ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಷಯದಲ್ಲಿ ಭಾರತ ಸರ್ಕಾರದ ನೇರ ಕೈವಾಡವಿದೆ ಎಂದು ಬಹಿರಂಗವಾಗಿ ಆರೋಪ ಮಾಡುತ್ತಲೇ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಇದೀಗ ಉಲ್ಟಾ ಹೊಡೆದಿದ್ದಾರೆ.
ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಷಯದಲ್ಲಿ ಭಾರತ ಸರ್ಕಾರದ ನೇರ ಕೈವಾಡವಿದೆ ಎಂದು ಬಹಿರಂಗವಾಗಿ ಆರೋಪ ಮಾಡುತ್ತಲೇ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ, ಇದೀಗ ಉಲ್ಟಾ ಹೊಡೆದಿದ್ದಾರೆ. ನಿಜ್ಜರ್ ಹತ್ಯೆ ವಿಷಯದಲ್ಲಿ ನಾವು ಭಾರತದೊಂದಿಗೆ ಕೇವಲ ಗುಪ್ತಚರ ಮಾಹಿತಿ ಹಂಚಿಕೊಂಡಿದ್ದೇವೆಯೇ ಹೊರತೂ ಯಾವುದೇ ಸಾಕ್ಷ್ಯ ನೀಡಿಲ್ಲ. ಭಾರತದ ಮೇಲೆ ಇಂಥ ಆರೋಪ ಮಾಡುವಾಗ ನಮ್ಮ ಬಳಿ ಯಾವುದೇ ಖಚಿತ ಸಾಕ್ಷ್ಯ ಇರಲಿಲ್ಲ ಎಂದು ಹೇಳಿದ್ದಾರೆ.ಕೆನಡಾದ ವಿದೇಶಿ ಹಸ್ತಕ್ಷೇಪ ಸಮಿತಿ ಮುಂದೆ ಬುಧವಾರ ಹಾಜರಾಗಿದ್ದ ಟ್ರುಡೋ ಇಂಥದ್ದೊಂದು ಹೇಳಿಕೆ ನೀಡುವ ಇಷ್ಟು ದಿನ ತಾವು ಹೇಳಿದ್ದು ಸುಳ್ಳು ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.ಟ್ರುಡೋ ಹೇಳಿದ್ದೇನು?: 2023ರ ಜೂನ್‌ನಲ್ಲಿ ನಿಜ್ಜರ್ ಹತ್ಯೆ ನಡೆದಾಗ ಅದೊಂದು ಗ್ಯಾಂಗ್‌ಸ್ಟರ್‌ಗಳ ನಡುವಿನ ಕೃತ್ಯ ಎಂದೇ ನನಗೆ ಮಾಹಿತಿ ಬಂದಿತ್ತು. ಅದಾದ ಕೆಲ ತಿಂಗಳಲ್ಲಿ ನಮ್ಮ ಗುಪ್ತಚರ ವಿಭಾಗ, ನಿಜ್ಜರ್ ಹತ್ಯೆಯಲ್ಲಿ ಭಾರತದ ಸರ್ಕಾರದ ಏಜೆಂಟ್‌ಗಳ ಕೈವಾಡದ ಮಾಹಿತಿ ನೀಡಿತು. ನಂತರ ಫೈವ್ ಐ ದೇಶಗಳು ಸಂಗ್ರಹಿಸಿದ ಮಾಹಿತಿ ಕೂಡಾ ಇದಕ್ಕೆ ಪೂರಕವಾಗಿತ್ತು.ಆದರೆ ಭಾರತದೊಂದಿಗೆ ನಾವು ಹೊಂದಿರುವ ಸುದೀರ್ಘ ಸಂಬಂಧ ಗಮನಿಸಿ ಮತ್ತು ಭಾರತದಲ್ಲಿನ ಜಿ20 ಶೃಂಗದ ಹಿನ್ನೆಲೆಯಲ್ಲಿ ಈ ವಿಷಯವನ್ನು ಹಿಂಬಾಗಿಲ ಮಾತುಕತೆ ಮೂಲಕವೇ ಚರ್ಚೆ ಮಾಡಲು ನಿರ್ಧರಿಸಿದೆವು.
ಇದರ ಭಾಗವಾಗಿ ನಾವು ಭಾರತೀಯ ಅಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸಿ ಎಂದು ಕೋರಿದೆವು. ಆದರೆ ಅವರು ಅದಕ್ಕೆ ಸಾಕ್ಷ್ಯ ಕೇಳಿದರು. ತನಿಖೆಗೆ ಸಹಕಾರದ ಬದಲು ‘ನಿಮ್ಮ ಬಳಿ ಏನೇನು ಮಾಹಿತಿ ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ನಮ್ಮನ್ನೇ ಕೇಳಿದರು. ಅದಕ್ಕೆ ನಾವು ಇಡೀ ಪ್ರಕರಣ ನಿಮ್ಮ ಭದ್ರತಾ ಸಂಸ್ಥೆಗಳ ವ್ಯಾಪ್ತಿಯಲ್ಲೇ ಇರುವ ಕಾರಣ ಅವರಿಗೆ ಏನೇನು ಗೊತ್ತಿದೆ ಎಂಬುದನ್ನು ನೀವೇ ಕಂಡುಕೊಳ್ಳಬೇಕು’ ಎಂದು ಹೇಳಿದೆವು. ಏಕೆಂದರೆ ಆ ಹಂತದಲ್ಲಿ ನಮ್ಮ ಬಳಿ ಇದ್ದಿದ್ದು ಕೇವಲ ಗುಪ್ತಚರ ಮಾಹಿತಿ ಮಾತ್ರ. ಯಾವುದೇ ಸಾಕ್ಷ್ಯ ಇರಲಿಲ್ಲ’ ಎಂದು ಟ್ರುಡೋ ಹೇಳಿದರು.ಬಳಿಕ, ಜಿ20 ಶೃಂಗದಲ್ಲಿ ಭಾಗವಹಿಸಲು ಭಾರತಕ್ಕೆ ತೆರಳಿದಾಗ ಪ್ರಧಾನಿ ಮೋದಿ ಅವರೊಂದಿಗೂ ನಾನು ಈ ವಿಷಯ ಪ್ರಸ್ತಾಪಿಸಿದ್ದೆ. ಆದರೆ ಅವರು ಎಂದಿನಂತೆ ಖಲಿಸ್ತಾನಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.ಇಂಥ ಬೆಳವಣಿಗೆ ನಡುವೆಯೇ ನಾನು ಕೆನಡಾಕ್ಕೆ ಮರಳಿದೆ. ಈ ನಡುವೆ ಸ್ಥಳೀಯ ಮಾಧ್ಯಮಗಳು ನಮ್ಮ ಬಳಿ ಇದ್ದ ಗುಪ್ತಚರ ಮಾಹಿತಿಯನ್ನು ಪ್ರಕಟಿಸಲು ಆರಂಭಿಸಿದೆವು. ಮತ್ತೊಂದೆಡೆ ಇತ್ತೀಚಿನ ಬೆಳವಣಿಗೆಗಳು ಕೆನಡಾದ ಸಾರ್ವಜನಿಕ ಭದ್ರತೆಗೆ ಅಪಾಯ ತರುವಂತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಹೀಗಾಗಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಹೊಸದಾಗಿ ಬಹಿರಂಗಪಡಿಸಬೇಕಾಯಿತು ಎಂದು ಟ್ರುಡೋ ಹೇಳಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.