44 ಕೋಟಿ ಕೊಡಿ ಪಟಾಫಟ್‌ ವೀಸಾ ಪಡೀರಿ : ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್‌

KannadaprabhaNewsNetwork | Updated : Feb 27 2025, 04:10 AM IST

ಸಾರಾಂಶ

ವಿದೇಶಿ ಹೂಡಿಕೆದಾರರ ಆಕರ್ಷಿಸಲು 35 ವರ್ಷಗಳಿಂದ ನೀಡುತ್ತಿದ್ದ ಗ್ರೀನ್‌ಕಾರ್ಡ್‌ ವೀಸಾ ರದ್ದು ಮಾಡಿ ಅದರ ಬದಲು 44 ಕೋಟಿ ಕೊಟ್ಟರೆ ಬಹುತೇಕ ಪೌರತ್ವದ ಎಲ್ಲಾ ಸೌಲಭ್ಯ ಹೊಂದಿರುವ ಪಟಾಫಟ್‌ ವೀಸಾ ದೊರಕಿಸುವ ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ವಾಷಿಂಗ್ಟನ್‌: ವಿದೇಶಿ ಹೂಡಿಕೆದಾರರ ಆಕರ್ಷಿಸಲು 35 ವರ್ಷಗಳಿಂದ ನೀಡುತ್ತಿದ್ದ ಗ್ರೀನ್‌ಕಾರ್ಡ್‌ ವೀಸಾ ರದ್ದು ಮಾಡಿ ಅದರ ಬದಲು 44 ಕೋಟಿ ಕೊಟ್ಟರೆ ಬಹುತೇಕ ಪೌರತ್ವದ ಎಲ್ಲಾ ಸೌಲಭ್ಯ ಹೊಂದಿರುವ ಪಟಾಫಟ್‌ ವೀಸಾ ದೊರಕಿಸುವ ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಅಮೆರಿಕದಲ್ಲಿ ಕಾಯಂ ನೆಲೆಗೆ ಅವಕಾಶ ಮಾಡಿಕೊಡುವ ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವಿದೇಶಿ ಹೂಡಿಕೆದಾರರು ಹಲವು ವರ್ಷಗಳ ಕಾಲ ಕಾಯಬೇಕಿತ್ತು. ಆದರೆ ಇದೀಗ ಟ್ರಂಪ್‌ ಆಡಳಿತ ಪರಿಚಯಿಸುತ್ತಿರುವ ಹೊಸ ವೀಸಾ ನಿಯಮದಡಿ 5 ಶತಕೋಟಿ ಡಾಲರ್‌ (44 ಕೋಟಿ ರು.) ಪಾವತಿಸಿದರೆ ತ್ವರಿತವಾಗಿ ಗೋಲ್ಡ್‌ ಕಾರ್ಡ್‌ ಪಡೆಯಬಹುದಾಗಿದೆ. ಈ ಗೋಲ್ಡ್‌ ಕಾರ್ಡ್‌ ಗ್ರೀನ್‌ ಕಾರ್ಡ್‌ನ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಜತೆಗೆ ವಿದೇಶಿ ಹೂಡಿಕೆದಾರರು, ಉದ್ಯಮಿಗಳಿಗೆ ಸುಲಭವಾಗಿ ಅಮೆರಿಕದ ನಾಗರಿಕತ್ವ ಪಡೆಯಲು ದಾರಿ ಮಾಡಿಕೊಡುತ್ತದೆ. ಉದ್ಯೋಗ ಸೃಷ್ಟಿಯಂಥ ತಲೆಬಿಸಿಯೂ ಇರುವುದಿಲ್ಲ.

 ‘ಈ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವವರು ಶ್ರೀಮಂತರಾಗಿರುತ್ತಾರೆ. ಹೆಚ್ಚು ಖರ್ಚು, ಹೆಚ್ಚು ತೆರಿಗೆ ಪಾವತಿಸುತ್ತಾರೆ ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ನೀಡುತ್ತಾರೆ. ಈ ಹೊಸ ವೀಸಾ ವಿಧಾನವು ಭಾರೀ ಯಶಸ್ಸು ಗಳಿಸುತ್ತದೆ’ ಎಂದು ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ. ಸುಮಾರು 1 ಕೋಟಿ ಗೋಲ್ಡ್‌ ಕಾರ್ಡ್‌ ವಿತರಣೆ ಮಾಡಲಾಗುವುದು. ಇಷ್ಟು ಕಾರ್ಡ್‌ ಮಾರಾಟವಾದರೆ ಅಂದಾಜು 45 ಲಕ್ಷ ಕೋಟಿ ರು.ಸಂಗ್ರಹವಾಗಲಿದ್ದು, ಅದರಿಂದ ವಿತ್ತೀಯ ಕೊರತೆ ಕಡಿಮೆ ಆಗಲಿದೆ ಎಂದು ಟ್ರಂಪ್‌ ಹೇಳಿದ್ದಾರೆ.

