ಉತ್ತರ ಕಾಶಿ ಮೇಘ ಸ್ಫೋಟ : 2 ಸಾವು, 7 ಮಂದಿ ಕಣ್ಮರೆ

KannadaprabhaNewsNetwork |  
Published : Jun 30, 2025, 12:34 AM ISTUpdated : Jun 30, 2025, 06:11 AM IST
Cloud Burst

ಸಾರಾಂಶ

ಉತ್ತರಕಾಶಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ನಿರ್ಮಾಣ ಕೆಲಸದಲ್ಲಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ.

ಉತ್ತರಕಾಶಿ (ಉತ್ತರಾಖಂಡ): ಉತ್ತರಕಾಶಿಯಲ್ಲಿ ಭಾನುವಾರ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಭೂಕುಸಿತದಲ್ಲಿ ನಿರ್ಮಾಣ ಕೆಲಸದಲ್ಲಿದ್ದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ.

ಯಮುನೋತ್ರಿ ದೇವಸ್ಥಾನದ ಮಾರ್ಗದಲ್ಲಿನ ಬಾರ್ಕೋಟ್‌ ಪ್ರದೇಶದ ಸಿಲೈ ತಿರುವಿನಲ್ಲಿ ಬಳಿ ಭಾರೀ ಮಳೆ ಮತ್ತು ಮೇಘಸ್ಪೋಟ ಸಂಭವಿಸಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಹೋಟೆಲ್‌ವೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನೇಪಾಳದ 29 ಕಾರ್ಮಿಕರು ಕೆಲಸಕ್ಕಿದ್ದರು. ಹೆದ್ದಾರಿ ಪಕ್ಕದಲ್ಲಿಯೇ ಅವರು ಡೇರೆಗಳನ್ನು ಹಾಕಿಕೊಂಡಿದ್ದರು. ಆದರೆ ಹೆದ್ದಾರಿಯಲ್ಲಿ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದರು.

ಘಟನೆಯಲ್ಲಿ 20 ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಉಳಿದ 9 ಕಾರ್ಮಿಕರು ಕೊಚ್ಚಿ ಹೋಗಿದ್ದು, ಆ ಪೈಕಿ ಇಬ್ಬರ ಶವ ಪತ್ತೆಯಾಗಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. ಹೆದ್ದಾರಿಯಲ್ಲಿ ಭೂಕುಸಿತದಿಂದಾಗಿ ಯಮುನೋತ್ರಿಯಿಂದ ಹಿಂದಿರುಗುವ ಪ್ರಯಾಣಿಕರು ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಸ್ಥಳೀಯಾಡಳಿತ ಮನವಿ ಮಾಡಿದೆ. ಇನ್ನು ಮಳೆ ಮತ್ತು ಭೂಕುಸಿತ ಕಾರಣದಿಂದ ಸರ್ಕಾರ ಚಾರ್‌ಧಾಮ್ ಯಾತ್ರೆಯನ್ನು ಒಂದು ದಿನ ಸ್ಥಗಿತಗೊಳಿಸಿದೆ.

ತುರ್ತುಸ್ಥಿತಿಯಿಂದ ಸಂವಿಧಾನ ಹತ್ಯೆ: ಮೋದಿ 

ನವದೆಹಲಿ: ‘ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದವರು ಕೇವಲ ಸಂವಿಧಾನವನ್ನು ಹತ್ಯೆಗೈಯಲಿಲ್ಲ, ನ್ಯಾಯಾಂಗವನ್ನೂ ತಮ್ಮ ಕೈಗೊಂಬೆ ಮಾಡಿಕೊಂಡರು’ ಎಂದು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರು ಹೇಳದೆಯೇ ಟೀಕಾ ಪ್ರಹಾರ ನಡೆಸಿದರು.ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 123ನೇ ಸಂಚಿಕೆಯಲ್ಲಿ ಮಾತನಾಡಿದ ಅವರು ತುರ್ತುಸ್ಥಿತಿ ಜಾರಿಗೊಳಿಸಿದ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದೇ ವೇಳೆ, ಮಾಜಿ ಪ್ರಧಾನಿಗಳಾದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಜಿ ಉಪಪ್ರಧಾನಿ ಜಗಜೀವನ್ ರಾಂ ಅವರು ತುರ್ತುಸ್ಥಿತಿಯ ಕರಾಳತೆ ಕುರಿತು ಮಾತನಾಡಿದ ಆಡಿಯೋವನ್ನು ಪ್ರಸಾರ ಮಾಡಿದರು.

‘ತುರ್ತು ಪರಿಸ್ಥಿತಿ ವೇಳೆ ವ್ಯಾಪಕವಾಗಿ ಜನರ ಮೇಲೆ ದೌರ್ಜನ್ಯ ನಡೆಯಿತು. ಆ ಸಮಯದಲ್ಲಿ ಮೀಸಾ ಕಾಯ್ದೆ ಅಡಿಯಲ್ಲಿ ಯಾರನ್ನಾದರೂ ಬಂಧಿಸಬಹುದಿತ್ತು. ಸಾವಿರಾರು ಜನರನ್ನು ಬಂಧಿಸಿ, ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಆದರೆ ಅವರು ತಲೆಬಾಗಲಿಲ್ಲ ಮತ್ತು ಪ್ರಜಾಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಇದೇ ಭಾರತೀಯರ ಶಕ್ತಿಯಾಗಿದೆ’ ಎಂದರು.

