ಅಮೆರಿಕ ನಿಗೂಢ ಅಸ್ತ್ರದಿಂದ ವೆನಿಜುವೆಲನ್ನರಿಗೆ ರಕ್ತ ವಾಂತಿ!

KannadaprabhaNewsNetwork |  
Published : Jan 12, 2026, 03:15 AM IST
ಅಮೆರಿಕ | Kannada Prabha

ಸಾರಾಂಶ

ಜ.2ರ ತಡರಾತ್ರಿ ವೆನಿಜುವೆಲಾ ಮೇಲೆ ದಾಳಿ ಮಾಡಿದ ಅಮೆರಿಕ ಅತ್ಯಂತ ಶಕ್ತಿಶಾಲಿಯಾದ ರಹಸ್ಯಮಯ ಅಸ್ತ್ರವೊಂದನ್ನು ಬಳಸಿತ್ತು. ಅದು ವೆನಿಜುವೆಲಾ ಸೈನಿಕರ ಮೂಗಿನಲ್ಲಿ ರಕ್ತ ಒಸರುವಂತೆ, ರಕ್ತ ಕಾರಿಕೊಳ್ಳುವಂತೆ ಮತ್ತು ನಿಶ್ಚಲವಾಗಿ ನೆಲಕ್ಕೆ ಬೀಳುವಂತೆ ಮಾಡಿತು ಎಂದು ಸ್ವತಃ ವೆನಿಜುವೆಲಾದ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಇದನ್ನು ಶ್ವೇತಭವನ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ನಿಗೂಢ ಶಸ್ತ್ರದ ವಿಚಾರ ಇದೀಗ ಜಾಗತಿಕವಾಗಿ ಗಮನ ಸೆಳೆದಿದ್ದು, ಅಮೆರಿಕದ ಮುಂದುವರಿದ ತಂತ್ರಜ್ಞಾನದ ಕುರಿತು ಅಚ್ಚರಿ ಮೂಡುವಂತೆ ಮಾಡಿದೆ.

- ಖುದ್ದು ವೆನಿಜುವೆಲಾ ಯೋಧನಿಂದ ಭೀಕರತೆ ಅನಾವರಣ-ನಿಮಿಷಕ್ಕೆ 300 ಸುತ್ತು ಗುಂಡು ಹಾರಿಸಿದ ಅಮೆರಿಕ ಯೋಧರು-ತೀಕ್ಷ್ಣವಾದ ಶಬ್ದದ ಬಳಿಕ ವೆನಿಜುವೆಲನ್ನರಿಗೆ ನೋವು, ರಕ್ತಸ್ರಾವ-ಸ್ಫೋಟಕ ಶಬ್ದದ ನಂತರ ನೆಲಕ್ಕೆ ಬಿದ್ದು, ನಿಶ್ಚಲರಾದ ಶತ್ರುಗಳು-ಲೇಸರ್‌, ಮೈಕ್ರೋವೇವ್‌ ಬಳಸಿ ಅಮೆರಿಕದಿಂದ ದಾಳಿ ಸಾಧ್ಯತೆ-ಕೆಲವೇ ಕೆಲವು ಸೈನಿಕರಿಂದ ನೂರಾರು ವೆನಿಜುವೆಲನ್ನರು ಸ್ತಬ್ಧ

--

ವಾಷಿಂಗ್ಟನ್: ಜ.2ರ ತಡರಾತ್ರಿ ವೆನಿಜುವೆಲಾ ಮೇಲೆ ದಾಳಿ ಮಾಡಿದ ಅಮೆರಿಕ ಅತ್ಯಂತ ಶಕ್ತಿಶಾಲಿಯಾದ ರಹಸ್ಯಮಯ ಅಸ್ತ್ರವೊಂದನ್ನು ಬಳಸಿತ್ತು. ಅದು ವೆನಿಜುವೆಲಾ ಸೈನಿಕರ ಮೂಗಿನಲ್ಲಿ ರಕ್ತ ಒಸರುವಂತೆ, ರಕ್ತ ಕಾರಿಕೊಳ್ಳುವಂತೆ ಮತ್ತು ನಿಶ್ಚಲವಾಗಿ ನೆಲಕ್ಕೆ ಬೀಳುವಂತೆ ಮಾಡಿತು ಎಂದು ಸ್ವತಃ ವೆನಿಜುವೆಲಾದ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಇದನ್ನು ಶ್ವೇತಭವನ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಈ ನಿಗೂಢ ಶಸ್ತ್ರದ ವಿಚಾರ ಇದೀಗ ಜಾಗತಿಕವಾಗಿ ಗಮನ ಸೆಳೆದಿದ್ದು, ಅಮೆರಿಕದ ಮುಂದುವರಿದ ತಂತ್ರಜ್ಞಾನದ ಕುರಿತು ಅಚ್ಚರಿ ಮೂಡುವಂತೆ ಮಾಡಿದೆ.

