ಗೂಗಲ್‌ನ ಕೈತಪ್ಪಲಿದೆಯೇ ಕ್ರೋಮ್‌ ಸರ್ಚ್‌ ಎಂಜಿನ್‌? ಮಾತೃ ಕಂಪನಿಂದ ಬೇರ್ಪಡುವ ಭೀತಿ

KannadaprabhaNewsNetwork |  
Published : Nov 22, 2024, 01:16 AM ISTUpdated : Nov 22, 2024, 04:41 AM IST
ಕ್ರೋಮ್‌ | Kannada Prabha

ಸಾರಾಂಶ

 ಸರ್ಚ್‌ ಎಂಜಿನ್‌ ಆಗಿರುವ ಕ್ರೋಮ್‌ಗೆ ತನ್ನ ಮಾತೃ ಕಂಪನಿಯಾದ ಗೂಗಲ್‌ನಿಂದ ಬೇರ್ಪಡುವ ಭೀತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹತ್ತಿಕ್ಕುತ್ತಿರುವ ಕಾರಣ ನೀಡಿ ಅಮೆರಿಕ ಸರ್ಕಾರವು ಗೂಗಲ್‌ ಒಡೆತನದಿಂದ ಕ್ರೋಮ್‌ ಸರ್ಚ್‌ ಎಂಜಿನ್‌ ಬೇರ್ಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ವಾಷಿಂಗ್ಟನ್‌: ಜಗತ್ತಿನ ಜನಪ್ರಿಯ ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಆಗಿರುವ ಕ್ರೋಮ್‌ಗೆ ತನ್ನ ಮಾತೃ ಕಂಪನಿಯಾದ ಗೂಗಲ್‌ನಿಂದ ಬೇರ್ಪಡುವ ಭೀತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹತ್ತಿಕ್ಕುತ್ತಿರುವ ಕಾರಣ ನೀಡಿ ಅಮೆರಿಕ ಸರ್ಕಾರವು ಗೂಗಲ್‌ ಒಡೆತನದಿಂದ ಕ್ರೋಮ್‌ ಸರ್ಚ್‌ ಎಂಜಿನ್‌ ಬೇರ್ಪಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಕೋರ್ಟ್‌ ಒಪ್ಪಿದರೆ ಗೂಗಲ್‌ ಕಂಪನಿಯು ಕ್ರೋಮ್‌ ಸರ್ಚ್‌ ಎಂಜಿನ್‌ ಮಾರಾಟ ಮಾಡಬೇಕಾಗುತ್ತದೆ.

16 ವರ್ಷಗಳ ಹಿಂದೆ ಗೂಗಲ್‌ ಕಂಪನಿ ಬಿಡುಗಡೆ ಮಾಡಿದ ಕ್ರೋಮ್‌ ಸರ್ಚ್‌ ಎಂಜಿನ್‌ ಇಂದು ಜಗತ್ತಿನ ನಂ.1 ಸರ್ಚ್‌ ಎಂಜಿನ್‌ ಆಗಿದೆ. ಆದರೆ ಈ ಸರ್ಚ್‌ ಎಂಜಿನ್‌ ಬೇರೆಲ್ಲಾ ಕಂಪನಿಗಳ ಸರ್ಚ್‌ ಎಂಜಿನ್‌ಗಳನ್ನು ತುಳಿದು ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದು ಇತ್ತೀಚೆಗಷ್ಟೇ ಅಮೆರಿಕದ ಸ್ಥಳೀಯ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಆ ತೀರ್ಪಿನ ಹಿನ್ನೆಲೆಯಲ್ಲಿ ಜೋ ಬೈಡೆನ್‌ ಸರ್ಕಾರ ವರದಿಯೊಂದನ್ನು ಸಿದ್ಧಪಡಿಸಿದ್ದು, ಅದರಲ್ಲಿ ಕ್ರೋಮ್‌ ಸರ್ಚ್‌ ಎಂಜಿನ್‌ ಮಾರಾಟ ಮಾಡುವಂತೆ ಗೂಗಲ್‌ಗೆ ಆದೇಶಿಸಬೇಕು ಎಂದು ನ್ಯಾಯಾಲಯವನ್ನು ಆಗ್ರಹಿಸಲಾಗಿದೆ. ಜೊತೆಗೆ, ಮೊಬೈಲ್‌ ಫೋನ್‌ಗಳಲ್ಲಿ ಬಳಸುವ ಗೂಗಲ್‌ನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಮ್‌ ಕೂಡ ಇದೇ ರೀತಿಯಲ್ಲಿ ಪ್ರತಿಸ್ಪರ್ಧಿಗಳನ್ನು ತುಳಿಯುತ್ತಿದ್ದು, ಆ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.

ಟ್ರಂಪ್‌ ಬಂದ ಮೇಲೆ ನಿರ್ಧಾರ:

ಈ ಪ್ರಕರಣವು ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಅಧ್ಯಕ್ಷರಾದ ಬಳಿಕ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಟ್ರಂಪ್‌ ಸರ್ಕಾರ ಯಾವ ನಿಲುವು ತಾಳುತ್ತದೆ ಎಂಬುದರ ಮೇಲೆ ಗೂಗಲ್‌ ಬಳಿ ಕ್ರೋಮ್‌ನ ಒಡೆತನ ಉಳಿಯಲಿದೆಯೇ ಅಥವಾ ಇಲ್ಲವೇ ಎಂಬುದು ನಿರ್ಧಾರವಾಗಲಿದೆ.

ಗೂಗಲ್‌ಗೆ ಮುಳುವಾದ ಭಾರತೀಯ:

ಕುತೂಹಲಕರ ಸಂಗತಿಯೆಂದರೆ, ಗೂಗಲ್‌ ಕಂಪನಿ ತನ್ನ ಪ್ರತಿಸ್ಪರ್ಧಿಗಳನ್ನು ತುಳಿಯುತ್ತಿದೆ ಎಂಬ ತೀರ್ಪನ್ನು ಆಗಸ್ಟ್‌ ತಿಂಗಳಲ್ಲಿ ನೀಡಿದವರು ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದರ ಭಾರತೀಯ ಮೂಲದ ಜಡ್ಜ್‌ ಅಮಿತ್‌ ಮೆಹ್ತಾ. ಅವರ ತೀರ್ಪು ಗೂಗಲ್‌ನ ಬಹುಕೋಟಿ ಕ್ರೋಮ್‌ ಉದ್ದಿಮೆಗೆ ಹೊಡೆತ ನೀಡುವ ಹಂತಕ್ಕೆ ತಲುಪಿದೆ.

ಗೂಗಲ್‌ಗೆ ಈಗಲೇ ಭೀತಿ ಇಲ್ಲ:

ಕ್ರೋಮ್‌ ಬ್ರೌಸರನ್ನು ಮಾರಾಟ ಮಾಡಬೇಕು ಎಂದು ಮುಂದಿನ ದಿನಗಳಲ್ಲಿ ಕೋರ್ಟ್‌ ತೀರ್ಪು ನೀಡಿದರೂ, ಗೂಗಲ್‌ ಕಂಪನಿ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಈ ಪ್ರಕರಣ ಇನ್ನೂ ಹಲವಾರು ವರ್ಷಗಳ ಕಾನೂನು ಹೋರಾಟವನ್ನು ಕಾಣಬಹುದು ಎಂದು ವಿಶ್ಲೇಷಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