‘ತುರ್ತುಸ್ಥಿತಿ ವಿರುದ್ಧ ಹೋರಾಡಿದ ಜನ ಕೊನೆಗೂ ಗೆದ್ದರು, ಅದನ್ನು ಹೇರಿದವರು ಸೋತರು. ಅಂದು ಹೋರಾಡಿದ ಮಹನೀಯರು ಸಂವಿಧಾನವನ್ನು ಬಲಿಷ್ಠವಾಗಿಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ಹಾಗಾಗಿ ಅವರನ್ನು ಸದಾ ಸ್ಮರಿಸಬೇಕು’ ಎಂದು ಕರೆ ನೀಡಿದರು.

ಅಂಬಾನಿ ಪುತ್ರ ಅನಂತ್‌ಗಿನ್ನು ವಾರ್ಷಿಕ ₹20 ಕೋಟಿ ವೇತನ

ನವದೆಹಲಿ: ದೇಶದ ಅತಿಸಿರಿವಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಕಿರಿಯ ಪುತ್ರನಾದ ರಿಲಯನ್ಸ್ ಇಂಡಸ್ಟ್ರೀಸ್‌ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್‌ ಅಂಬಾನಿ ಅವರಿಗೆ ಇನ್ನು ವಾರ್ಷಿಕ 10ರಿಂದ 20 ಕೋಟಿ ರು. ವೇತನ ನೀಡಲಾಗುವುದು. ಜತೆಗೆ, ಕಂಪನಿಯ ಲಾಭಕ್ಕೆ ಕಮಿಷನ್‌ ನೀಡಲಾಗುವುದು ಎಂದು ಷೇರುದಾರರ ನೋಟಿಸ್‌ನಲ್ಲಿ ಮಾಹಿತಿ ನೀಡಲಾಗಿದೆ.ಅನಂತ್‌ ಅವರನ್ನು ಏಪ್ರಿಲ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿ.ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿತ್ತು. ಮುಕೇಶ್‌ ಅವರ ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್‌ರನ್ನು 2023ರಲ್ಲಿ ಆಯಿಲ್‌-ಟು-ಟೆಲೆಕಾಂ ಆ್ಯಂಡ್‌ ರೀಟೇಲ್‌ ಸಮೂಹಲದ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಿಸಲಾಗಿತ್ತು.ಈ ಮೊದಲು, ಕಾರ್ಯನಿರ್ವಾಹಕ ಹುದ್ದೆಯಲ್ಲಿರದ ಅಂಬಾನಿಯ ಮೂವರು ಮಕ್ಕಳಿಗೆ ಯಾವುದೇ ಸಂಬಳ ನೀಡಲಾಗುತ್ತಿರಲಿಲ್ಲ. ಬದಲಿಗೆ ಸಮಿತಿ ಸಭೆಗಳಿಗೆ ಹಾಜರಾಗಿದ್ದಕ್ಕಾಗಿ ಸಿಟ್ಟಿಂಗ್‌ ಶುಲ್ಕವಾಗಿ 4 ಲಕ್ಷ ರು. ಹಾಗೂ ಕಮಿಷನ್‌ ರೂಪದಲ್ಲಿ 97 ಲಕ್ಷ ರು. ಕೊಡಲಾಗುತ್ತಿತ್ತು.

ಭಾರತದಲ್ಲಿ ಪ್ಯಾನಾಸಾನಿಕ್ ಫ್ರಿಡ್ಜ್‌, ವಾಷಿಂಗ್‌ ಮಷಿನ್ ಮಾರಾಟ ಸ್ಥಗಿತ

ಮುಂಬೈ: ಜಪಾನ್ ಮೂಲದ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿ ಪ್ಯಾನಾಸಾನಿಕ್, ಭಾರತದ ಮಾರುಕಟ್ಟೆಯಲ್ಲಿ ಫ್ರಿಡ್ಜ್‌ ಮತ್ತು ವಾಷಿಂಗ್ ಮಷಿನ್‌ಗಳ ಮಾರಾಟ ನಿಲ್ಲಿಸಲು ನಿರ್ಧರಿಸಿದೆ. ಸತತ 6 ವರ್ಷಗಳಿಂದ ಈ ಎರಡೂ ಉತ್ಪನ್ನಗಳ ಮಾರಾಟ ಕುಸಿದು ಗಣನೀಯ ನಷ್ಟ ಅನುಭವಿಸುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿದೆ. ಆದರೆ ಕಂಪನಿಯ ಇತರ ಉತ್ಪನ್ನಗಳು ಭಾರತದಲ್ಲಿ ಲಭ್ಯವಿರಲಿವೆ.‘ಪ್ಯಾನಾಸಾನಿಕ್‌ ಭಾರತದಲ್ಲಿ ರೆಫ್ರಿಜರೇಟರ್‌ ಮತ್ತು ವಾಷಿಂಗ್‌ ಮಷಿನ್‌ ಮಾರಾಟದಲ್ಲಿ ಅತ್ಯಂತ ಕನಿಷ್ಠ ಮಾರುಕಟ್ಟೆಯನ್ನು ಹೊಂದಿದೆ. ವಾಷಿಂಗ್ ಮಷಿನ್ ಪಾಲು ಕೇವಲ ಶೇ.1.8ರಷ್ಟಿದ್ದರೆ, ಫ್ರಿಡ್ಜ್‌ ಪಾಲು ಶೇ.0.8ರಷ್ಟಿದೆ. ಈ ಎರಡೂ ಉತ್ಪನ್ನಗಳಿಂದ ಕಂಪನಿಗೆ ಭಾರತದಲ್ಲಿ ಸತತ ಆರು ವರ್ಷಗಳಿಂದ ಯಾವುದೇ ಲಾಭವಾಗಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಕಂಪನಿ ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