ಒಪ್ಪಂದ, ಅವಕಾಶದ ಬಾಗಿಲು ತೆರೆಯಲಿದೆ: ಮೋದಿ

KannadaprabhaNewsNetwork |  
Published : Feb 08, 2026, 02:00 AM IST
ಮೋದಿ | Kannada Prabha

ಸಾರಾಂಶ

ಅಮೆರಿಕ ಜತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ವಾಣಿಜ್ಯೋದ್ಯಮಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಮತ್ತು ಮಹಿಳೆಯರು ಹಾಗೂ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಮೇಕ್ ಇನ್‌ ಇಂಡಿಯಾ ಉಪಕ್ರಮವನ್ನು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

- ಇದು ಹೆಚ್ಚುತ್ತಿರುವ ನಂಬಿಕೆಯ ಪ್ರತಿಫಲ: ಪಿಎಂ

ನವದೆಹಲಿ: ಅಮೆರಿಕ ಜತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ವಾಣಿಜ್ಯೋದ್ಯಮಗಳಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಮತ್ತು ಮಹಿಳೆಯರು ಹಾಗೂ ಯುವಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ಮೇಕ್ ಇನ್‌ ಇಂಡಿಯಾ ಉಪಕ್ರಮವನ್ನು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ವ್ಯಾಪಾರ ಒಪ್ಪಂದವು ಭಾರತ ಮತ್ತು ಅಮೆರಿಕ ಎರಡೂ ದೇಶಗಳ ಪಾಲಿಗೆ ಅದ್ಧುತ ಸುದ್ದಿಯಾಗಿದೆ. ಎರಡೂ ದೇಶಗಳ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಸ್ವರೂಪವನ್ನು ಒಪ್ಪಿಕೊಂಡಿದ್ದೇವೆ. ಈ ಒಪ್ಪಂದದ ಸ್ವರೂಪ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ನಂಬಿಕೆ, ಕ್ರಿಯಾಶೀಲತೆಯ ಪ್ರತಿಫಲನವಾಗಿದೆ. ಭಾರತದ ಪರಿಶ್ರಮಿ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ಸ್ಟಾರ್ಟ್ಅಪ್‌ಗಳು, ಮೀನುಗಾರರು ಮತ್ತಿತರರಿಗೆ ಅವಕಾಶಗಳ ಹೊಸ ಬಾಗಿಲನ್ನು ಈ ಒಪ್ಪಂದವು ತೆರೆಯಲಿದೆ. ಮಹಿಳೆಯರು ಮತ್ತು ಯುವಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲಿದೆ ಎಂದು ಪ್ರಧಾನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.

ಈ ಒಪ್ಪಂದವು ಭಾರತ ಮತ್ತು ಅಮೆರಿಕ ನಡುವೆ ಹೂಡಿಕೆ ಮತ್ತು ತಾಂತ್ರಿಕ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. ಭಾರತವು ವಿಕಸಿತ ಭಾರತದತ್ತ ಹೆಜ್ಜೆ ಇಡುವಾಗ ಭವಿಷ್ಯ ಆಧಾರಿತ ಅಂತಾರಾಷ್ಟ್ರೀಯ ಸಹಭಾಗಿತ್ವಗಳನ್ನು ನಿರ್ಮಿಸಲು ಆದ್ಯತೆ ತೋರುತ್ತಿದೆ. ಇದು ನಮ್ಮ ಜನರನ್ನು ಸಬಲಗೊಳಿಸುವುದಷ್ಟೇ ಅಲ್ಲದೆ, ಪರಸ್ಪರ ಸಂಮೃದ್ಧಿಗೂ ಅವಕಾಶ ಮಾಡಿಕೊಡುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಜತೆಗೆ, ಎರಡೂ ದೇಶಗಳ ನಡುವಿನ ಸಂಬಂಧವೃದ್ಧಿಗೆ ವೈಯಕ್ತಿಕ ಬದ್ಧತೆ ಪ್ರದರ್ಶಿಸಿದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೂ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

