- ಕೊಲ್ಲಿ ಯುದ್ಧದಲ್ಲಿ ದಿಢೀರ್ ಸಂಧಾನ ಮಾತುಕತೆಯುದ್ಧಕ್ಕೆ 5 ದಿನ ಬ್ರೇಕ್‌- ಇರಾನ್‌ನ ವಿದ್ಯುತ್‌ ಮೂಲಸೌಕರ್ಯದ ಮೇಲಿನ ಆಕ್ರಮಣಕ್ಕೆ ತಾತ್ಕಾಲಿಕ ತಡೆ- ಹೋರ್ಮಜ್‌ ತೆರವಿಗೆ ಇರಾನ್‌ಗೆ 48 ಗಂಟೆ ಗಡುವು ಬೆನ್ನಲ್ಲೇ ಟ್ರಂಪ್‌ ಘೋಷಣೆ

KannadaprabhaNewsNetwork |  
Published : Mar 24, 2026, 01:30 AM IST
ಟ್ರಂಪ್‌  | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಿಢೀರನೇ ತಮ್ಮ ನಿಲುವು ಕೊಂಚ ಸಡಿಲಿಸಿದ್ದಾರೆ. ‘5 ದಿನಗಳ ಮಟ್ಟಿಗೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯದ ಮೇಲೆ ಎಲ್ಲಾ ಮಿಲಿಟರಿ ದಾಳಿಗಳನ್ನು ಮುಂದೂಡಲು ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ’ ಎಂದು ಘೋಷಿಸಿದ್ದಾರೆ.

ಮಾತುಕತೆ ನಡೆದಿದೆ

ಮಧ್ಯ ಏಷ್ಯಾ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ 2 ದಿನಗಳಿಂದ ಇರಾನ್‌ ಜತೆಗೆ ಆಶಾದಾಯಕ ಮತ್ತು ರಚನಾತ್ಮಕ ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಇಡೀ ವಾರ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಇರಾನ್‌ನ ವಿದ್ಯುತ್‌ ಉತ್ಪಾದನಾ ಘಟಕಗಳು ಹಾಗೂ ಇಂಧನ ಮೂಲಸೌಲಭ್ಯಗಳ ಮೇಲಿನ ದಾಳಿಗೆ ನಿಗದಿಪಡಿಸಿದ್ದ ಗಡುವನ್ನು 5 ದಿನಗಳ ಕಾಲ ಮುಂದೂಡುವಂತೆ ಸೇನೆಗೆ ಸೂಚಿಸಿದ್ದೇನೆ.

ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

==

ಪಿಟಿಐ ವಾಷಿಂಗ್ಟನ್‌

ಅಂತ್ಯವಿಲ್ಲದ ದಾರಿಯಲ್ಲಿ ಸಾಗುತ್ತಿದ್ದ ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ‘ಹೋರ್ಮುಜ್‌ ಜಲಸಂಧಿ ಮೇಲಿನ ನಿರ್ಬಂಧವನ್ನು 48 ಗಂಟೆಯೊಳಗೆ ತೆರವು ಮಾಡದಿದ್ದರೆ ಇರಾನ್‌ನ ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದಿಢೀರನೇ ತಮ್ಮ ನಿಲುವು ಕೊಂಚ ಸಡಿಲಿಸಿದ್ದಾರೆ. ‘5 ದಿನಗಳ ಮಟ್ಟಿಗೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯದ ಮೇಲೆ ಎಲ್ಲಾ ಮಿಲಿಟರಿ ದಾಳಿಗಳನ್ನು ಮುಂದೂಡಲು ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ’ ಎಂದು ಘೋಷಿಸಿದ್ದಾರೆ.

ಇದಲ್ಲದೆ, ‘ಇರಾನ್‌ನ ಅತ್ಯಂತ ಗೌರವಾನ್ವಿತ ‘ಉನ್ನತ ವ್ಯಕ್ತಿಯೊಬ್ಬರ ಜತೆ ಅಮೆರಿಕ ಮಾತುಕತೆ ನಡೆಸುತ್ತಿದೆ. ಆದರೆ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಜತೆಗಲ್ಲ. ಆತ ಎಲ್ಲಿದ್ದಾನೋ ನನಗೆ ಗೊತ್ತಿಲ್ಲ. ಒಂದು ವೇಳೆ ಮಾತುಕತೆ ವಿಫಲವಾದರೆ ಅಥವಾ ಈ 5 ದಿನದ ವಿರಾಮದ ವೇಳೆ ಇರಾನ್‌ ದಾಳಿ ಮಾಡಿದರೆ ನಾವೂ ದಾಳಿ ಪುನರಾರಂಭಿಸಲಿದ್ದೇವೆ’ ಎಂದೂ ಹೇಳಿದ್ದಾರೆ.