‘ನಾವು ಕಾವಲು ಕಾಯುತ್ತಿದ್ದೆವು, ಇದ್ದಕ್ಕಿದ್ದಂತೆ ನಮ್ಮ ಎಲ್ಲಾ ರಾಡಾರ್ ವ್ಯವಸ್ಥೆಗಳು ಸ್ಥಗಿತಗೊಂಡವು. ಮುಂದೆ ಒಂದರ ಹಿಂದೆ ಒಂದರಂತೆ ಬಹಳಷ್ಟು ಡ್ರೋನ್‌ಗಳು, ಸ್ವಲ್ಪ ಸಮಯದ ನಂತರ ಹತ್ತಾರು ಹೆಲಿಕಾಪ್ಟರ್‌ಗಳು ಬಂದವು. ನಮಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಅಮೆರಿಕ ಶಕ್ತಿಶಾಲಿಯಾದ ರಹಸ್ಯ ಶಸ್ತ್ರಾಸ್ತ್ರವನ್ನು ಬಳಸಿತ್ತು. ಅದರಿಂದ ನಮ್ಮ ಸೈನಿಕರ ಮೂಗಿನಲ್ಲಿ ರಕ್ತ ಒಸರತೊಡಗಿತು. ಬಾಯಲ್ಲಿಯೂ ರಕ್ತ ಬರಲಾರಂಭಿಸಿತು. ಕೊನೆಗೆ ಮಂಡಿಯೂರಬೇಕಾಯಿತು’ ಎಂದು ಸಂದರ್ಶನವೊಂದರಲ್ಲಿ ವೆನಿಜುವೆಲಾ ಸಿಬ್ಬಂದಿ ತಿಳಿಸಿದ್ದಾರೆ.

ನಿಮಿಷಕ್ಕೆ 300 ಸುತ್ತು ಗುಂಡು:‘ಕೆಲವೇ ಕೆಲವು ಸಂಖ್ಯೆಯಲ್ಲಿ ಬಂದಿದ್ದ ಅಮೆರಿಕ ಸೈನಿಕರು ಗನ್‌ಗಳಿಗಿಂತ ಶಕ್ತಿಶಾಲಿಯಾದ ಆಯುಧವನ್ನು ಹೊಂದಿದ್ದರು. ಅವರು ತಾಂತ್ರಿಕವಾಗಿ ಬಹಳ ಮುಂದುವರಿದಿದ್ದರು. ನಾವು ನೂರಾರು ಸಂಖ್ಯೆಯಲ್ಲಿದ್ದೆವು. ಆದರೆ ನಮಗೆ ಯಾವುದೇ ಅವಕಾಶವಿರಲಿಲ್ಲ. ಅವರು ಅಷ್ಟು ವೇಗ ಮತ್ತು ನಿಖರತೆಯಿಂದ ದಾಳಿ ಮಾಡುತ್ತಿದ್ದರು. ಪ್ರತಿಯೊಬ್ಬ ಸೈನಿಕ ನಿಮಿಷಕ್ಕೆ 300 ಸುತ್ತು ಗುಂಡು ಹಾರಿಸುತ್ತಿರುವಂತೆ ಭಾಸವಾಯಿತು. ಅವರ ತಂತ್ರಜ್ಞಾನ, ಶಸ್ತ್ರಾಸ್ತ್ರಗಳೊಂದಿಗೆ ಸ್ಪರ್ಧಿಸಲು ನಮಗೆ ಯಾವುದೇ ಮಾರ್ಗವಿರಲಿಲ್ಲ. ನಾನು ಹಿಂದೆಂದೂ ಅಂಥದ್ದನ್ನು ನೋಡಿಲ್ಲ’ ಎಂದು ವಿವರಿಸಿದ್ದಾರೆ. ತೀಕ್ಷ್ಣ ಶಬ್ದದ ಬಳಿಕ ರಕ್ತವಾಂತಿ!:‘ಒಂದು ಹಂತದಲ್ಲಿ, ಅವರು ಏನೋ ಒಂದನ್ನು ಪ್ರಯೋಗಿಸಿದರು. ಅದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಅದು ತೀವ್ರವಾದ ಧ್ವನಿ ತರಂಗದಂತೆ ಇತ್ತು. ಇದ್ದಕ್ಕಿದ್ದಂತೆ ನನ್ನ ತಲೆ ಒಳಗಿನಿಂದ ಸ್ಫೋಟಗೊಳ್ಳುತ್ತಿರುವಂತೆ ಭಾಸವಾಯಿತು. ನಮಗೆಲ್ಲರಿಗೂ ಮೂಗಿನಿಂದ ರಕ್ತಸ್ರಾವವಾಗಲು ಪ್ರಾರಂಭಿಸಿತು. ಕೆಲವರು ರಕ್ತ ವಾಂತಿ ಮಾಡುತ್ತಿದ್ದರು. ನಾವು ನೆಲಕ್ಕೆ ಬಿದ್ದೆವು, ಚಲಿಸಲು ಸಾಧ್ಯವಾಗಲಿಲ್ಲ. ಆ ಶಬ್ದದ ನಂತರ ನಮಗೆ ಎದ್ದು ನಿಲ್ಲಲು ಸಹ ಸಾಧ್ಯವಾಗಲಿಲ್ಲ’ ಎಂದು ತಿಳಿಸಿದ್ದಾರೆ.ಅಮೆರಿಕವನ್ನು ಕೆಣಕಬೇಡಿ: ಅಮೆರಿಕದ ಸೇನಾ ಸಾಮರ್ಥ್ಯದ ಬಗ್ಗೆ ಆಘಾತಕ್ಕೊಳಗಾಗಿರುವ ಸಿಬ್ಬಂದಿ, ‘ಈ ದಾಳಿಯಿಂದಾಗಿ ಲ್ಯಾಟಿನ್ ಅಮೆರಿಕದ ತುಂಬ ಆಘಾತದ ಅಲೆಗಳು ಎದ್ದಿವೆ. ತಾವು ಅಮೆರಿಕದೆದುರು ಯುದ್ಧ ಮಾಡಬಲ್ಲೆವು ಎಂದು ಯೋಚಿಸುತ್ತಿರುವವರಿಗೆ ನಾನು ಒಂದು ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಅವರಿಗೆ ತಮ್ಮ ಸಾಮರ್ಥ್ಯ ಏನೆಂದು ತಿಳಿದಿಲ್ಲ. ನಾನು ಈ ದಾಳಿಯನ್ನು ನೋಡಿದ ನಂತರ, ಮತ್ತೆಂದೂ ಅಮೆರಿಕದ ವಿರೋಧಿ ಬಣದಲ್ಲಿರಲು ಇಷ್ಟಪಡುವುದಿಲ್ಲ. ಅಮೆರಿಕನ್ನರು ಕೆಣಕುವಂಥವರಲ್ಲ’ ಎಂದಿದ್ದಾರೆ.===ಲೇಸರ್‌, ಮೈಕ್ರೋವೇವ್‌ ಬಳಸಿ ದಾಳಿ?:

