ಅಮೆರಿಕದಲ್ಲಿ 2ನೇ ಬಾರಿಗೆ ‘ಟ್ರಂಪ್‌ ಯುಗ’ ಆರಂಭ : 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಪ್ರಮಾಣ ವಚನ

KannadaprabhaNewsNetwork |  
Published : Jan 21, 2025, 01:32 AM ISTUpdated : Jan 21, 2025, 04:48 AM IST
ಟ್ರಂಪ್‌ | Kannada Prabha

ಸಾರಾಂಶ

ಅಮೆರಿಕದಲ್ಲಿ 2ನೇ ಬಾರಿಗೆ ‘ಟ್ರಂಪ್‌ ಯುಗ’ ಆರಂಭವಾಗಿದೆ. ದೇಶದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಸೋಮವಾರ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು.

ವಾಷಿಂಗ್ಟನ್: ಅಮೆರಿಕದಲ್ಲಿ 2ನೇ ಬಾರಿಗೆ ‘ಟ್ರಂಪ್‌ ಯುಗ’ ಆರಂಭವಾಗಿದೆ. ದೇಶದ 47ನೇ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಸೋಮವಾರ ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು.

3ನೇ ವಿಶ್ವಯುದ್ಧ ನಡೆಯಲು ಬಿಡೋದಿಲ್ಲ: ಟ್ರಂಪ್‌

ವಾಷಿಂಗ್ಟನ್‌: ಜಗತ್ತು ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿರುವ ಹೊತ್ತಲೇ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 3ನೇ ವಿಶ್ವ ಯುದ್ಧ ನಡೆಯದಂತೆ ತಡೆಯುವ ಭರವಸೆ ನೀಡಿದ್ದಾರೆ.

ಕ್ಯಾಪಿಟಲ್‌ ಒನ್‌ ಅರೇನಾದಲ್ಲಿ ನಡೆದ ‘ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌’ ವಿಜಯದ ರ್‍ಯಾಲಿಯಲ್ಲಿ ಮಾತನಾಡಿದ ಟ್ರಂಪ್‌, ಇಸ್ರೇಲ್‌-ಹಮಾಸ್‌ ಕದನ ವಿರಾಮದ ಶ್ರೇಯವನ್ನುಪಡೆದರು. ‘ನಾನಂದು ಅಧ್ಯಕ್ಷನಾಗಿದ್ದರೆ ಯುದ್ಧ ನಡೆಯುತ್ತಿರಲೇ ಇಲ್ಲ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ನಿಲ್ಲಿಸಿ 3ನೇ ವಿಶ್ವಯುದ್ಧ ನಡೆಯದಂತೆ ಮಾಡುತ್ತೇನೆ ಎಂದರು.ಅಲ್ಲದೆ, ಹಿಂದಿನ ಅಧ್ಯಕ್ಷ ಜೋ ಬೈಡೆನ್‌ ಜಾರಿಗೆ ತಂದಿದ್ದ ಆದೇಶಗಳನ್ನು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರದ್ದುಪಡಿಸುವುದಾಗಿ ಹೇಳಿದರು.

‘ನಾವು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ಗಡೀಪಾರು ಕಾರ್ಯವನ್ನು ಆರಂಭಿಸುತ್ತೇವೆ. ಗಡಿ ಅತಿಕ್ರಮಣಕಾರರನ್ನು ಮಟ್ಟಹಾಕಿ ಅಕ್ರಮ ವಲಸಿಗರನ್ನು ಹೊರಹಾಕುತ್ತೇವೆ. ಡ್ರಗ್‌ ದಂಧೆ ನಡೆಸುವವರನ್ನು ವಿದೇಶಿ ಉಗ್ರ ಸಂಘಟನೆಗಳೆಂದು ಪರಿಗಣಿಸುತ್ತೇವೆ’ ಎಂದರು.

ವೈಟ್‌ ಹೌಸ್‌ಗೆ ಟ್ರಂಪ್‌ರ ಸ್ವಾಗತಿಸಿದ ಬೈಡೆನ್‌

ವಾಷಿಂಗ್ಟನ್‌: ಶಪಥ ಸ್ವೀಕಾರಕ್ಕೂ ಮುನ್ನ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್‌ ಹೌಸ್‌ಗೆ ಟ್ರಂಪ್‌ ಅವರನ್ನು ಮಾಜಿ ಅಧ್ಯಕ್ಷ ಜೋ ಬೈಡೆನ್‌ ಸ್ವಾಗತಿಸಿದರು.

ಟ್ರಂಪ್‌ ಕಾರಿನಿಂದ ಇಳಿಯುತ್ತಿದ್ದಂತೆ, ‘ಮನೆಗೆ ಸ್ವಾಗತ’ ಎಂದ ಬೈಡೆನ್‌, ಅವರ ಹೆಗಲಿನ ಸುತ್ತ ಕೈ ಹಾಕಿ ಒಳಗೆ ಕರೆದೊಯ್ದರು. ಬಳಿಕ ಶಾಂತಿಯುತ ಅಧಿಕಾರ ಹಸ್ತಾಂತರದ ಸಂಕೇತವಾಗಿ ಚಹಾ ಪಾರ್ಟಿಯಲ್ಲಿ ಪಾಲ್ಗೊಂಡರು.

