ಕೇಂದ್ರ ಸಚಿವ ಎಚ್‌ಡಿಕೆ ಮೊದಲ ಜನತಾದರ್ಶನ

KannadaprabhaNewsNetwork |  
Published : Jul 06, 2024, 12:45 AM ISTUpdated : Jul 06, 2024, 07:02 AM IST
5ಕೆಎಂಎನ್ ಡಿ1,2,3 | Kannada Prabha

ಸಾರಾಂಶ

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಶುಕ್ರವಾರ ಸುದೀರ್ಘ 7 ತಾಸು ಜನತಾ ದರ್ಶನ ನಡೆಸಿ 3000ಕ್ಕೂ ಹೆಚ್ಚು ಜನರ ಅಹವಾಲು ಆಲಿಸಿದರು

 ಮಂಡ್ಯ :  ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಶುಕ್ರವಾರ ಸುದೀರ್ಘ 7 ತಾಸು ಜನತಾ ದರ್ಶನ ನಡೆಸಿ 3000ಕ್ಕೂ ಹೆಚ್ಚು ಜನರ ಅಹವಾಲು ಆಲಿಸಿದರು. ಆದರೆ, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದರಿಂದಾಗಿ ಮನವಿ ಸ್ವೀಕರಿಸುವುದಕ್ಕಷ್ಟೇ ಜನತಾ ದರ್ಶನ ಕಾರ್ಯಕ್ರಮ ಸೀಮಿತವಾಯಿತು. ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸುವುದಕ್ಕೆ ಸಾಧ್ಯವಾಗಲಿಲ್ಲ.

ನಗರದ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಚಿವರು 11 ಗಂಟೆಗೆ ಕಾಳಿಕಾಂಬ ದೇವಾಲಯಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ, ಮಧ್ಯಾಹ್ನ 12.15ಕ್ಕೆ ಜನತಾದರ್ಶನ ನಡೆಯುವ ಸ್ಥಳಕ್ಕೆ ಆಗಮಿಸಿದರು. ಈ ವೇಳೆ, ಪಕ್ಷದ ಮುಖಂಡರು, ಕಾರ್ಯಕರ್ತರು ಸಚಿವರಿಗೆ ಹೂಗುಚ್ಛ ಕೊಟ್ಟು, ಹೂವಿನ ಹಾರ ಹಾಕಿ, ಪೋಟೋ ಸೇಷನ್ ನಡೆಸುವುದಕ್ಕೆ ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಸಚಿವರು, ಹಾರ-ತುರಾಯಿ ಬೇಡ, ಜನರಿಗೆ ಅಹವಾಲು ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಈ ವೇಳೆ, ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬಳಿಕ ವೇದಿಕೆ ಕೊನೆಯಲ್ಲೇ ಕುರ್ಚಿ, ಟೇಬಲ್ ಹಾಕಿಸಿಕೊಂಡು ಜನರಿಂದ ಅಹವಾಲು ಸ್ವೀಕರಿಸಲು ಆರಂಭಿಸಿದರು. ಈ ವೇಳೆ, ಅಂಗವಿಕಲ ಹೆಣ್ಣುಮಗಳನ್ನು ಎತ್ತಿಕೊಂಡು ಮಹಿಳೆಯೊಬ್ಬಳು ವೇದಿಕೆಗೆ ಬಂದಿದ್ದನ್ನು ಕಂಡು ಅಂಗವಿಕಲರು ವೇದಿಕೆ ಮೇಲೆ ಬರುವುದು ಬೇಡ. ನಾನೇ ಅವರಿರುವಲ್ಲಿಗೆ ಬಂದು ಮನವಿ ಸ್ವೀಕರಿಸುವುದಾಗಿ ಹೇಳಿ ವೇದಿಕೆ ಕೆಳಗಿಳಿದು ಬಂದರು.

ಈ ಮಧ್ಯೆ, ಸರ್ಕಾರದ ಆದೇಶಕ್ಕೆ ಕಿಡಿಕಾರಿದ ಕುಮಾರಸ್ವಾಮಿ, ಈ ಸರ್ಕಾರ ಚುನಾವಣೆಗೆ ಮುಂಚೆ ರಾಮನಗರದಲ್ಲಿ ಹೇಗೆಲ್ಲಾ ನಡೆದುಕೊಂಡಿತ್ತು ಎನ್ನುವುದು ಗೊತ್ತಿದೆ. ಇವತ್ತು ಕೇಂದ್ರದ ಒಬ್ಬ ಮಂತ್ರಿಯಾಗಿ ನಾನು ಜನರ ಅಹವಾಲು ಸ್ವೀಕರಿಸಲು ಬಂದಿದ್ದರೆ ಹೊಸ ನಿಯಮಾವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದರಿಂದ ಅವರಿಗೆ ಏನೂ ದೊರಕಲ್ಲ ಎಂದು ಟೀಕಿಸಿದರು.

ಹರಕೆ ತೀರಿಸಿದ ಎಚ್‌ಡಿಕೆ:

ಅಮಾವಾಸ್ಯೆ ಅಂಗವಾಗಿ ಕುಮಾರಸ್ವಾಮಿಯವರು ಶುಕ್ರವಾರ ಮಂಡ್ಯದ ಶಕ್ತಿ ದೇವತೆ ಶ್ರೀ ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಬಿಜೆಪಿ ಕಾರ್‍ಯಕರ್ತ ಶಿವಕುಮಾರ್ ಆರಾಧ್ಯ ಎಂಬುವರು ಹರಕೆ ಕಟ್ಟಿ ದೇವಾಲಯದ ಮುಂಭಾಗ ಇರುವ ಬನ್ನಿಮರಕ್ಕೆ ಕಟ್ಟೊಂದನ್ನು ಕಟ್ಟಿದ್ದರು. ಸಚಿವರು ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಕಟ್ಟಿದ್ದ ಹರಕೆ ಕಟ್ಟನ್ನು ಬಿಚ್ಚಿ ಕಾಳಿಕಾ ಮಾತೆಯ ಸನ್ನಿದಾನಕ್ಕೆ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಹರಕೆ ಪೂರ್ಣಗೊಳಿಸಿದರು.

PREV

Recommended Stories

ಉತ್ತರಾಖಂಡದಲ್ಲಿ ಮಳೆ ಆರ್ಭಟ, ಭೂಕುಸಿತ
₹200 ಕೋಟಿ ವಂಚನೆ : ಜಯಾ ಆಪ್ತೆ ಶಶಿಕಲಾ ಆಸ್ತಿ ಮೇಲೆ ಇಡಿ ದಾಳಿ