ಜಮ್ಮು: ಇಲ್ಲಿಯ ಉಧಮ್‌ಪುರ ಜಿಲ್ಲೆಯಲ್ಲಿ ಗುರುವಾರ ಸೇನಾ ಬಂಕರ್ ವಾಹನವೊಂದು ರಸ್ತೆಯಲ್ಲಿ ಮಗುಚಿ ಕಾಲುವೆಗೆ ಉರುಳಿ ಅದರಲ್ಲಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಸಂತ್ ಗಢದಲ್ಲಿ ಕಾರ್ಯಾರಣೆಯೊಂದನ್ನು ಮುಗಿಸಿ ಸೇನಾ ಬಂಕರ್ ವಾಹನದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಹಿಂತಿರುಗುವ ವೇಳೆ ಕಡ್ವಾ ಪ್ರದೇಶದಲ್ಲಿ ಬೆಳಿಗ್ಗೆ ಸುಮಾರು 10.30ಕ್ಕೆ ಘಟನೆ ನಡೆದಿದೆ. ಸೇನಾ ವಾಹನದಲ್ಲಿ ಒಟ್ಟು 23 ಸಿಬ್ಬಂದಿ ಇದ್ದರು. ದುರಂತ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಧ್ಯಪ್ರದೇಶದಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಪತ್ತೆ
ಜಬಲ್ಪುರ: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ನಡುವೆಯೇ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸಿಹೋರಾ ತಹಸೀಲ್‌ನಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾಗಿದೆ. ಮಹಾಂಗ್ವಾ ಕೆವಾಲ್ರಿ ಪ್ರದೇಶದಲ್ಲಿ ಭೂವಿಜ್ಞಾನಿಗಳು ಮಣ್ಣಿನ ಪರೀಕ್ಷೆ ನಡೆಸಿ ಸಂಶೋಧನೆಗೆ ಒಳಪಡಿಸಿದಾಗ ನಿಕ್ಷೇಪಗಳು ಪತ್ತೆಯಾಗಿದೆ. ಇದು ಭಾರತದ ಖನಿಜ ಪರಿಶೋಧನಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಬಿಂಬಿಸಲಾಗಿದೆ. ಮೂಲಗಳ ಪ್ರಕಾರ ಸುಮಾರು 100 ಹೆಕ್ಟೇರ್‌ಗಳಲ್ಲಿ ಈ ನಿಕ್ಷೇಪ ಹರಡಿಕೊಂಡಿದೆ. ಹೀಗಾಗಿ ಇದರಲ್ಲಿ ಲಕ್ಷ ಟನ್‌ಗಳಷ್ಟು ಚಿನ್ನದ ಅದಿರು ಇರಬಹುದು ಎಂದು ಅಂದಾಜಿಸಲಾಗಿದೆ.
5ನೇ ವರ್ಷವೂ ಅಂಬಾನಿ ವೇತನ ಇಲ್ಲ: ಡಿವಿಡೆಂಡ್ ಆದಾಯ ₹3600 ಕೋಟಿ
ನವದೆಹಲಿ: ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಸತತ 5ನೇ ವರ್ಷ ಯಾವುದೇ ವೇತನ ಪಡೆಯದೇ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಷೇರುಗಳ ಮೇಲಿನ ಲಾಭಾಂಶದ ಮೂಲಕವೇ ಅಂಬಾನಿಗೆ ವಾರ್ಷಿಕ 3600 ಕೋಟಿ ರು. ಸಿಕ್ಕಿದೆ. 2008-09ರಿಂದ ವಾರ್ಷಿಕ 15 ಕೋಟಿ ರು. ವೇತನ ಪಡೆಯುತ್ತಿದ್ದ ಮುಕೇಶ್ ಅಂಬಾನಿ, ಕೋವಿಡ್ ಬಳಿಕ ವೇತನ ಸ್ವೀಕಾರ ಕೈಬಿಟ್ಟಿದ್ದರು. ಆದರೆ ಮುಕೇಶ್, ರಿಲಯನ್ಸ್‌ನಲ್ಲಿ ನೇರವಾಗಿ 1.61 ಕೋಟಿ ಮತ್ತು ಅವರು ಪ್ರವರ್ತಕರಾಗಿರುವ ಸಂಸ್ಥೆಗಳ ಮೂಲಕ 664.5 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಈ ಷೇರುಗಳಿಗೆ ಕಳೆದ ವರ್ಷ ಕಂಪನಿ ನೀಡಿದ ಲಾಭಾಂಶವೇ 3,655 ಕೋಟಿ ರು.ಗಳಷ್ಟಿದೆ.
