ಢಾಕಾ: ನಿಲ್ಲದ ಬಾಂಗ್ಲಾ ಹಿಂಸಾಚಾರ - 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದ ದಾಂಧಲೆ

KannadaprabhaNewsNetwork | Updated : Feb 08 2025, 06:54 AM IST

ಸಾರಾಂಶ

ದೇಶಪರಿತ್ಯಕ್ತ ಪ್ರಧಾನಿ ಶೇಖ್‌ ಹಸೀನಾ ಅ‍ವರ ಅವಾಮಿ ಲೀಗ್‌ ಪಕ್ಷದ ಮುಖಂಡರ ಆಸ್ತಿ, ಸ್ಮಾರಕಗಳ ಮೇಲೆ ಬುಧವಾರ ರಾತ್ರಿ ಆರಂಭವಾದ ದಾಳಿ ಬಾಂಗ್ಲಾದೇಶದಲ್ಲಿ ಶುಕ್ರವಾರವೂ ಮುಂದುವರಿದಿದೆ

ಢಾಕಾ: ದೇಶಪರಿತ್ಯಕ್ತ ಪ್ರಧಾನಿ ಶೇಖ್‌ ಹಸೀನಾ ಅ‍ವರ ಅವಾಮಿ ಲೀಗ್‌ ಪಕ್ಷದ ಮುಖಂಡರ ಆಸ್ತಿ, ಸ್ಮಾರಕಗಳ ಮೇಲೆ ಬುಧವಾರ ರಾತ್ರಿ ಆರಂಭವಾದ ದಾಳಿ ಬಾಂಗ್ಲಾದೇಶದಲ್ಲಿ ಶುಕ್ರವಾರವೂ ಮುಂದುವರಿದಿದೆ.

ಢಾಕಾ ಮತ್ತು ಚಿತ್ತಗಾಂಗ್‌ ನಲ್ಲಿ ಶುರುವಾದ ಈ ದಾಳಿ ಇದೀಗ ದೇಶದ 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ. ಕೋರ್ಟ್‌, ಆಸ್ಪತ್ರೆ, ರಸ್ತೆ, ಸರ್ಕಾರಿ ಕಚೇರಿಗಳ ಮುಂದಿರುವ ಬಾಂಗ್ಲಾ ಸಂಸ್ಥಾಪಕ ಶೇಖ್‌ ಮುಜಿಬಿರ್‌ ರೆಹಮಾನ್‌ ಅವರ ಹತ್ತಾರು ಪುತ್ಥಳಿಗಳನ್ನು ಪ್ರತಿಭಟನಾಕಾರರು ನಾಶ ಮಾಡಿದ್ದರೆ, ಕೆಲವೆಡೆ ವಿರೂಪಗೊಳಿಸಿದ್ದಾರೆ. ಇದರೊಂದಿಗೆ ಬಾಂಗ್ಲಾದೇಶದಲ್ಲಿ ಮತ್ತೆ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾದಂತಾಗಿದೆ.

ಶೇಖ್‌ ಹಸೀನಾ ಅವರು ಬುಧವಾರ ರಾತ್ರಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಲು ಮುಂದಾಗಿದ್ದನ್ನು ವಿರೋಧಿಸಿ ಆರಂಭವಾದ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಢಾಕಾದ ಬನಾನಿಯಲ್ಲಿರುವ ಅವಾಮಿ ಲೀಗ್‌ನ ಪ್ರಮುಖ ನಾಯಕ ಶೇಖ್‌ ಸೇಲಿಂ ಮನೆ ಮೇಲೆ ರಾತ್ರಿ 1.30ರ ವೇಳೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಮನೆ ಮುಂದೆ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಾಕಿದರು.

ರಾಜ್‌ಶಾಹಿಯಲ್ಲಿ ಪ್ರತಿಭಟನಾಕಾರರ ಗುಂಪೊಂದು ಮಾಜಿ ವಿದೇಶಾಂಗ ಖಾತೆ ರಾಜ್ಯ ಸಚಿವ ಶಾಹ್‌ರಿಯಾರ್‌ ಆಲಂ ಅವರ ಮನೆ ಮೇಲೂ ದಾಳಿ ನಡೆಸಿದೆ. ಬೈಕ್‌ಗಳಲ್ಲಿ ತೆರಳಿದ 100ಕ್ಕೂ ಹೆಚ್ಚು ಯುವಕರ ಗುಂಪು ಮಧ್ಯಾಹ್ನದ ವೇಳೆಗೆ ಮನೆಗೆ ಬೆಂಕಿ ಹಚ್ಚಿದೆ.

ಬುಲ್ಡೋಜರ್‌ ಸಹಿತ ಅವಾಮಿ ಲೀಗ್‌ ನಾಯಕರ ಮನೆ, ಕಚೇರಿಗಳಿಗೆ ತೆರಳುತ್ತಿರುವ ಪ್ರತಿಭಟನಾಕಾರರು ಯಾವುದೇ ಅಡೆ-ತಡೆಯಿಲ್ಲದೆ ದಾಂಧಲೆ ನಡೆಸುತ್ತಿದ್ದಾರೆ.

ದೇಶಾದ್ಯಂತ ನಡೆಯುತ್ತಿರುವ ಇಂಥ ಹಿಂಸಾಚಾರವನ್ನು ಸೂಕ್ತವಾಗಿ ತಡೆಯಲಾಗುವುದು. ಕೆಲ ವ್ಯಕ್ತಿಗಳು ಮತ್ತು ಗುಂಪುಗಳು ದಾಂಧಲೆ ಹಾಗೂ ದೇಶಾದ್ಯಂತ ಸರ್ಕಾರಿ ಸಂಸ್ಥೆಗಳಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದೇಶದ ನಾಗರಿಕರು ಮತ್ತು ಅ‍ರ ಆಸ್ತಿ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್‌ ಯೂಸುಫ್‌ ಹೇಳಿದ್ದಾರೆ.

Share this article