==

ನಾಮ್‌ ನರೇಂದರ್‌, ಕಾಮ್‌

ಸರೆಂಡರ್‌: ಕಾಂಗ್ರೆಸ್‌ ವ್ಯಂಗ್ಯ

-ಮೋದಿಯ ಅಪ್ಪುಗೆ, ಫೋಟೋ ಕೆಲಸ ಮಾಡಿಲ್ಲ: ಜೈರಾಂ

ನವದೆಹಲಿ: ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದದ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್‌ ಶನಿವಾರ ಕಿಡಿ ಕಾರಿದ್ದು, ‘ನಾಮ್‌ ನರೇಂದರ್‌, ಕಾಮ್‌ ಸರೆಂಡರ್‌ (ಹೆಸರು ನರೇಂದ್ರ, ಕೆಲಸ ಶರಣಾಗತಿ). ಮೋದಿಯವರ ಅಪ್ಪುಗೆ ಮತ್ತು ಫೋಟೋ ಹೆಚ್ಚೇನೂ ಕೆಲಸ ಮಾಡಿಲ್ಲ’ ಎಂದು ವ್ಯಂಗ್ಯವಾಡಿದೆ.

ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಒಪ್ಪಂದದಿಂದಾಗಿ ನಮ್ಮ ಸರಕು ವ್ಯಾಪಾರ ಅಳಿಸಿಹೋಗಿ, ಅಮೆರಿಕದಿಂದ ವಾರ್ಷಿಕ ರಫ್ತು 3 ಪಟ್ಟು ಹೆಚ್ಚುತ್ತದೆ. ಭಾರತದ ಐಟಿ ಮತ್ತು ಇತರ ಸೇವೆಗಳ ರಫ್ತಿನಲ್ಲಿ ಅನಿಶ್ಚಿತತೆ ಮುಂದುವರಿಯುತ್ತದೆ. ಅಲ್ಲದೆ, ಅವುಗಳ ಮೇಲೆ ಹಿಂದಿಗಿಂತಲೂ ಹೆಚ್ಚು ಸುಂಕ ಬೀಳುತ್ತದೆ’ ಎಂದಿದ್ದಾರೆ.‘ಇನ್ನು ಭಾರತ ರಷ್ಯಾದಿಂದ ತೈಲ ಖರೀದಿಸುತ್ತದೆಯೋ ಇಲ್ಲವೋ ಎಂದು ಅಮೆರಿಕ ಗಮನಿಸುತ್ತದೆ. ಖರೀದಿಸುವುದು ಹೌದು ಎಂದಾದರೆ ಶೇ.25 ದಂಡ ಸುಂಕ ಪುನಃ ಜಾರಿಯಾಗುತ್ತದೆ. ಮೋದಿಯವರ ಅಪ್ಪುಗೆ ಮತ್ತು ಫೋಟೋಗಳು ಹೆಚ್ಚು ಕೆಲಸ ಮಾಡಿಲ್ಲ. ಹೌಡಿ ಮೋದಿಗಿಂತ ನಮಸ್ತೆ ಟ್ರಂಪ್‌ ಹೆಚ್ಚು ಮಹತ್ವ ಪಡೆದಿದೆ. ನಾಮ್‌ ನರೇಂದರ್‌, ಕಾಮ್‌ ಸರೆಂಡರ್‌’ ಎಂದು ಟೀಕಿಸಿದ್ದಾರೆ.

==

ಪಿಒಕೆ ಸೇರಿಸಿದ ಭಾರತ

ಮ್ಯಾಪ್‌ ಬಿಡುಗಡೆ: ಪಾಕ್‌ಗೆ

ಅಮೆರಿಕದಿಂದ ಸಂದೇಶ!

