ವಾಷಿಂಗ್ಟನ್: ಹೋರ್ಮುಜ್ ಜಲಸಂಧಿಯಲ್ಲಿ ತೆರಳುವ ದುಸ್ಸಾಹಸಕ್ಕೆ ಕೈಹಾಕಿದರೆ ಜಲಸಮಾಧಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಅಗತ್ಯವಿದ್ದರೆ ಆ ಮಾರ್ಗವಾಗಿ ಸಾಗುವ ನೌಕೆಗಳ ರಕ್ಷಣೆಗೆ ಅಮೆರಿಕ ನೌಕಾಪಡೆಯ ಹಡಗುಗಳು ಬೆಂಗಾವಲಾಗಿ ಬರುತ್ತವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಇರಾನ್ ಸೇನೆಗೆ ನೇರ ಸವಾಲೊಡ್ಡಿದ್ದಾರೆ.
ತಮ್ಮ ಟ್ರುತ್ ಸೋಷಿಯಲ್‌ನಲ್ಲಿ ಅವರು ಪೋಸ್ಟ್ ಮಾಡಿದ್ದು, ‘ಅಗತ್ಯವಿದ್ದಲ್ಲಿ ಆದಷ್ಟು ಬೇಗ ಹೋರ್ಮುಜ್‌ನಲ್ಲಿ ಸಾಗುವ ನೌಕೆಗಳ ರಕ್ಷಣೆಗೆ ನಮ್ಮ ನೌಕಾಪಡೆಯನ್ನು ಕಳಿಸುತ್ತೇನೆ. ಏನೇ ಆದರೂ ವಿಶ್ವಕ್ಕೆ ತೈಲ ಪೂರೈಕೆ ಮುಕ್ತವಾಗಿ ಆಗುವಂತೆ ಅಮೆರಿಕ ನೋಡಿಕೊಳ್ಳುತ್ತದೆ’ ಎಂಬ ಭರವಸೆ ನೀಡಿದ್ದಾರೆ. ಜತೆಗೆ, ‘ಅಮೆರಿಕದ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯು ಭೂಮಿಯ ಮೇಲೆ ಅತ್ಯಂತ ಬಲಶಾಲಿ’ ಎಂದು ಸ್ವಪ್ರಶಂಸೆಯನ್ನೂ ಮಾಡಿಕೊಂಡಿದ್ದಾರೆ.
ಅಂತೆಯೇ, ಆ ಮಾರ್ಗದಲ್ಲಿ ಸಾಗುವವರಿಗೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು, ನೌಕೆಗಳಿಗೆ ರಾಜಕೀಯ ಅಪಾಯ ವಿಮೆ ಮತ್ತು ಹಣಕಾಸಿನ ಖಾತರಿ ಒದಗಿಸುವಂತೆ ಅಭಿವೃದ್ಧಿ ಹಣಕಾಸು ನಿಗಮಕ್ಕೆ(ಡಿಎಫ್‌ಸಿ) ನಿರ್ದೇಶಿಸಿದ್ದಾರೆ.
ಟೆಹ್ರಾನ್: ಹೋರ್ಮುಜ್ ಜಲಸಂಧಿಯಲ್ಲಿ ಯಾವುದೇ ಹಡಗು ಸಾಗಲು ಬಿಡುವುದಿಲ್ಲ ಎಂದಿದ್ದ ಇರಾನ್, ಈ ನಿರ್ಬಂಧದಿಂದ ತನ್ನ ಮಿತ್ರರಾಷ್ಟ್ರಗಳಾದ ಚೀನಾ ಮತ್ತು ರಷ್ಯಾಗೆ ವಿನಾಯಿತಿ ನೀಡಿದೆ. ಸಮರ ಸೇರಿದಂತೆ ಎಲ್ಲಾ ಸಮಯದಲ್ಲಿ ಆ ಎರಡು ದೇಶಗಳು ತನ್ನ ಬೆಂಬಲಕ್ಕೆ ನಿಂತಿರುವುದಕ್ಕೆ ಕೃತಜ್ಞತಾ ಸೂಚಕವಾಗಿ, ಅವುಗಳ ಧ್ವಜ ಹೊಂದಿರುವ ಹಡುಗುಗಳಿಗೆ ಮಾತ್ರ ಹೋರ್ಮುಜ್‌ನಲ್ಲಿ ಸಾಗಲು ಅನುಮತಿಸುವ ಈ ನಿರ್ಧಾರ ಕೈಗೊಂಡಿರುವುದಾಗಿ ಇರಾನ್ ಸರ್ಕಾರ ಘೋಷಿಸಿದೆ.