ನವದೆಹಲಿ: ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಮೊದಲಾದ ನಟಿಯರ ಡೀಪ್ ಫೇಕ್ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ‘ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಬಳಕೆಯು ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ‘ಮಾಧ್ಯಮಗಳು ಈ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಹಾಗೂ ಅದರ ದುರುಪಯೋಗ ಮತ್ತು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದ್ದಾರೆ.
ಇದೇ ವೇಳೆ, ತಾವೆಂದೂ ಗುಜರಾತ್‌ನ ಸಾಂಪ್ರದಾಯಿಕ ಗರ್ಬಾ ಹಾಡನ್ನು ಹಾಡದಿದ್ದರೂ, ತಾವು ಹಾಡಿದಂತೆ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಲಾಗಿದೆ ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.ಶುಕ್ರವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ‘ದೀಪಾವಳಿ ಮಿಲನ್’ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನನ್ನ ಶಾಲಾ ದಿನಗಳಿಂದಲೂ ನಾನು ಹಾಡು ಹಾಡಿಲ್ಲ. ಆದರೂ ಗರ್ಬಾ ಉತ್ಸವದಲ್ಲಿ ನಾನು ಹಾಡುತ್ತಿರುವಂತೆ ತೋರಿಸಲಾಗಿರುವ ವಿಡಿಯೋವನ್ನು ಇತ್ತೀಚೆಗೆ ನೋಡಿದ್ದೇನೆ. ನನ್ನನ್ನು ಅತಿಯಾಗಿ ಪ್ರೀತಿಸುವವರು ಈ ವಿಡಿಯೋ ಫಾರ್ವರ್ಡ್ ಮಾಡುತ್ತಿದ್ದಾರೆ’ ಎಂದು ಹಾಸ್ಯ ಶೈಲಿಯಲ್ಲಿ ಹೇಳಿದರು.‘ನಮ್ಮಂತಹ ವೈವಿಧ್ಯಮಯ ಸಮಾಜದಲ್ಲಿ, ಡೀಪ್‌ಫೇಕ್‌ಗಳು ದೊಡ್ಡ ಬಿಕ್ಕಟ್ಟನ್ನು ಉಂಟು ಮಾಡಬಹುದು ಮತ್ತು ಸಮಾಜದಲ್ಲಿ ಅಸಮಾಧಾನದ ಬೆಂಕಿಯನ್ನು ಹುಟ್ಟುಹಾಕಬಹುದು. ಏಕೆಂದರೆ ಈ ವಿಡಿಯೋಗಳು ನೈಜವೋ ಅಥವಾ ಅಸಲಿಯೋ ಎಂಬುದನ್ನು ಪರಿಶೀಲಿಸಲು ಜನರ ಬಳಿ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ’ ಎಂದರು.‘ಈಗ ಸಿಗರೇಟ್‌ನಂತಹ ಉತ್ಪನ್ನಗಳಲ್ಲಿ ಆರೋಗ್ಯ ಬಗ್ಗೆ ಎಚ್ಚರಿಕೆ ಸಂದೇಶಗಳು ಇರುತ್ತವೆ. ಅದೇ ರೀತಿ ಡೀಪ್‌ಫೇಕ್ ವಿಡಿಯೋಗಳು ಕೂಡ ಎಚ್ಚರಿಕೆ ಸಂದೇಶಗಳನ್ನು ಹೊಂದಿರಬೇಕು’ ಎಂದು ಪ್ರಧಾನಿ ಕರೆ ನೀಡಿದರು.‘ಈ ಹಿಂದೆ ಕೆಲವು ವಿವಾದಾತ್ಮಕ ಡೈಲಾಗ್‌ಗಳೊಂದಿಗೆ ಚಿತ್ರಗಳು ಬಂದು ಹೋಗುತ್ತಿದ್ದವು. ಆದರೆ ಅಷ್ಟೇನೂ ಸಮಸ್ಯೆ ಆಗುತ್ತಿರಲಿಲ್ಲ, ಆದರೆ ಬದಲಾದ ಕಾಲದಲ್ಲಿ, ನಿರ್ದಿಷ್ಟ ವರ್ಗವೊಂದನ್ನು ಅವಮಾನಿಸಿದ್ದಾರೆ ಎಂದು ಚಲನಚಿತ್ರಗಳು ತುಂಬಾ ವಿವಾದಕ್ಕೀಡಾಗುತ್ತಿವೆ. ಇಂಥ ಚಿತ್ರಗಳ ಪ್ರದರ್ಶನವೇ ಕಷ್ಟವಾಗುತ್ತಿದೆ’ ಎಂದು ಬದಲಾದ ಕಾಲದ ಬಗ್ಗೆ ಅವರು ಉದಾಹರಿಸಿದರು.ಏನಿದು ಡೀಪ್‌ಫೇಕ್ ವಿಡಿಯೋ?ಡೀಪ್‌ಫೇಕ್ ವಿಡಿಯೋಗಳು ಹೊಸ ರೀತಿಯ ವಿಡಿಯೋಗಳಾಗಿದ್ದು, ಬೇರೆ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರ ಮುಖ ಜೋಡಿಸಲಾಗುತ್ತದೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಲಾಗುತ್ತಿದೆ. ಇದು ಅಸಲಿಯೋ ನಕಲಿಯೋ ಎಂದು ಗೊತ್ತಾಗದಷ್ಟು ನಿಖರತೆಯನ್ನು ಅವು ಹೊಂದಿರುತ್ತವೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಅರೆಬರೆ ಬಟ್ಟೆ ಧರಿಸಿದ್ದ ನಟಿ ಝಾರಾ ಎಂಬುವರ ದೇಹದ ಜತೆ ಜೋಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಬಳಿಕ ಇಂಥ ವಿಡಿಯೋ ಮಾಡುವುದು ಶಿಕ್ಷಾರ್ಹ ಎಂದು ಕೇಂದ್ರ ಸರ್ಕಾರ ಎಚ್ಚರಿಸಿತ್ತು.
ಮೋದಿ ಹೇಳಿದ್ದು ಏನು?- ಡೀಪ್‌ಫೇಕ್ ವಿಡಿಯೋ ಸೃಷ್ಟಿಗೆ ಕೃತಕ ಬುದ್ಧಿಮತ್ತೆ ಬಳಕೆ ದೊಡ್ಡ ಬಿಕ್ಕಟ್ಟು ತರಬಹುದು- ನಮ್ಮಂತಹ ವೈವಿಧ್ಯಮಯ ಸಮಾಜದಲ್ಲಿ ಡೀಪ್‌ಫೇಕ್ ಬೃಹತ್ ಸಮಸ್ಯೆ ತರಬಹುದು- ಈ ವಿಡಿಯೋಗಳು ಅಸಲಿಯೋ, ನಕಲಿಯೋ ಎಂದು ಪರಿಶೀಲಿಸುವ ವ್ಯವಸ್ಥೆ ಜನರಲ್ಲಿಲ್ಲ- ಸಿಗರೆಟ್ ಪ್ಯಾಕ್‌ನಲ್ಲಿರುವಂತಹ ಎಚ್ಚರಿಕೆ ಸಂದೇಶಗಳು ಇಂಥ ವಿಡಿಯೋಗೂ ಬೇಕು- ಮಾಧ್ಯಮಗಳು ಇಂತಹ ವಿಡಿಯೋ ಬಗ್ಗೆ ಶಿಕ್ಷಣ ನೀಡಬೇಕು, ಜಾಗೃತಿ ಮೂಡಿಸಬೇಕು