ವಾಷಿಂಗ್ಟನ್‌: ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಕುರಿತ ಜಂಟಿ ಹೇಳಿಕೆ ವೇಳೆ ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು, ಪಾಕ್‌ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ಭಾರತದ ಭಾಗವಾಗಿ ತೋರಿಸುವ ನಕ್ಷೆ ಬಿಡುಗಡೆ ಮಾಡಿದೆ. ಅಮೆರಿಕ ಈ ರೀತಿಯ ಭೂಪಟ ಬಿಡುಗಡೆ ಮಾಡಿರುವುದು ಇದೇ ಮೊದಲು. ಇದು ನಮ್ಮ ನಿಜವಾದ ಸ್ನೇಹಿತ ಯಾರು ಎಂದು ಅಮೆರಿಕ ಪಾಕಿಸ್ತಾನಕ್ಕೆ ಸಂದೇಶ ರವಾನಿಸುವ ಪ್ರಯತ್ನವಾಗಿದೆ. ಜೊತೆಗೆ ಪಾಕ್‌ ಆಕ್ರಮಿತ ಕಾಶ್ಮೀರವು ಭಾರತದ ಭಾಗ ಎಂದು ಒಪ್ಪಿಕೊಂಡ ನಿಲುವಿನ ಪ್ರದರ್ಶನವಾಗಿದೆ ಎಂದು ವಿಶ್ಲೇಷಿಸಲಾಗಿದೆ.

==

ಡಿಸೆಂಬರ್‌ನಲ್ಲಿ ರಷ್ಯಾ ತೈಲ

ಖರೀದಿ 38 ತಿಂಗಳ ಕನಿಷ್ಠ

- ಅಮೆರಿಕದ ಸತತ ಒತ್ತಡದ ಬೆನ್ನಲ್ಲೇ ಕಡಿತ । ಅಮೆರಿಕ ತೈಲ ಖರೀದಿ ಏರಿಕೆ

ನವದೆಹಲಿ: ರಷ್ಯಾ ತೈಲ ಖರೀದಿಗೆ ಶೇ.25ರಷ್ಟು ಹೆಚ್ಚುವರಿ ತೆರಿಗೆ, ತೈಲ ಖರೀದಿ ಸ್ಥಗಿತಕ್ಕೆ ಅಮೆರಿಕ ಭಾರತದ ಮೇಲೆ ಒತ್ತಡ ಫಲ ನೀಡಿದಂತೆ ಕಂಡುಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ರಷ್ಯಾದಿಂದ ಭಾರತ 24000 ಕೋಟಿ ರು. ಮೌಲ್ಯದ ತೈಲ ಖರೀದಿ ಮಾಡಿದೆ. ಇದು ಕಳೆದ 38 ತಿಂಗಳಲ್ಲೇ ಅತ್ಯಂತ ಕನಿಷ್ಠ ಮತ್ತು 2025ರ ನವೆಂಬರ್‌ಗೆ ಹೋಲಿಸಿದರೆ ಶೇ.34ರಷ್ಟು ಕಡಿಮೆ ಆಗಿದೆ. ಜೊತೆಗೆ ಈ ಪ್ರಮಾಣವು, ಭಾರತದ ಒಟ್ಟು ತೈಲ ಖರೀದಿಯಲ್ಲಿ ರಷ್ಯಾದ ಪಾಲು ಶೇ.25ಕ್ಕಿಂತಲೂ ಕುಸಿದಿದೆ. ಈ ನಡುವೆ ಅಮೆರಿಖದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣ 2024ರ ಡಿಸೆಂಬರ್‌ಗಿಂತ 2025ರ ಡಿಸೆಂಬರ್‌ಗೆ ಶೇ.31ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಭಾರತ 4772 ಕೋಟಿ ರು. ಮೌಲ್ಯದಷ್ಟು ಖರೀದಿ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಪ್‌ಸ್ಟೀನ್‌ನ ಸ್ವೀಡಿಷ್‌ ಯುವತಿ ಆಫರ್‌ಗೆ ಅನಿಲ್‌ ಅಂಬಾನಿ ಓಕೆ
ವಿಶ್ವಾಸವೇ ಇಂದು ಭಾರತದಶಕ್ತಿಶಾಲಿ ಕರೆನ್ಸಿ: ಪಿಎಂ ಮೋದಿ