;Resize=(412,232))
ನವದೆಹಲಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಜನಗಣತಿ ಸಮಯದಲ್ಲಿ ಅನುದಾನಿತ, ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರನ್ನು ಗಣತಿದಾರರನ್ನಾಗಿ ಬಳಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರವು 1990 ರ ಜನಗಣತಿ ನಿಯಗಳನ್ನು ತಿದ್ದುಪಡಿ ಮಾಡಿ ಈ ಆದೇಶ ಹೊರಡಿಸಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೆಶನ್ ಹೊರಡಿಸಿದ್ದಾರೆ.
ಇದರಲ್ಲಿ ‘ ಕೇಂದ್ರ ಸರ್ಕಾರವು 1990ರ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ಪ್ರಕಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶಿಕ್ಷಕರು, ಕ್ಲರ್ಕ್ ಅಥವಾ ಯಾವುದೇ ಅಧಿಕಾರಿಯನ್ನು ಜನಗಣತಿಗೆ ನೇಮಕ ಮಾಡಿಕೊಳ್ಳಬಹುದು’ ಎಂದು ಉಲ್ಲೇಖಿಸಲಾಗಿದೆ.
ಖಾಸಗಿ ಅನುದಾನರಹಿತ ಶಾಲೆಗಳ ಬೋಧಕ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕಾಗಿ ನಿಯೋಜಿಸಿರುವುದನ್ನು ಪ್ರಶ್ನಿಸಿ, ಹರಿಯಾಣ ಪ್ರೋಗ್ರೆಸಿವ್ ಸ್ಕೂಲ್ಸ್ ಕಾನ್ಫರೆನ್ಸ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಹಾಲಿ ನಿಯಮಗಳ ಅನ್ವಯ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆ ಸಿಬ್ಬಂದಿಗಳನ್ನು ಜನಗಣತಿಗೆ ಬಳಸುವಂತಿಲ್ಲ ಎಂದು ವಾದಿಸಿತ್ತು. ಅದರ ಬೆನ್ನಲ್ಲೇ ಅವರ ಸೇರ್ಪಡೆಗೂ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ.
ಇತ್ತೀಚೆಗೆ ಪಂಜಾಬ್ ಸರ್ಕಾರ ಖಾಸಗಿ ಶಿಕ್ಷಕರ ಬಳಕೆ ಆರಂಭಿಸಿತ್ತು
ಇದರ ವಿರುದ್ಧ ಅಲ್ಲಿನ ಶಿಕ್ಷಕ ಸಂಘಟನೆ ಕೋರ್ಟ್ ಮೆಟ್ಟಿಲೇರಿತ್ತು
ಇದರ ಬೆನ್ನಲ್ಲೇ ಕೇಂದ್ರದಿಂದಲೇ ಗಣತಿ ನಿಯಮಗಳ ತಿದ್ದುಪಡಿ
ಗಣತಿಗೆ ಅನುದಾನಿತ, ಅನುದಾನ ರಹಿತ ಶಿಕ್ಷಕರ ಬಳಕೆಗೆ ಅಸ್ತು