ದೇಶದ ಮೊದಲ 32 ಬಿಟ್‌ ಮೈಕ್ರೋಪ್ರೊಸೆಸರ್‌ ಚಿಪ್‌ ‘ವಿಕ್ರಂ’ ಬಿಡುಗಡೆ

KannadaprabhaNewsNetwork |  
Published : Sep 03, 2025, 01:02 AM IST
ಚಿಪ್‌ ಹಸ್ತಾಂತರ | Kannada Prabha

ಸಾರಾಂಶ

ದೇಶದ ಮೊದಲ ಸ್ವದೇಶಿ ಚಿಪ್‌ ‘ವಿಕ್ರಂ 32 ಬಿಟ್‌’ ಮೈಕ್ರೋಪ್ರೊಸೆಸರ್ ಚಿಪ್‌ ಅನ್ನು ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

- ಇಸ್ರೋ ಅಭಿವೃದ್ಧಿಪಡಿಸಿದ ಚಿಪ್‌ ಪ್ರಧಾನಿ ಮೋದಿಗೆ ಹಸ್ತಾಂತರ

- ಇಸ್ರೋದ ಪಿಎಸ್‌ಎಲ್‌ವಿ ಸಿ60 ರಾಕೆಟ್‌ನಲ್ಲಿ ಇದರ ಬಳಕೆ---

ಸೆಮಿಕಂಡಕ್ಟರ್‌ ಡಿಜಿಟಲ್‌ ವಜ್ರ

ಭಾರತದೊಂದಿಗೆ ಸಮಿಕಂಡಕ್ಟರ್‌ ಭವಿಷ್ಯವನ್ನು ರೂಪಿಸಲು ಜಗತ್ತು ಸಿದ್ಧವಿದೆ. ಹಿಂದಿನ ಶತಮಾನವನ್ನು ‘ಕಪ್ಪು ಚಿನ್ನ’ ರೂಪಿಸಿತು. ಈ ಶತಮಾನವು ಚಿಪ್‌ ಮೇಲೆ ಅವಲಂಬಿತವಾಗಿದೆ. 2021ರಿಂದ ಭಾರತದಲ್ಲಿ 10 ಸೆಮಿಕಂಡಕ್ಟರ್‌ ಯೋಜನೆಗಳಲ್ಲಿ 1.5 ಲಕ್ಷ ಕೋಟಿ ರು. ಹೂಡಿಕೆಗೆ ಅನುಮತಿ ದೊರೆತಿದೆ. ಭಾರತ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲಿದೆ.

- ನರೇಂದ್ರ ಮೋದಿ, ಪ್ರಧಾನಿ

--

ನವದೆಹಲಿ: ದೇಶದ ಮೊದಲ ಸ್ವದೇಶಿ ಚಿಪ್‌ ‘ವಿಕ್ರಂ 32 ಬಿಟ್‌’ ಮೈಕ್ರೋಪ್ರೊಸೆಸರ್ ಚಿಪ್‌ ಅನ್ನು ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಅವರು ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು. ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಸೆಮಿಕಂಡಕ್ಟರ್‌ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದೆ.

ಈ ಹಿಂದೆ 16 ಬಿಟ್‌ನ ಚಿಪ್‌ ಅಭಿವೃದ್ಧಿಪಡಿಸಿದ್ದ ಇಸ್ರೋ ಬಳಿಕ 32 ಬಿಟ್‌ನ ಚಿಪ್‌ ಅಭಿವೃದ್ಧಿಪಡಿಸಿದೆ. ಇದನ್ನು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಡಾವಣೆಗೊಂಡ ಸ್ಪೇಡೆಕ್ಸ್‌ ನೌಕೆಯಿದ್ದ ಪಿಎಸ್‌ಎಲ್‌ವಿ ಸಿ60 ರಾಕೆಟ್‌ನಲ್ಲಿ ಯಶಸ್ವಿಯಾಗಿ ಬಳಸಲಾಗಿತ್ತು.

