ನವದೆಹಲಿ: ಭಯೋತ್ಪಾದನಾ ಕೃತ್ಯಗಳನ್ನು ನಡೆಸುವಾಗ ದಾಖಲಿಸುವ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರೂ ನಿಷೇಧಿತ ಎಂಟು ಪಿಎಫ್‌ಐ ಸದಸ್ಯರಿಗೆ ಜಾಮೀನು ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಜಾಮೀನು ದೊರೆತವರು ಶೀಘ್ರದಲ್ಲೇ ಶರಣಾಗಬೇಕೆಂದು ಸೂಚಿಸಿದೆ. ‘ರಾಷ್ಟ್ರೀಯ ಭದ್ರತೆ ಪರಮೋಚ್ಚವಾದುದು’ ಎಂಬ ಮಹತ್ವದ ಅಭಿಪ್ರಾಯವನ್ನು ಈ ವೇಳೆ ಅದು ವ್ಯಕ್ತಪಡಿಸಿದೆ.
ಈ ಕುರಿತು ತೀರ್ಪು ನೀಡಿದ ನ್ಯಾ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರ ದ್ವಿಸದಸ್ಯ ಪೀಠ, ‘ಮದ್ರಾಸ್ ಹೈಕೋರ್ಟ್ ಅಕ್ಟೋಬರ್ 19ರಂದು ಮಾಡಿರುವ ದೋಷಾರೋಪಣೆಯನ್ನು ತಳ್ಳಿ ಹಾಕಿದ್ದು, ಆರೋಪಿಗಳು ಮತ್ತೆ ಶರಣಾಗಬೇಕು’ ಎಂದು ತೀರ್ಪು ನೀಡಿದರು.
ಕೋರ್ಟ್ ಹೇಳಿದ್ದೇನು?:
‘ರಾಷ್ಟ್ರೀಯ ಭದ್ರತೆಯ ಮುಂದೆ ಉಳಿದ ವಿಷಯಗಳು ಗೌಣವಾಗುತ್ತವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದ್ರೋಹಿ ಕೃತ್ಯಗಳನ್ನು ನಡೆಸುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರಿಗೆ ಜಾಮೀನು ನೀಡಿದಲ್ಲಿ ಅದು ಮತ್ತೊಮ್ಮೆ ರಾಷ್ಟ್ರೀಯ ಅಭದ್ರತೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
ಏನಿದು ಪ್ರಕರಣ?:
ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ಸೆಪ್ಟೆಂಬರ್ 2022ರಲ್ಲಿ ಚೆನ್ನೈ ನಗರದಲ್ಲಿ ಪಿಎಫ್‌ಐ ಸಂಘಟನೆಯ ಕಚೇರಿಯನ್ನು ತೆಗೆಯುವ ಮೂಲಕ ಅಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ 8 ಮಂದಿಯನ್ನು ಬಂದಿಸಿತ್ತು. ಇವರಿಗೆ ಮದ್ರಾಸ್ ಹೈಕೋರ್ಟ್ 2023ರ ಅಕ್ಟೋಬರ್ 19ರಂದು ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ ಸುಪ್ರೀಂ ಕೋರ್ಟ್‌ನಲ್ಲಿ ಮರುದಿನ (ಅ.20) 2047ರೊಳಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಗುರಿಯೊಂದಿಗೆ ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ಜೊತೆಗೆ ಕೋಮು ಸೌಹಾರ್ದತೆಯನ್ನು ಕದಡುವ ಕೃತ್ಯ ಮಾಡಿದವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಯಾರಿಗೆ ಶರಣಾಗಲು ಆದೇಶ?:
ಚೆನ್ನೈ ಪಿಎಫ್‌ಐ ಸಂಘಟನಾ ಸದಸ್ಯರಾದ ಬರಕಾತುಲ್ಲಾ, ಇದ್ರಿಸ್, ಮೊಹಮ್ಮದ್ ಅಬುತಾಹಿರ್, ಖಲೀದ್ ಮೊಹಮ್ಮದ್, ಸೈಯ್ಯದ್ ಇಶಾಕ್, ಖಾಜಾ ಮೊಹಾಯ್ದೀನ್, ಯಾಸರ್ ಅರಾಫತ್, ಫಯಾಜ಼್ ಅಹ್ಮದ್.