ಭವಿಷ್ಯ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್‌ : ನಿರೀಕ್ಷೆಗೂ ಮೀರಿ ಮಧ್ಯಮ ವರ್ಗದವರಿಗೆ ಸಂತೃಪ್ತಿ

ಸಾರಾಂಶ

ಮೊದಲ ಬಾರಿ ನಿರೀಕ್ಷೆ ಮೀರಿ ಬಜೆಟ್‌ ಮಂಡನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಮುಂದುವರೆದ ರಾಷ್ಟ್ರಗಳ ಆರ್ಥಿಕತೆ ಚಿಂತಾಜನಕವಾಗಿದೆ. ಹಾಗಾಗಿ ನಮ್ಮ ಆರ್ಥಿಕತೆ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. 

- ವಿಜಯ್‌ರಾಜೇಶ್‌

 ವಕೀಲರು ಹಾಗೂ ತೆರಿಗೆ ಸಲಹೆಗಾರರು 

ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಕೇಂದ್ರ ಬಜೆಟ್‌ ಮಹತ್ವದ ಹೆಜ್ಜೆ

ಮೊದಲ ಬಾರಿ ನಿರೀಕ್ಷೆ ಮೀರಿ ಬಜೆಟ್‌ ಮಂಡನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಮುಂದುವರೆದ ರಾಷ್ಟ್ರಗಳ ಆರ್ಥಿಕತೆ ಚಿಂತಾಜನಕವಾಗಿದೆ. ಹಾಗಾಗಿ ನಮ್ಮ ಆರ್ಥಿಕತೆ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಅತ್ಯಂತ ಜಾಣತನದಿಂದ ಅಭಿವೃದ್ಧಿಶೀಲ ಬಜೆಟ್‌ ಜೊತೆಯಲ್ಲಿ ಮಧ್ಯಮ ವರ್ಗದ ಜನತೆಯನ್ನು ಸಂತಸಗೊಳಿಸುವುದರ ಮೂಲಕ ಆರ್ಥಿಕತೆಯ ಉತ್ತೇಜನ ನೀಡುವಲ್ಲಿ ಯಶಸ್ವಿಯಾಗಿದೆ.

ಎಂದಿನಂತೆ ಕೃಷಿಗೆ ಉತ್ತೇಜನ, ಸಣ್ಣ ಕೈಗಾರಿಕೆ, ಹೂಡಿಕೆ, ರಫ್ತುಗೆ ಉತ್ತೇಜನ ನೀಡುವುದರ ಜೊತೆ ಸಣ್ಣ, ಅತಿ ಸಣ್ಣ, ಕೈಗಾರಿಕೆಗಳಿಗೆ ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಪ್ರತಿ ಜಿಲ್ಲೆಗೆ ಕ್ಯಾನ್ಸರ್‌ ಕೇಂದ್ರ ಯೋಜನೆ ಸ್ವಾಗತಾರ್ಹ. ಶಿಕ್ಷಣ ಕ್ಷೇತ್ರದಲ್ಲಿ ಹಳ್ಳಿಗಳ ಶಾಲಾ ಅಭಿವೃದ್ಧಿಗೆ ಕೂಡ ಒತ್ತು ನೀಡಲಾಗಿದೆ. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ತೆರಿಗೆ ಸರಳೀಕರಣ ಮುಂತಾದ ಅಗತ್ಯವಿರುವ ಎಲ್ಲ ಕ್ಷೇತ್ರಗಳಿಗೆ ಗಮನ ನೀಡಲಾಗಿದೆ.

ಎಲ್ಲ ಕ್ಷೇತ್ರಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ಬಹಳ ಮುಖ್ಯ. ಏಕೆಂದರೆ ಮೂಲ ಸೌಕರ್ಯ ಅಭಿವೃದ್ಧಿ ಆಸ್ತಿ ನಿರ್ಮಾಣ ಮಾಡುವುದರ ಜೊತೆಗೆ ಜನರಿಗೆ ಕೆಲಸವನ್ನು ಸೃಷ್ಟಿಸುತ್ತದೆ. ಇದರ ಮೂಲಕ ಎಲ್ಲರಿಗೂ ಹಣ ತಲುಪುತ್ತದೆ. ಅವರು ಮಾಡುವ ಖರ್ಚುಗಳಿಂದ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಮೂಲ ಸೌಕರ್ಯ ಅಭಿವೃದ್ಧಿ, ಅಸಂಘಟಿತ ವಲಯದ ಕಾರ್ಮಿಕ ಕಲ್ಯಾಣ ಮತ್ತು ಸುಲಭವಾಗಿ ವ್ಯಾಪಾರ ಮತ್ತು ವ್ಯವಹಾರ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುವುದಕ್ಕೆ ಪೂರಕವಾದ ಬಜೆಟ್‌ ಮಂಡನೆಯಾಗಿದೆ.

