ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿಗೆ ಗೂಂಡಾಗಳಿಂದ ಕಿರುಕುಳ! 7 ಆರೋಪಿಗಳ ವಿರುದ್ಧ ದೂರು

KannadaprabhaNewsNetwork | Updated : Mar 03 2025, 05:03 AM IST

ಸಾರಾಂಶ

ಇಲ್ಲಿನ ಜಾತ್ರೆಯೊಂದರಲ್ಲಿ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಮತ್ತು ಅವರ ಸ್ನೇಹಿತರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ. ಪರಿಣಾಮ ಖುದ್ದು ರಕ್ಷಾ ಖಡ್ಸೆ ಅವರೇ ಪೊಲೀಸ್‌ ಠಾಣೆಗೆ ಆಗಮಿಸಿ 7 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಜಲಗಾವ್‌ : ಇಲ್ಲಿನ ಜಾತ್ರೆಯೊಂದರಲ್ಲಿ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಮತ್ತು ಅವರ ಸ್ನೇಹಿತರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವ ಘಟನೆಯು ಶುಕ್ರವಾರ ರಾತ್ರಿ ನಡೆದಿದೆ. ಪರಿಣಾಮ ಖುದ್ದು ರಕ್ಷಾ ಖಡ್ಸೆ ಅವರೇ ಪೊಲೀಸ್‌ ಠಾಣೆಗೆ ಆಗಮಿಸಿ 7 ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಪೋಕ್ಸೋ, ಐಟಿ ಕಾಯ್ದೆ ಅಡಿಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ. ಓರ್ವನನ್ನು ಬಂಧಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆಯಲಾಗಿದೆ.

ದೂರು ನೀಡಿ ಮಾತನಾಡಿದ ರಕ್ಷಾ ಖಡ್ಸೆ, ನಾನು ಗುಜರಾತ್‌ನಲ್ಲಿದ್ದೆ. ನನ್ನ ಮಗಳು ಜಾತ್ರೆಗೆ ಹೋಗಬೇಕು ಎಂದು ಫೋನ್‌ ಮಾಡಿದ್ದಳು. ಅದಕ್ಕೆ ಅಂಗರಕ್ಷಕರ ಜೊತೆಗೆ ಹೋಗುವಂತೆ ಸೂಚಿಸಿದ್ದೆ. ಜಾತ್ರೆಯಲ್ಲಿ 30-40 ಗೂಂಡಾಗಳು ನನ್ನ ಮಗಳು ಮತ್ತು ಆಕೆಯ ಸ್ನೇಹಿತರನ್ನು ಹಿಂಬಾಲಿಸಿದರು. ಬಳಿಕ ತಳ್ಳಾಡಿದರು. ಫೋಟೋ ವಿಡಿಯೋಗಳನ್ನು ತೆಗೆದರು. ಇದನ್ನು ತಡೆಯಲು ಬಂದ ನಮ್ಮ ಸಿಬ್ಬಂದಿ ಮೇಲೆಯೂ ದಾಳಿ ಮಾಡಿದರು. ಭಾನುವಾರ ಮನೆಗೆ ಹಿಂದಿರುಗಿದಾಗ ನನ್ನ ಮಗಳು ಘಟನೆಯನ್ನು ವಿವರಿಸಿದಳು. ಫೆ.24ರಂದು ನನ್ನ ಕಾರ್ಯಕ್ರಮದಲ್ಲಿ ಅನುಚಿತವಾಗಿ ವರ್ತಿಸಿದ್ದ ಜನರೇ ಜಲಗಾವ್‌ನಲ್ಲಿಯೂ ಇದ್ದರು ಎಂದು ತಿಳಿಸಿದಳು’ ಎಂದು ಹೇಳಿದರು.

‘ಓರ್ವ ಸಂಸದೆ ಮತ್ತು ಕೇಂದ್ರ ಸಚಿವೆಯ ಪುತ್ರಿಗೆ ಈ ರೀತಿಯ ಸ್ಥಿತಿಯಾಗಿದ್ದು, ನಿಜಕ್ಕೂ ದುರದೃಷ್ಟಕರ. ಇನ್ನು ಸಾಮಾನ್ಯ ಜನರ ಸ್ಥಿತಿ ಯೋಚಿಸಿ’ ಎಂದರು.

ರಾಜಕೀಯ ಕೆಸರೆರಚಾಟ:

ಖಡ್ಸೆ ಅವರ ಪುತ್ರಿ ಪ್ರಕರಣ ಬಳಿಕ ವಿಪಕ್ಷಗಳು ಆಡಳಿತ ಮಹಾಯುತಿ ವಿರುದ್ಧ ಮುಗಿಬಿದ್ದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕೇಂದ್ರ ಸಚಿವರ ಸ್ಥಿತಿಯೇ ಹೀಗಿರುವಾಗ, ಇನ್ನು ಜನಸಾಮಾನ್ಯರ ಸ್ಥಿತಿ ಯೋಚಿಸಿ. ಗೂಂಡಾಗಳಿಗೆ ಮಹಾಯುತಿ ನಾಯಕರ ರಕ್ಷಣೆ ಇದೆ ಎಂದು ವಾಗ್ದಾಳಿ ನಡೆಸಿವೆ.

Share this article