ಇಂದು ಕ್ರೈಸ್ತರ ಪರಮೋಚ್ಛ ಗುರು ಪೋಪ್ ಪ್ರಾನ್ಸಿಸ್‌ ಅಂತ್ಯಕ್ರಿಯೆ

KannadaprabhaNewsNetwork | Updated : Apr 26 2025, 04:51 AM IST

ಸಾರಾಂಶ

ಕಳೆದ ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಪ್ರಾನ್ಸಿಸ್‌ ಅಂತ್ಯಕ್ರಿಯೆ ಶನಿವಾರ ನಡೆಯಲಿದ್ದು, ಡೊನಾಲ್ಡ್‌ ಟ್ರಂಪ್, ಝೆಲೆನ್ಸ್ಕಿ, ಮುರ್ಮು ಸೇರಿದಂತೆ 130 ದೇಶಗಳ ಹಾಲಿ, ಮಾಜಿ ಮುಖ್ಯಸ್ಥರು ಅಂತಿಮ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ವ್ಯಾಟಿಕನ್ ಸಿಟಿ: ಕಳೆದ ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಪ್ರಾನ್ಸಿಸ್‌ ಅಂತ್ಯಕ್ರಿಯೆ ಶನಿವಾರ ನಡೆಯಲಿದ್ದು, ಡೊನಾಲ್ಡ್‌ ಟ್ರಂಪ್, ಝೆಲೆನ್ಸ್ಕಿ, ಮುರ್ಮು ಸೇರಿದಂತೆ 130 ದೇಶಗಳ ಹಾಲಿ, ಮಾಜಿ ಮುಖ್ಯಸ್ಥರು ಅಂತಿಮ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಪೋಪ್ ಅವರ ಪಾರ್ಥಿವ ಶರೀರದ ಮೂರು ದಿನಗಳ ಸಾರ್ವಜನಿಕ ಅಂತಿಮ ದರ್ಶನ ಶುಕ್ರವಾರ ರಾತ್ರಿ 7 ಗಂಟೆಗೆ ಮುಕ್ತಾಯಗೊಂಡಿದ್ದು, ಆ ಬಳಿಕ ಅಂತ್ಯಕ್ರಿಯೆ ಕ್ರಿಯೆ ಸಿದ್ದತೆ ಆರಂಭವಾಗಿದ್ದು ಅವರ ಶವದ ಪೆಟ್ಟಿಗೆಯನ್ನು ಮುಚ್ಚಲಾಗಿದೆ. ಅದಕ್ಕೂ ಮುನ್ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಪೋಪ್ ಅವರ ಮುಖದ ಮೇಲೆ ಬಿಳಿ ಬಟ್ಟೆ ಹಾಕಿ, ಪೋಪ್ ಅಧಿಕಾರವಧಿ ಸಮಯದಲ್ಲಿ ಮುದ್ರಿಸಲಾಗಿದ್ದ ನಾಣ್ಯಗಳನ್ನು ಹೊಂದಿರುವ ಒಂದು ಚೀಲವನ್ನು ಶವದ ಶವದ ಪೆಟ್ಟಿಗೆಯಲ್ಲಿಟ್ಟಿದ್ದಾರೆ.

ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 1.30ಗೆ ವ್ಯಾಟಿಕನ್ ನಗರದ ಸೇಂಟ್‌ ಪೀಟರ್ಸ್‌ ಸ್ಕ್ರೇರ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೋಪ್ ಪ್ರಾನ್ಸಿಸ್‌ ಅಂತ್ಯಕ್ರಿಯೆ ಸರಳವಾಗಿರಲಿದ್ದು, ಹಿಂದಿನ ಪೋಪ್‌ಗಳ ಅಂತ್ಯಕ್ರಿಯೆ ರೀತಿ ಮೂರು ಶವದ ಪೆಟ್ಟಿಗೆ ಬದಲು ಒಂದೇ ಶವದ ಪೆಟ್ಟಿಗೆಯಲ್ಲಿ ಇರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ. 

ಪೋಪ್‌ ಹುದ್ದೆಗೇರಿದ್ದ ಲ್ಯಾಟಿನ್‌ ಅಮೆರಿಕದ ಮೊದಲ ಧರ್ಮಗುರು ಅಂತ್ಯಕ್ರಿಯೆಯಲ್ಲಿ 50 ರಾಷ್ಟ್ರಗಳ ಮುಖ್ಯಸ್ಥರು , 10 ರಾಜರು ಸೇರಿದಂತೆ 130 ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ದಂಪತಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ಪ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್, ಬ್ರಿಟಿಷ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಇನ್ನು ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಜಾರ್ಜ್‌ ಕುರಿಯನ್, ಗೋವಾ ಉಪ ಸಭಾಪತಿ ಜೋಶುವಾ ಡಿ ಸೋಜಾ ಕೂಡ ಪಾಲ್ಗೊಳ್ಳಲಿದ್ದಾರೆ.

Share this article