ಇದಕ್ಕೂ ಮುನ್ನ ಸೆಮಿಕಂಡಕ್ಟರ್‌ ಇಂಡಿಯಾ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ‘ವಿಶ್ವವು ಭಾರತದ ಮೇಲೆ ಇಂದು ವಿಶ್ವಾಸ ಇರಿಸಿದೆ. ಭಾರತದೊಂದಿಗೆ ಸಮಿಕಂಡಕ್ಟರ್‌ ಭವಿಷ್ಯವನ್ನು ರೂಪಿಸಲು ಜಗತ್ತು ಸಿದ್ಧವಾಗಿದೆ. ಹಿಂದಿನ ಶತಮಾನವನ್ನು ‘ಕಪ್ಪು ಚಿನ್ನ’ ರೂಪಿಸಿತು. ಈ ಶತಮಾನವು ಚಿಪ್‌ಗಳ ಮೇಲೆ ಅವಲಂಬಿತವಾಗಿದೆ. 2021ರಿಂದ ಭಾರತದಲ್ಲಿ 10 ಸೆಮಿಕಂಡಕ್ಟರ್‌ ಯೋಜನೆಗಳಲ್ಲಿ 18 ಬಿಲಿಯನ್‌ ಡಾಲರ್‌ (1.5 ಲಕ್ಷ ಕೋಟಿ ರು.) ಹೂಡಿಕೆಗೆ ಅನುಮತಿ ದೊರೆತಿದೆ. ಭಾರತವು ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಕ್ರಂ ಚಿಪ್‌ ಸಾಮರ್ಥ್ಯ:

ಇದು ತನ್ನ ರಾಕೆಟ್‌ಗಳಿಗೆಂದು ಇಸ್ರೋ ಅಭಿವೃದ್ಧಿಪಡಿಸಿದ ಮೈಕ್ರೋಪ್ರೊಸೆಸರ್‌. ಇದನ್ನು ಕಂಪ್ಯೂಟರ್‌ನ ಸಿಪಿಯುಗಳಲ್ಲಿ ಬಳಸಲಾಗುತ್ತದೆ. ಇದರ ಸಾಮರ್ಥ್ಯವು ಕಂಪ್ಯೂಟರ್‌ನ ಸಾಮರ್ಥ್ಯ ಹೆಚ್ಚಿಸುತ್ತದೆ. ಉಪಗ್ರಹ ಉಡ್ಡಯನಕ್ಕೆ ಬಳಸುವ ರಾಕೆಟ್‌ ಕ್ಷಣಾರ್ಧದಲ್ಲಿ ಹಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ, ಹಲವು ಲೆಕ್ಕಾಚಾರಗಳನ್ನು ಹಾಕಬೇಕಾಗುತ್ತದೆ. ಈ ಕೆಲಸವನ್ನು ಮಾಡುವುದೇ ಮೈಕ್ರೋಪ್ರೊಸೆಸರ್ ಅಥವಾ ಚಿಪ್‌ಗಳ ಕೆಲಸ. ಜೊತೆಗೆ ರಾಕೆಟ್‌ನ ಭಾರೀ ಉಷ್ಣಾಂಶವನ್ನು ತಡೆಯುವ ಶಕ್ತಿಯನ್ನು ಇದು ಹೊಂದಿರಬೇಕು. ಈ ಬೇಡಿಕೆಗೆ ಅನುಗುಣವಾಗಿ ಮೈನಸ್‌ 55 ಡಿ.ಸೆ. ನಿಂದ ಹಿಡಿದು 125 ಡಿ.ಸೆ. ಉಷ್ಣಾಂಶ ತಡೆಯುವ ಶಕ್ತಿಯೊಂದಿಗೆ ವಿಕ್ರಂ ಚಿಪ್‌ ಅಭಿವೃದ್ಧಿಪಡಿಸಲಾಗಿದೆ.

ರಾಕೆಟ್‌ ಮಾತ್ರವಲ್ಲದೇ, ರಕ್ಷಣೆ, ವೈಮಾನಿಕ ಕ್ಷೇತ್ರ, ಆಟೋಮೊಬೈಲ್‌, ಇಂಧನ ಕ್ಷೇತ್ರಗಳಲ್ಲಿಯೂ ಈ ಚಿಪ್‌ ಉಪಯೋಗಕ್ಕೆ ಬರಲಿದ್ದು, ಪ್ರಮುಖ ಪಾತ್ರ ವಹಿಸಲಿದೆ.

PREV

Recommended Stories

ಈ ಬಾರಿ ಜನಗಣತಿಯಲ್ಲಿ ಮನೆಗಳಿಗೆ ಜಿಯೋಟ್ಯಾಗ್‌ ನೀಡಲು ಕೇಂದ್ರ ಸಿದ್ಧತೆ
ಅತ್ಯಾಚಾರ ಆರೋಪಿ ಆಪ್‌ಶಾಸಕ ಸಿನಿಮೀಯ ಎಸ್ಕೇಪ್‌!