ಮುಖ್ಯವಾಗಿ 12 ಲಕ್ಷ ರು. ವಾರ್ಷಿಕ ಆದಾಯವಿದ್ದರೆ ಯಾವುದೇ ತೆರಿಗೆ ಇಲ್ಲ. ಇನ್ನು ಸಂಬಳದಾರರು ರು. 75 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್ ಕೂಡ ಪಡೆಯಬಹುದು. ಅಂದರೆ ತೆರಿಗೆ ವಿನಾಯಿತಿ ಆದಾಯ ಮಿತಿ ಇರುವ ಜನರು ತೆರಿಗೆ ರಿಟರ್ನ್‌ ಸಲ್ಲಿಸುವ ಅಗತ್ಯವಿಲ್ಲ. ಅವರಿಗೆ ಅಗತ್ಯವಿದ್ದರೆ ಮಾತ್ರ ರಿಟರ್ನ್‌ ಸಲ್ಲಿಸಬಹುದು. ಇದು ತೆರಿಗೆದಾರರಿಗೂ ಹಾಗೂ ಇಲಾಖೆಗೂ ಅನುಕೂಲ. ಅತಿ ಸಣ್ಣ ತೆರಿಗೆದಾರರ ರಿಟರ್ನ್‌ ಪ್ರಕ್ರಿಯೆ ಇಲಾಖೆಗೆ ದುಬಾರಿ. ಹಿರಿಯ ನಾಗರಿಕರಿಗೆ ಬ್ಯಾಂಕಿನಿಂದ ಬರುವ ಬಡ್ಡಿ ರು. 50 ಸಾವಿರ ಮೀರಿದಾಗ ಶೇ.10 ರಷ್ಟು ಟಿಡಿಎಸ್‌ ಮಾಡಲಾಗುತ್ತಿತ್ತು. ಈಗ ಈ ಮೊತ್ತವನ್ನು ರು.1ಲಕ್ಷಕ್ಕೆ ಏರಿಸಲಾಗಿದೆ. ಇನ್ನು ಯಾರಾದರೂ ಕಚೇರಿಗಳಿಗೆ ಬಾಡಿಗೆ ನೀಡಿದ್ದರೆ ತಿಂಗಳಿಗೆ 20 ಸಾವಿರ ರು. ಬಾಡಿಗೆ ಮೀರಿದಾಗ ಶೇ.10ರಷ್ಟು ಟಿಡಿಎಸ್‌ ಮಾಡಲಾಗುತ್ತಿತ್ತು. ಈಗ ಈ ಮೊತ್ತ ರು. 50 ಸಾವಿರ ತಿಂಗಳಿಗೆ ಏರಿಸಲಾಗಿದೆ. ಇದು ಸಣ್ಣ ಆದಾಯ ತೆರಿಗೆದಾರರಿಗೆ ಅನುಕೂಲಕರ. ಹಿರಿಯ ನಾಗರಿಕರು ಎನ್‌ಎಸ್ಎಸ್‌ನಿಂದ ಹಣ ಪಡೆದರೆ ಈ ಮೊದಲು ತೆರಿಗೆ ಅನ್ವಯವಾಗುತ್ತಿತ್ತು. ಇನ್ನು ಮುಂದೆ ಈ ಹಣಕ್ಕೆ ತೆರಿಗೆ ಇಲ್ಲ.

ಈ ಬಾರಿ ಮಧ್ಯಮ ವರ್ಗಕ್ಕೆ ಬಂಪರ್‌ ಕೊಡುಗೆ ಎಂದು ಹೇಳಬಹುದು. ಆದಾಯದ ಮಿತಿಗಳನ್ನು ಹೆಚ್ಚಿಸುವುದರ ಜೊತೆಗೆ 12 ರು. ಲಕ್ಷ ಆದಾಯ ಇರುವವರು ತೆರಿಗೆ ಪಾವತಿ ಮಾಡಬೇಕಿಲ್ಲ. ಈ ಮುಂಚೆ ರು.3 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ. ಈಗ ಈ ಮಿತಿಯನ್ನು 4 ಲಕ್ಷ ರು.ಗೆ ಏರಿಸಲಾಗಿದೆ. ಈ ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ಹೂಡಿಕೆಗಳು ಮಾಡಬೇಕಾಗಿಲ್ಲ. ಹಾಗಾಗಿ ಎಲ್ಲರ ಬಳಿ ಹಣದ ಲಭ್ಯತೆ ಹೆಚ್ಚುತ್ತದೆ.

ಮುಂದಿನ ವಾರ ಹೊಸ ಆದಾಯ ತೆರಿಗೆ ಕಾನೂನನ್ನು ಮಂಡಿಸುವುದಾಗಿ ವಿತ್ತ ಮಂತ್ರಿಗಳು ಹೇಳಿದ್ದಾರೆ. ಇದು ಇನ್ನು ಹಲವಾರು ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ. ತೆರಗೆ ಸ್ನೇಹಿ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಯತ್ನವಾಗಿದೆ. ಒಟ್ಟಾರೆಯಾಗಿ ಭವಿಷ್ಯ ಭಾರತ ನಿರ್ಮಾಣಕ್ಕೆ ಪೂರಕವಾದ ಬಜೆಟ್‌ ಜೊತೆ ಮಧ್ಯಮ ವರ್ಗದ ಕೈ ಹಿಡಿದ ಬಜೆಟ್‌ ಮಂಡನೆಯಾಗಿದೆ.

Share this article