ಅಮೆರಿಕ - ಚೀನಾ ತೆರಿಗೆ ವಾರ್‌ಗೆ 90 ದಿನದ ಕದನ ವಿರಾಮ ಪ್ರಕಟ

KannadaprabhaNewsNetwork | Updated : May 13 2025, 04:37 AM IST
Follow Us

ಸಾರಾಂಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಕಳೆದೊಂದು ತಿಂಗಳಿಂದ ನಡೆಸುತ್ತಿರುವ ತೆರಿಗೆ ಯುದ್ಧಕ್ಕೆ 90 ದಿನಗಳ ಕದನ ವಿರಾಮ ಘೋಷಿಸಿವೆ. ಈ 90 ದಿನಗಳ ಅವಧಿಯಲ್ಲಿ ಎರಡೂ ದೇಶಗಳು ಪರಸ್ಪರ ಹಾಕಿದ್ದ ಪ್ರತಿ ತೆರಿಗೆಯನ್ನು ಹಿಂಪಡೆಯಲು ತೀರ್ಮಾನಿಸಿವೆ.

ಜಿನೆವಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಕಳೆದೊಂದು ತಿಂಗಳಿಂದ ನಡೆಸುತ್ತಿರುವ ತೆರಿಗೆ ಯುದ್ಧಕ್ಕೆ 90 ದಿನಗಳ ಕದನ ವಿರಾಮ ಘೋಷಿಸಿವೆ. ಈ 90 ದಿನಗಳ ಅವಧಿಯಲ್ಲಿ ಎರಡೂ ದೇಶಗಳು ಪರಸ್ಪರ ಹಾಕಿದ್ದ ಪ್ರತಿ ತೆರಿಗೆಯನ್ನು ಹಿಂಪಡೆಯಲು ತೀರ್ಮಾನಿಸಿವೆ.

ತೆರಿಗೆ ಒಪ್ಪಂದಕ್ಕೆ ಸಂಬಂಧಿಸಿ ಜಿನೆವಾದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಮಾತುಕತೆಯ ಬಳಿಕ ಉಭಯ ದೇಶಗಳು ಜಂಟಿಯಾಗಿ ಈ ನಿರ್ಧಾರ ಪ್ರಕಟಿಸಿವೆ.

ಎರಡೂ ದೇಶಗಳು ತೆರಿಗೆ ಒಪ್ಪಂದದ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಲು ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ 90 ದಿನಗಳ ಕಾಲ ಪರಸ್ಪರರ ಮೇಲೆ ವಿಧಿಸಿರುವ ಪ್ರತಿ ತೆರಿಗೆಯನ್ನು ಶೇ.115ರಷ್ಟು ಇಳಿಸಲು ತೀರ್ಮಾನಿಸಿವೆ. ಇದರಿಂದ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಮೆರಿಕವು ಶೇ.30ರಷ್ಟು ತೆರಿಗೆ ವಿಧಿಸಿದರೆ, ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಚೀನಾವು ಇನ್ನು ಶೇ.10ರಷ್ಟು ತೆರಿಗೆ ಹೇರಲಿದೆ.

90 ದಿನಗಳಲ್ಲಿ ಎರಡೂ ದೇಶಗಳು ತೆರಿಗೆ ವಿಚಾರದಲ್ಲಿ ಅಂತಿಮ ನಿರ್ಧಾರವೊಂದಕ್ಕೆ ಬರುವ ವಿಶ್ವಾಸವಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜಮಿನ್ಸನ್‌ ಗ್ರೀರ್‌ ಹಾಗೂ ಖಜಾನೆ ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಹೇಳಿಕೊಂಡಿದ್ದಾರೆ. ಚೀನಾ ಮತ್ತು ಅಮೆರಿಕ ತೆರಿಗೆ ಒಪ್ಪಂದದ ಸುಳಿವು ನೀಡುತ್ತಿದ್ದಂತೆ ವಿಶ್ವಾದ್ಯಂತ ಷೇರುಮಾರುಕಟ್ಟೆಗಳು ಧನಾತ್ಮಕವಾಗಿ ಪ್ರತಿಕ್ರಿಯಿಸಿವೆ.

ಆದಾಯ ತೆರಿಗೆ ಇಲಾಖೆಯ ಎಲ್ಲಾ 7 ಫಾರ್ಮ್‌ ಪ್ರಕಟ

ನವದೆಹಲಿ: ಆದಾಯ ತೆರಿಗೆ ಇಲಾಖೆಯು 2025-26ನೇ ಸಾಲಿನ ಎಲ್ಲಾ 7 ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳನ್ನು ಪ್ರಕಟಿಸಿದೆ. ಸಣ್ಣ ಮತ್ತು ಮಧ್ಯಮ ತೆರಿಗೆದಾರರು ಬಳಸುವ 1 ಮತ್ತು4 ಪಾರ್ಮ್‌ಗಳನ್ನು ಅಗತ್ಯ ಮಾರ್ಪಾಡಿನೊಂದಿಗೆ ಏ.29ರಂದೇ ಬಿಡುಗಡೆ ಮಾಡಲಾಗಿತ್ತು. ಫಾರ್ಮ್‌ 1 ಮತ್ತು 4ರಲ್ಲಿ, ಪಟ್ಟಿ ಮಾಡಲಾದ ಷೇರುಗಳಿಂದ ಬಂದ ಬಂಡವಾಳ ಲಾಭದ ಆದಾಯದ ವರದಿಗೆ ಸಂಬಂಧಿಸಿದ ಬದಲಾವಣೆ ಮಾಡಲಾಗಿದೆ. ಅಂತೆಯೇ, 2, 3, 5, 6 ಮತ್ತು 7 ಫಾರ್ಮ್‌ಗಳಲ್ಲಿ ಬಂಡವಾಳ ಲಾಭ ತೆರಿಗೆಯ ತರ್ಕಬದ್ಧಗೊಳಿಸುವಿಕೆಗೆ ಸಂಬಂಧಿದ ಬದಲಾವಣೆ ಮಾಡಲಾಗಿದೆ. ಲೆಕ್ಕಪರಿಶೋಧನೆ ಮಾಡಬೇಕಾಗಿಲ್ಲದ ವ್ಯಕ್ತಿಗಳ ಮತ್ತು ಖಾತೆಗಳ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜು.31 ಕೊನೆಯ ದಿನಾಂಕ.