ನವದೆಹಲಿ: ಕೆಮ್ಮಿನ ಸಿರಪ್ ಸೇವನೆಯಿಂದಾಗಿ 14 ಮಕ್ಕಳು ಸಾವನ್ನಪ್ಪಿರುವುದರಿಂದ ಆತಂಕ ಸೃಷ್ಟಿಯಾಗಿರುವ ಹೊತ್ತಿನಲ್ಲೇ, ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯಾಧಿಕಾರಿಗಳ ಜತೆ ಸಭೆ ನಡೆಸಿದ್ದು, ದೋಷಪೂರಿತ ಸಿರಪ್‌ಗಳ ಮೇಲೆ ಕ್ರಮಕ್ಕೆ ಸೂಚಿದ್ದಾರೆ.
ಸಭೆ ವೇಳೆ, ಔಷಧಗಳನ್ನು ಎಲ್ಲಾ ಉತ್ಪಾದಕರು ನಿಯಮಾನುಸಾರ ತಯಾರಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಅಂತೆಯೇ, ಆ ಮಾನದಂಡಗಳನ್ನು ತಲುಪುವಲ್ಲಿ ವಿಫಲರಾದವರ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸೂಚಿಸಲಾಗಿದೆ. ಜತೆಗೆ, ಕೆಮ್ಮಿನ ಸಿರಪ್ ಅನ್ನು ಮಕ್ಕಳು ಆದಿಯಾಗಿ ಎಲ್ಲರೂ ಮಿತವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಆರೋಗ್ಯಕ್ಕೆ ಸಂಬಂಧಿತ ಎಲ್ಲಾ ಚಿಕಿತ್ಸಾ ವ್ಯವಸ್ಥೆಗಳ ನಿಯಮಿತ ಪರಿಶೀಲನೆ ಮಾಡಬೇಕು. ಏನೇ ತೊಂದರೆ ಆದರೂ ಕೇಂದ್ರದ ಗಮನಕ್ಕೆ ತಂದು ಅಂತರ-ರಾಜ್ಯ ಸಮನ್ವಯವನ್ನು ಬಲಪಡಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಲಾಗಿದೆ.
ಮಹಾರಾಷ್ಟ್ರದಲ್ಲೂ ಕೋಲ್ಡ್ರಿಫ್ ಸಿರಪ್ ಬಳಕೆ ನಿಷೇಧ
ಮುಂಬೈ: ದೇಶದ ವಿವಿಧೆದೆ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ಅನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದೆ. ಈ ಮೂಲಕ ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳದ ಬಳಿಕ ಇದನ್ನು ನಿಷೇಧಿಸಿದ 4ನೇ ರಾಜ್ಯವಾಗಿ ಹೊರಹೊಮ್ಮಿದೆ.
ಎಸ್‌ಆರ್-13 ಬ್ಯಾಚ್‌ನ ಕೋಲ್ಡ್ರಿಫ್ ಮಾರಾಟ, ವಿತರಣೆ, ಸೇವನೆಯನ್ನು ತಕ್ಷಣದಿಂದ ನಿಲ್ಲಿಸಿ ರಾಜ್ಯದ ಆಹಾರ ಮತ್ತು ಔಷಧ ಆಡಳಿತ ಆದೇಶ ಹೊರಡಿಸಿದೆ. ಜತೆಗೆ, ಯಾರಾದರೂ ಆ ಸಿರಪ್ ಹೊಂದಿದ್ದರೆ ಕೂಡಲೇ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಲು ತಿಳಿಸಲಾಗಿದೆ.
ಮಾರಕ ಕೆಮ್ಮಿನ ಸಿರಪ್ ನೀಡಿದ್ದ ವೈದ್ಯ ಸೆರೆ
ಛಿಂದ್ವಾಡ (ಮಧ್ಯಪ್ರದೇಶ) : ಕೋಲ್ಡ್ರಿಫ್ ಕೆಮ್ಮಿನೌಷಧ ಸೇವಿಸಿ ಮಧ್ಯಪ್ರದೇಶದ 14 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯನೊಬ್ಬನನ್ನು ಬಂಧಿಸಲಾಗಿದೆ ಹಾಗೂ ಆತನನ್ನು ಸರ್ಕಾರವು ಸೇವೆಯಿಂದ ಅಮಾನತು ಮಾಡಿದೆ. ಇದೇ ವೇಳೆ, ಮಾರಕ ಔಷಧ ತಯಾರಿಸಿದ ಆರೋಪ ಹೊತ್ತ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಛಿಂದ್ವಾಡದ ಡಾ। ಪ್ರವೀಣ್ ಸೋನಿ ಬಂಧಿತ ವೈದ್ಯ. ಈತ ಸರ್ಕಾರಿ ವೈದ್ಯನಾಗಿದ್ದೂ ಖಾಸಗಿ ಚಿಕಿತ್ಸಾಲಯ ನಡೆಸುತ್ತಿದ್ದ. ಮೃತ ಮಕ್ಕಳಲ್ಲಿ 11 ಮಂದಿ ಈತನ ಬಳಿಯೇ ಚಿಕಿತ್ಸೆ ಪಡೆದಿದ್ದರು. ಅವರಿಗೆ ಈತ ಕೋಲ್ಡ್ರಿಫ್ ಔಷಧ ಶಿಫಾರಸು ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಶನಿವಾರ ತಡರಾತ್ರಿ ಛಿಂದ್ವಾಡದ ರಾಜ್‌ಪಾಲ್ ಚೌಕ್‌ನಿಂದ ಈತನನ್ನು ಬಂಧಿಸಲಾಗಿದೆ.
ಸರ್ಕಾರಿ ಉದ್ಯೋಗದಿಂದಲೂ ಅಮಾನತು ಮಾಡಲಾಗಿದೆ.ಈತನ ವಿರುದ್ಧ ಬಿಎನ್‌ಎಸ್ ಸೆಕ್ಷನ್ 276, 105 ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ - 1940 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ ವೇಳೆ, ಕಲಬೆರಕೆಯುಕ್ತ ಕೋಲ್ಡ್ರಿಫ್ ಔಷಧ ತಯಾರಿಸಿದ ತಮಿಳುನಾಡಿದ ಕಾಂಚೀಪುರಂನ ಶ್ರೀಸನ್ ಫಾರ್ಮಾಸ್ಯುಟಿಕಲ್ ಕಂಪನಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರವು 19 ಕೆಮ್ಮು ಹಾಗೂ ಆ್ಯಂಟಿ ಬಯೋಟಿಕ್ ಔಷಧಗಳ ತಪಾಸಣೆಯನ್ನು ದೇಶಾದ್ಯಂತ ಆರಂಭಿಸಿದೆ. ಇದೇ ವೇಳೆ, ಮಧ್ಯಪ್ರದೇಶ, ಕೇರಳ ಹಾಗೂ ತಮಿಳುನಾಡಿನಲ್ಲಿ ಕೋಲ್ಡ್ರಿಫ್ ಸಿರಪ್ ನಿಷೇಧಿಸಲಾಗಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳು 4 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳಿಗೆ ವೈದ್ಯರ ಶಿಫಾರಸು ಇಲ್ಲದೇ ಕೆಮ್ಮಿನೌಷಧಿ ನೀಡಬೇಡಿ ಎಂದು ಮಾರ್ಗಸೂಚಿ ಹೊರಡಿಸಿವೆ.