ಒಡಿಶಾದ ಸರ್ಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಕಡ್ಡಾಯ: ಆದೇಶ
ಭುವನೇಶ್ವರ: ಒಡಿಶಾದ ಬಿಜೆಪಿ ಸರ್ಕಾರವು ರಾಜ್ಯ ಸರ್ಕಾರದ ಎಲ್ಲಾ ಕಚೇರಿ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಕೇಸರಿ ಬಣ್ಣವನ್ನು ಬಳಿಯುವಂತೆ ಆದೇಶ ಹೊರಡಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಕಾಮಗಾರಿ ಇಲಾಖೆ, ‘ಹೊಸದಾಗಿ ನಿರ್ಮಿಸುವ ಸರ್ಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಮತ್ತು ಬಾರ್ಡರ್‌ಗಳಿಗೆ ಮಣ್ಣಿನ ಕಂದು ಬಣ್ಣವನ್ನು ಬಳಿಯಬೇಕು. ಈಗಿರುವ ಕಚೇರಿಗಳಿಗೂ ಸಹ ಕೇಸರಿಗೆ ತಿರುಗಿಸಬೇಕು ಎಂದು ಸೂಚಿಸಿದೆ. ಬಿಜೆಪಿ ಸರ್ಕಾರದ ಈ ನಡೆಗೆ ವಿಪಕ್ಷ ಬಿಜೆಡಿ ಮತ್ತು ಕಾಂಗ್ರೆಸ್ ಆಕ್ರೋಶ ಹೊರಹಾಕಿದ್ದು, ರಾಜ್ಯದಲ್ಲಿ ಮಹಿಳೆಯರು ಸುರಕ್ಷತೆ ಹಳ್ಳಹಿಡಿದಿರುವಾಗಿ ರಾಜ್ಯ ಸರ್ಕಾರ ಬಣ್ಣ ಬಳಿಯಲು ಮುಂದಾಗಿದೆ ಎಂದು ಕಿಡಿಕಾರಿವೆ.
ಭಾರತದ ಮೇಲೆ ಟ್ರಂಪ್ ತೆರಿಗೆ ಬಳಿಕ ಅಮೆರಿಕಕ್ಕೆ ಪಾಕ್‌ನ ಅಸೀಂ ಪ್ರವಾಸ
ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರಿ ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚಿರುವ ಅಮೆರಿಕಕ್ಕೆ ಇದೇ ತಿಂಗಳಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ಭೇಟಿ ನೀಡಲಿದ್ದಾರೆ. ಇದು 2 ತಿಂಗಳಲ್ಲಿ 2ನೇ ಭೇಟಿಯಾಗಲಿದೆ. ಅಮೆರಿಕದ ಕೇಂದ್ರ ಕಮಾಂಡ್‌ನ ಕಮಾಂಡರ್ ಆಗಿರುವ ಜ। ಮೈಕಲ್ ಕುರಿಲಾ ಅವರ ನಿವೃತ್ತಿ ದಿನದ ಸಮಾರಂಭದಲ್ಲಿ ಮುನೀರ್ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಇದೇ ಕುರಿಲಾ ಅವರು ಪಾಕಿಸ್ತಾನವನ್ನು ಉಗ್ರವಾದದ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ‘ಅಸಾಧಾರಣ ಪಾಲುದಾರ’ ಎಂದು ಕೊಂಡಾಡಿದ್ದರು. ಜೂನ್‌ನಲ್ಲಿ ಆಪರೇಷನ್ ಸಿಂದೂರದ ಬಳಿಕ ಮುನೀರ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.