ಟ್ರಂಪ್‌ ಸೇಡಿನಿಂದ ಪಾರು ಮಾಡಲು ಫೌಸಿಗೆ ಬೈಡೆನ್‌ ಪೂರ್ವಭಾವಿ ಕ್ಷಮೆ

ವಾಷಿಂಗ್ಟನ್: ಡೊನಾಲ್ಡ್‌ ಟ್ರಂಪ್‌ ಸರ್ಕಾರವು ಕೆಲವು ರಾಜಕೀಯ ಪ್ರೇರಿತ ಕ್ರಮ ಕೈಗೊಳ್ಳುವ ಸಾಧ್ಯತೆ ಇರುವ ಕಾರಣ, ಅದರಿಂದ ರಕ್ಷಣೆ ಒದಗಿಸಲು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್‌, ತಮ್ಮ ನಿರ್ಗಮನಕ್ಕೂ ಕೆಲ ಗಂಟೆ ಮುನ್ನ ಕೆಲವು ಉನ್ನತ ಅಧಿಕಾರಿಗಳಿಗೆ ಪೂರ್ವಭಾವಿ ಕ್ಷಮೆ ನೀಡಿದ್ದಾರೆ.ಕೋವಿಡ್‌-19 ಸಲಹೆಗಾರರಾಗಿದ್ದ ಆ್ಯಂಟನಿ ಫೌಸಿ ಮತ್ತು ನಿವೃತ್ತ ಜನರಲ್‌ ಮಾರ್ಕ್‌ ಮಿಲ್ಲಿ ಅವರು, ಟ್ರಂಪ್‌ ಬೆಂಬಲಿಗರು 2021ರ ಜ.6ರಂದು ಅಮೆರಿಕದ ಕ್ಯಾಪಿಟಲ್‌ ಭವನದ ಮೇಲೆ ನಡೆಸಿದ್ದ ದಾಳಿಯ ತನಿಖಾ ತಂಡದಲ್ಲಿದ್ದರು. ಇವರ ಮೇಲೆ ತಾವು ಅಧಿಕಾರಕ್ಕೆ ಬಂದ ಮೇಳೆ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಟ್ರಂಪ್‌ ಹೇಳಿದ್ದರು. ಹೀಗಾಗಿ ಇವರನ್ನು ರಕ್ಷಿಸುವ ಸಲುವಾಗಿ ತಮ್ಮ ಪರಮಾಧಿಕಾರ ಬಳಸಿ ಬೈಡೆನ್‌ ಪೂರ್ವಭಾವಿ ಕ್ಷಮೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪುಟಿನ್‌ ಅಭಿನಂದನೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಪ್ರಮಾಣ ಸ್ವೀಕರಿಸುವ ಮುನ್ನ ಅವರಿಗೆ ಅಭಿನಂದನೆ ತಿಳಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಉಭಯ ದೇಶಗಳ ಸಂಬಂಧ ವೃದ್ಧಿಯ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.ರಷ್ಯಾದ ಭದ್ರತಾ ಮಂಡಳಿ ಸದಸ್ಯರೊಂದಿಗಿನ ವಿಡಿಯೋ ಸಂವಾದದಲ್ಲಿ, ‘ಅಮೆರಿಕದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಕಡಿದು ಹೋಗಿದ್ದ ರಷ್ಯಾ- ಅಮೆರಿಕ ಸಂಬಂಧವನ್ನು ಪುನಃ ಸ್ಥಾಪಿಸುವ ಬಗ್ಗೆ ಟ್ರಂಪ್‌ ಒಲವು ಹೊಂದಿದ್ದಾರೆ. ಅವರು 3ನೇ ವಿಶ್ವಯುದ್ಧವನ್ನು ತಡೆಯಲು ಏನೂ ಬೇಕಾದರೂ ಮಾಡಲು ಸಿದ್ಧ ಎನ್ನುತ್ತಿದ್ದಾರೆ. ಇಂತಹ ನಿರ್ಧಾರಗಳನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಅಧ್ಯಕ್ಷರಾಗಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ಈ ವೇಳೆ, ಉಕ್ರೇನ್‌ ಜತೆ ಶಾಂತಿ ಸ್ಥಾಪನೆ ಮಾತುಕತೆಗೂ ಸಿದ್ಧ ಎಂದು ಪುಟಿನ್‌ ಹೇಳಿದ್ದಾರೆ.

ಟ್ರಂಪ್‌ ಪ್ರಮಾಣಕ್ಕೆ ಬಂದಿದ್ದು ಸುಯೋಗ: ಜೈಶಂಕರ್‌

ನ್ಯೂ ಯಾರ್ಕ್‌: ‘ಟ್ರಂಪ್‌ರ ಪ್ರಮಾಣ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವುದು ನನ್ನ ಸುಯೋಗ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ವಿದೇಶಾಂಗ ಸಚಿವ ಹಾಗೂ ಪ್ರಧಾನಿಯವರ ಪ್ರತಿನಿಧಿಯಾಗಿ ಅಮೆರಿಕದ 47ನೇ ಅಧ್ಯಕ್ಷರ ಶಪಥ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ನನ್ನ ಸುಯೋಗ. ಬೆಳಗ್ಗೆ ಸಂತ ಜಾನ್ ಚರ್ಚ್‌ನಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದೆ’ ಎಂದು ಬರೆದುಕೊಂಡಿದ್ದಾರೆ.

ಜೈಶಂಕರ್‌ಗೆ ಮೊದಲ ಸ್ಥಾನದಲ್ಲಿ ಆಸನ ವ್ಯವಸ್ಥೆ!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ವೇಳೆ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಮೊದಲ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು. ಇದು ವಿಶ್ವಮಟ್ಟದಲ್ಲಿ ಭಾರತ ಹೊಂದಿರುವ ಪ್ರಭಾವ ಎಂದು ಪರಿಗಣಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ
ಭೀಕರ ಬಿರುಗಾಳಿ : ಬ್ರೆಜಿಲ್‌ನ ಸ್ಟ್ಯಾಚು ಆಫ್‌ ಲಿಬರ್ಟಿ ಧರೆಗೆ