‘ಇರಾನ್‌ ತಿರುಗೇಟಿನಿಂದ ಕಂಗೆಟ್ಟಿದ್ದ ಟ್ರಂಪ್‌, ಯುದ್ಧ ಹೇಗೆ ನಿಲ್ಲಿಸಬೇಕು ಎಂಬ ಚಿಂತೆಯಲ್ಲಿದ್ದರು. ಅವರ ಈ ಹೇಳಿಕೆಯು ಈಗ ಕದನವಿರಾಮಕ್ಕೆ ದಾರಿ ಹುಡುಕುತ್ತಿರುವ ಸಂಕೇತ’ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇದ್ದಕ್ಕಿದ್ದಂತೇ 5 ದಿನ ಕದನವಿರಾಮ:

ಭಾನುವಾರವಷ್ಟೇ ಟ್ರಂಪ್‌ ಅವರು ಹೊರ್ಮುಜ್‌ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲು 48 ಗಂಟೆಗಳ ಗಡುವು ನೀಡಿದ್ದರು. ತಪ್ಪಿದರೆ ಇರಾನ್‌ನ ವಿದ್ಯುತ್‌ ಉತ್ಪಾದನಾ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ಖಡಕ್‌ ಎಚ್ಚರಿಕೆ ನೀಡಿದ್ದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಇರಾನ್‌, ಗಲ್ಫ್‌ ರಾಷ್ಟ್ರಗಳಲ್ಲಿರುವ ಅಮೆರಿಕದ ನೀರು ಶುದ್ಧೀಕರಣ ಘಟಕ, ಇಂಧನ ಮತ್ತು ತಂತ್ರಜ್ಞಾನ ಕೇಂದ್ರಗಳ ಮೇಲೆ ದಾಳಿ ನಡೆಸುವುದಾಗಿ ತಿರುಗೇಟು ನೀಡಿತ್ತು. ಈ ಮೂಲಕ ಮಧ್ಯಪ್ರಾಚ್ಯ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಆತಂಕ ಶುರುವಾಗಿತ್ತು.

ಇದರ ಬೆನ್ನಲ್ಲೇ ಇದೀಗ ಟ್ರಂಪ್‌ ಅವರು ನಿಲುವು ಬದಲಿಸಿ, ‘ಮಧ್ಯ ಏಷ್ಯಾ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ 2 ದಿನಗಳಿಂದ ಇರಾನ್‌ ಜತೆಗೆ ಆಶಾದಾಯಕ ಮತ್ತು ರಚನಾತ್ಮಕ ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಇಡೀ ವಾರ ಮುಂದುವರಿಯುವ ನಿರೀಕ್ಷೆ ಇದೆ. ಹೀಗಾಗಿ ಇರಾನ್‌ನ ವಿದ್ಯುತ್‌ ಉತ್ಪಾದನಾ ಘಟಕಗಳು ಹಾಗೂ ಇಂಧನ ಮೂಲಸೌಲಭ್ಯಗಳ ಮೇಲಿನ ದಾಳಿಗೆ ನಿಗದಿಪಡಿಸಿದ್ದ ಗಡುವನ್ನು 5 ದಿನಗಳ ಕಾಲ ಮುಂದೂಡುವಂತೆ ಸೇನೆಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ. ಮುಂಚಿನ ಗಡುವು ಮಂಗಳವಾರ ನಸುಕಿನ 5.14ಕ್ಕೆ ಮುಗಿಯುವುದಿತ್ತು,

ಆದರೆ‘ ನನ್ನ ಈ ನಿರ್ಧಾರವು ಮಾತುಕತೆಯ ಧಾಟಿ ಮತ್ತು ಯಶಸ್ಸನ್ನು ಆಧರಿಸಿಕೊಂಡು ಬದಲಾಗಲಿದೆ ಎಂದೂ ಹೇಳಿದ್ದಾರೆ. ಈ ಮೂಲಕ ಇರಾನ್‌ ಮತ್ತೆ ದಾಳಿ ನಡೆಸಿದರೆ ಅಥವಾ ಮಾತುಕತೆ ವಿಫಲವಾದರೆ ನಾವೂ ದಾಳಿ ನಡೆಸಬೇಕಾದೀತು’ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಉನ್ನತ ನಾಯಕನ ಜತೆ ಮಾತುಕತೆ:

ಇದಾದ ನಂತರ ಫ್ಲೋರಿಡಾದ ಪಾಮ್ ಬೀಚ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ‘ಇರಾನ್ ಡೀಲ್‌ ಮಾಡಿಕೊಳ್ಳಲು ಬಯಸುತ್ತಿದೆ. ಹೀಗಾಗಿ ನಮ್ಮ ಮಧ್ಯಪ್ರಾಚ್ಯ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ (ಟ್ರಂಪ್ ಅವರ ಅಳಿಯ) ಭಾನುವಾರ ಸಂಜೆಯವರೆಗೆ ಇರಾನ್‌ನ ಓರ್ವ ‘ಗೌರವಾನ್ವಿತ’ ನಾಯಕನೊಂದಿಗೆ ಮಾತುಕತೆ ನಡೆಸಿದ್ದಾರೆ. ಚರ್ಚೆ ಮುಂದುವರಿಯುತ್ತದೆ’ ಎಂದರು.

ಆದರೆ, ಟೆಹ್ರಾನ್ ಪ್ರತಿನಿಧಿಸುವ ಯಾವುದೇ ವ್ಯಕ್ತಿಯ ಹೆಸರನ್ನು ಟ್ರಂಪ್ ಹೆಸರಿಸಲಿಲ್ಲ. ‘ಅಮೆರಿಕವು ಸುಪ್ರೀಂ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ ಅವರೊಂದಿಗೆ ಮಾತನಾಡಿಲ್ಲ. ಆತ ಇದ್ದಾನೋ ಇಲ್ಲವೋ ಗೊತ್ತಿಲ್ಲ. ನಾವು ಒಬ್ಬ ಉನ್ನತ ವ್ಯಕ್ತಿ...ಅತ್ಯಂತ ಗೌರವಾನ್ವಿತ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ’ ಎಂದು ಕುಹಕವಾಡಿದರು.

‘ಇರಾನ್ ಜೊತೆ ಒಪ್ಪಂದ ಮಾಡಿಕೊಂಡರೆ, ಇರಾನ್‌ನ ಯುರೇನಿಯಂ ಅನ್ನು ವಿವಾದಿತ ಪರಮಾಣು ಕಾರ್ಯಕ್ರಮದ ಬದಲು ಶಾಂತಿಯ ಉದ್ದೇಶಕ್ಕೆ ಬಳಸಲು ಕ್ರಮ ಜರುಗಿಸಲಾಗುತ್ತದೆ’ ಎಂದೂ ಹೇಳಿದರು.

ಮಾತುಕತೆಗೆ ಕೆಲ ದೇಶಗಳ ರಾಯಭಾರತ್ವ?:

ವರದಿಗಳ ಪ್ರಕಾರ, ಅಮೆರಿಕ ಜತೆ ಮಾತುಕತೆ ನಡೆಸುವುದನ್ನು ಇರಾನ್‌ ನಿರಾಕರಿಸಿದೆ, ಆದರೆ ಈ ಪ್ರದೇಶದ ಕೆಲವು ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಒಪ್ಪಿಕೊಂಡಿದೆ.

ಕಳೆದ 2 ದಿನಗಳಿಂದ ಟರ್ಕಿ, ಈಜಿಪ್ಟ್ ಮತ್ತು ಪಾಕಿಸ್ತಾನಗಳು, ಅಮೆರಿಕ ಮತ್ತು ಇರಾನ್ ನಡುವೆ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಅಮೆರಿಕದ ಮೂಲವನ್ನು ಉಲ್ಲೇಖಿಸಿ ಆಕ್ಸಿಯೋಸ್ ಸುದ್ದಿ ವೆಬ್‌ಸೈಟ್ ವರದಿ ಮಾಡಿದೆ.

‘ಮೂರೂ ದೇಶಗಳ ವಿದೇಶಾಂಗ ಸಚಿವರು ಶ್ವೇತಭವನದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ’ ಎಂದು ಅಮೆರಿಕದ ಮೂಲಗಳು ಆಕ್ಸಿಯಾಸ್‌ ಸುದ್ದಿಸಂಸ್ಥೆಗೆ ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುದ್ಧ: ನಿನ್ನೆ ಒಂದೇ ದಿನ ಸೆನ್ಸೆಕ್ಸ್1836, ನಿಫ್ಟಿ 601 ಅಂಕ ಇಳಿಕೆ
ವಿಪತ್ತುಗಳ ನಡುವೆಯೂ ಭಾರತ ಸಮರ್ಥ ಹೆಜ್ಜೆ: ಮೋದಿ ಶ್ಲಾಘನೆ