2 ವಾರದಲ್ಲಿ ವಿತರಣೆ: ಇಬಿ-5 ವೀಸಾ (ಗ್ರೀನ್‌ ಕಾರ್ಡ್‌) ಬದಲಾಗಿ ಎರಡು ವಾರಗಳಲ್ಲಿ ಗೋಲ್ಡ್‌ ಕಾರ್ಡ್‌ ವಿತರಿಸಲಾಗುತ್ತದೆ. ಇಬಿ-5 ವೀಸಾವನ್ನು 1990ರಲ್ಲಿ ಪರಿಚಯಿಸಲಾಗಿತ್ತು. ವಿದೇಶಿ ಹೂಡಿಕೆ ಹೆಚ್ಚಿಸಲು ಇದನ್ನು ಆರಂಭಿಸಲಾಗಿತ್ತು. ಇದೀಗ ವಿತರಿಸಲುದ್ದೇಶಿಸಿರುವ ಗೋಲ್ಡ್‌ ಕಾರ್ಡ್‌ ಕೂಡ ಒಂದು ರೀತಿಯಲ್ಲಿ ಗ್ರೀನ್‌ ಕಾರ್ಡ್‌ ಆಗಿದ್ದು, ಇದರಡಿ ಶಾಶ್ವತವಾಗಿ, ಕಾನೂನುಬದ್ಧವಾಗಿ ಅಮೆರಿಕದಲ್ಲಿ ನೆಲೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಹೊಸ ಕಾರ್ಡ್‌ನಿಂದಾಗಿ ಇಬಿ-5ನ ವೀಸಾ ಯೋಜನೆಯಡಿ ನಡೆಯುತ್ತಿದ್ದ ವಂಚನೆಗಳಿಗೆ ತೆರೆ ಬೀಳಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹಾರ್ವರ್ಡ್‌ ಲುಟ್‌ನಿಕ್‌ ತಿಳಿಸಿದ್ದಾರೆ.

ಭಾರತದ ಶ್ರೀಮಂತರಿಗೆ

ಅಮೆರಿಕದಲ್ಲಿ ನೆಲೆ ಸುಲಭ

ಅಮೆರಿಕದ ಈ ಹೊಸ ವೀಸಾ ನೀತಿಯು ಎಚ್‌1ಬಿ ವೀಸಾಗಾಗಿ ಕಾಯುತ್ತಿರುವ ಭಾರತೀಯರಲ್ಲಿ ಕಳವಳ ಮೂಡಿಸಿದೆ. ಆದರೆ ಆಗರ್ಭ ಶ್ರೀಮಂತರಿಗೆ ಈ ಗೋಲ್ಡ್‌ ಕಾರ್ಡ್‌ನಿಂದ ಹೆಚ್ಚಿನ ಅನುಕೂಲವಾಗಲಿದೆ. ಅಮೆರಿಕದಲ್ಲಿ ನೆಲೆಸುವ ಅವರ ಕನಸು ತ್ವರಿತವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಅವರು 43 ಕೋಟಿ ವೆಚ್ಚ ಮಾಡಿದರೆ ಸಾಕು.

ಇನ್ನು ಹಿಂದಿನ ಗ್ರೀನ್‌ ಕಾರ್ಡ್‌ ನಿಯಮದಂತೆ ಅರ್ಜಿ ಸಲ್ಲಿಸಿದವರು ಹಲವು ವರ್ಷಗಳ ಕಾಲ ಕಾಯುವುದು ಅನಿವಾರ್ಯವಾಗಿತ್ತು. ಆದರೆ ಇದೀಗ 43 ಕೋಟಿ ಪಾವತಿಸಿದರೆ ತಕ್ಷಣ ಗೋಲ್ಡ್‌ ಕಾರ್ಡ್‌ ನೀಡಲಾಗುತ್ತದೆ.

Share this article