ವಾಷಿಂಗ್ಟನ್: ಅಮೆರಿಕಕ್ಕೆ ತೊಂದರೆ ನೀಡುವ ಭಾರತ, ಚೀನಾ, ಬ್ರೆಜಿಲ್ ಮತ್ತಿತರ ದೇಶಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಇದಕ್ಕೂ ಮೊದಲೇ ಟ್ರಂಪ್ ಅವರಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿರುವುದು ಕುತೂಹಲ ಮೂಡಿಸಿದೆ.
ಜೊತೆಗೆ, ನಮಗೆ ತೊಂದರೆ ನೀಡುವ ಹೊರದೇಶಗಳು ಮತ್ತು ಹೊಗಿನ ವ್ಯಕ್ತಿಗಳ ಮೇಲೆ ನಾವು ತೆರಿಗೆ ಹಾಕಲಿದ್ದೇವೆ. ಅವರ ಉದ್ದೇಶ ತಮ್ಮ ದೇಶಕ್ಕೆ ಒಳ್ಳೆಯದು ಮಾಡುವುದೇ ಆಗಿರಬಹುದು. ಆದರೆ ಅದರಿಂದ ನಮಗೆ ಹಾನಿಯಾಗುತ್ತಿದೆ. ಹೀಗಾಗಿ ನಮ್ಮ ದೇಶಕ್ಕೆ ಹಾನಿ ಮಾಡುವವರ ಮೇಲೆ ತೆರಿಗೆ ಹಾಕಲಿದ್ದೇವೆ ಎಂದು ಅವರು ಹೇಳಿದರು.
ಚೀನಾವು ಅತಿ ಹೆಚ್ಚು ತೆರಿಗೆ ಹಾಕುತ್ತಿದೆ. ಭಾರತ, ಬ್ರೆಜಿಲ್ ಮತ್ತಿತರ ದೇಶಗಳೂ ಇದೇ ನೀತಿ ಅನುಸರಿಸುತ್ತಿವೆ. ನಾವು ಇನ್ನುಮುಂದೆ ಆ ರೀತಿ ಆಗಲು ಬಿಡುವುದಿಲ್ಲ. ಯಾಕೆಂದರೆ ನಮ್ಮದೇನಿದ್ದರೂ ಅಮೆರಿಕ ಮೊದಲು ಎನ್ನುವ ನೀತಿ. ನಾವು ನ್ಯಾಯಸಮ್ಮತ ವ್ಯವಸ್ಥೆಯನ್ನು ಸ್ಥಾಪಿಸಲಿದ್ದು, ಆ ವ್ಯವಸ್ಥೆಯಲ್ಲಿ ಹಣವು ನಮ್ಮ ಖಜಾನೆಗೆ ಹರಿದುಬರಲಿದ್ದು, ಅಮೆರಿಕವು ಮತ್ತೊಮ್ಮೆ ಶ್ರೀಮಂತವಾಗಲಿದೆ. ಇದು ಕಾರ್ಯ ಆದಷ್ಟು ಶೀಘ್ರ ಆಗಲಿದೆ ಎಂದು ಹೇಳಿದ್ದಾರೆ.ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತವೂ ಒಳಗೊಂಡಿರುವ ಬ್ರಿಕ್ಸ್ ಒಕ್ಕೂಟ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ಹಾಕುವ ಕುರಿತು ಮಾತನಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಚೀನಾ, ಭಾರತ, ಬ್ರೆಜಿಲ್ ಮೇಲೆ ತೆರಿಗೆ ಹಾಕುವ ಬೆದರಿಕೆವೊಡ್ಡಿದ್ದಾರೆ.
ಒಂದು ವೇಳೆ ಭಾರೀ ತೆರಿಗೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ ಕಂಪನಿಗಳು ಅಮೆರಿಕಕ್ಕೆ ವಾಪಸಾಗಬೇಕು ಮತ್ತು ಇಲ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.ಸ್ಟೀಲ್, ಅಲ್ಯುಮಿನಿಯಂ, ತಾಮ್ರ ಮತ್ತಿತತರ ಅಮೆರಿಕದ ಮಿಲಿಟರಿಗೆ ಬೇಕಾಗುವ ವಸ್ತುಗಳಿಗೂ ತೆರಿಗೆ ಹಾಕುವುದಾಗಿ ಇದೇ ವೇಳೆ ಹೇಳಿದ ಟ್ರಂಪ್, ನಾವು ದಿನಕ್ಕೊಂದು ಹಡಗು ನಿರ್ಮಿಸುವ ಕಾಲವೊಂದಿತ್ತು. ಆದರೆ, ಈಗ ಒಂದು ಹಡಗನ್ನೂ ನಮ್ಮಿಂದ ನಿರ್ಮಿಸಲು ಆಗುತ್ತಿಲ್ಲ. ನಮಗೆ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.
+++ಈ ಕೆಲಸ ದಾಖಲೆಯ ಪ್ರಮಾಣದಲ್ಲಿ ಆಗಲಿದೆ. ನಾವು ತೆರಿಗೆ ವಿನಾಯ್ತಿ, ಪ್ರೋತ್ಸಾಹಧನದಂಥ ಸೌಲಭ್ಯಗಳನ್ನು ನೀಡುವ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಾಕಷ್ಟು ಉತ್ಪಾದನಾ ಘಟಕಗಳು ಅಮೆರಿಕದಲ್ಲಿ ಸ್ಥಾಪನೆಯಾಗಲಿವೆ. ಔಷಧ, ಸೆಮಿಕಂಡಕ್ಟರ್ ಮತ್ತು ಸ್ಟೀಲ್‌ನಂಥ ಉದ್ದಿಮೆಗಳಿಗೆ ಸಂಬಂಧಿಸಿದ ಉತ್ಪಾದನಾ ಘಟಕಗಳಿಗೆ ನಮ್ಮ ದೇಶದಲ್ಲಿ ಸ್ಥಾಪಿಸಿದರೆ ನಾವು ಬೆಂಬಲ ನೀಡಲಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.