ಅಮೆರಿಕ ಸೇನೆಯು ಹಲವು ವರ್ಷಗಳಿಂದ ಡೈರೆಕ್ಟೆಡ್ ಎನರ್ಜಿ ಆಯುಧಗಳನ್ನು ಹೊಂದಿದೆ. ಇವುಗಳು ಲೇಸರ್ ಕಿರಣಗಳು ಅಥವಾ ಮೈಕ್ರೋವೇವ್‌ಗಳಂತಹ ಶಕ್ತಿಯನ್ನು ಬಳಸಿ ಗುರಿಯನ್ನು ನಿಷ್ಕ್ರಿಯಗೊಳಿಸುತ್ತವೆ. ಈ ಶಸ್ತ್ರಾಸ್ತ್ರಗಳನ್ನು ಮನುಷ್ಯರ ಮೇಲೆ ಬಳಸಿದಾಗ ರಕ್ತಸ್ರಾವ, ಚಲನೆಯೇ ಇಲ್ಲದೆ ಬಿದ್ದುಬಿಡುವುದು, ತೀವ್ರ ನೋವು, ಬೆಂಕಿಯಂತಹ ತಾಪ ಮತ್ತು ಇತರ ಲಕ್ಷಣಗಳನ್ನು ಉಂಟುಮಾಡಬಲ್ಲವು ಎಂದು ಅಮೆರಿಕದ ಮಾಜಿ ಗುಪ್ತಚರ ಮೂಲಗಳು ದಿ ಪೋಸ್ಟ್‌ಗೆ ತಿಳಿಸಿವೆ. ಆದರೆ ತಾನು ಹಂಚಿಕೊಂಡ ಪೋಸ್ಟ್‌ ಬಗ್ಗೆ ಅಮೆರಿಕ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.2020ರಲ್ಲಿ ಭಾರತ-ಚೀನಾ ಗಡಿ ವಿವಾದದ ಸಮಯದಲ್ಲಿ, ಚೀನಾ ಸೈನಿಕರು ಮೈಕ್ರೋವೇವ್ ಆಯುಧವನ್ನು ಬಳಸಿ ಭಾರತೀಯ ಸೈನಿಕರನ್ನು ಹಿಂದಕ್ಕೆ ತಳ್ಳಿದರು ಎಂದು ವರದಿಯಾಗಿತ್ತು. ಆದರೆ ಭಾರತೀಯ ಸೇನೆ ಇದನ್ನು ಸುಳ್ಳು ಸುದ್ದಿ ಎಂದು ತಿರಸ್ಕರಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನಾನು ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಬಳಸಲ್ಲ: ದೋವಲ್‌
ಇರಾನ್‌ನಲ್ಲಿ ಶವಾಗಾರ ಭರ್ತಿ, ಶವ ಇಡಲೂ ಜಾಗವಿಲ್ಲ