು ಗೆದ್ದರೆ ಹಾಲಿ ಸಿಎಂ ನಯಾಬ್‌ ಸಿಂಗ್‌ ಸೈನಿ ಅವರನ್ನೇ ಮುಂದುವರಿಸುತ್ತೇವೆ ಎಂದಿದ್ದರೂ, ಹಿರಿಯ ಕೇಸರಿ ನಾಯಕ ಅನಿಲ್‌ ವಿಜ್‌ ತಾವೂ ಆಕಾಂಕ್ಷಿ ಎಂದಿದ್ದಾರೆ.

ಕಾಶ್ಮೀರದಲ್ಲಿ 10 ವರ್ಷ ನಂತರ ಚುನಾವಣೆ: ದಶಕದ ಬಳಿಕ ವಿಧಾನಸಭಾ ಚುನಾವಣೆ ಎದುರಿಸಿದ್ದ ಜಮ್ಮು-ಕಾಶ್ಮೀರದ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 2014ರಲ್ಲಿ ಕಡೆಯ ಬಾರಿ ಚುನಾವಣೆ ನಡೆದಾಗಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಪಿಡಿಪಿ- ಬಿಜೆಪಿ ಸರ್ಕಾರ ರಚನೆಯಾಗಿತ್ತು. ಬಳಿಕ ಸರ್ಕಾರ ಕುಸಿದುಬಿದ್ದಿತ್ತು. ಅದಾದ ನಂತರ ಇದೀಗ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಮಾಡಿಕೊಂಡು ಚುನಾವಣೆಗೆ ಸೆಣಸಿವೆ. ಪಿಡಿಪಿ ಮತ್ತು ಬಿಜೆಪಿ ಏಕಾಂಗಿಯಾಗಿ ಕಣಕ್ಕೆ ಇಳಿದಿದಿವೆ.

ಆದರೆ ಇಲ್ಲಿ ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದಿದ್ದರೂ ಬಹುಮತದ ಅನುಮಾನ ವ್ಯಕ್ತಪಡಿಸಿವೆ. ಬಿಜೆಪಿ ಜಮ್ಮುವಿನಲ್ಲಿ ಉತ್ತಮ ಸಾಧನೆ ಮಾಡಿದರ ಕಾಶ್ಮೀರದಲ್ಲಿ ಶೂನ್ಯ ಸಂಪಾದನೆ ಭೀತಿ ಎದುರಿಸುತ್ತಿದೆ. ಅತಂತ್ರ ಸ್ಥಿತಿ ಸೃಷ್ಟಿಯಾದರೆ ಪಿಡಿಪಿ ಹಾಗೂ ಸಣ್ಣಪುಟ್ಟ ಪಕ್ಷ/ಪಕ್ಷೇತರರು ನಿರ್ಣಾಯಕ ಆಗಲಿದ್ದಾರೆ.

Share this article