ನ್ಯೂಯಾರ್ಕ್: ಭಾರತ- ಪಾಕಿಸ್ತಾನದ್ದು ಸೇರಿ ವಿಶ್ವದ 8 ಯುದ್ಧಗಳನ್ನು ನಿಲ್ಲಿಸಿದರೂ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿಲ್ಲ ಎಂದು ನಿರಂತರವಾಗಿ ಕೊರಗುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊನೆಗೂ ನೊಬೆಲ್ ‘ಸಿಕ್ಕಿದೆ’. ಆದರೆ ಇದು ನಾರ್ವೆಯ ನೊಬೆಲ್ ಪ್ರಶಸ್ತಿ ಸಮಿತಿ ಕೊಟ್ಟಿದ್ದಲ್ಲ. ಆ ಸಮಿತಿಯಿಂದ ಪ್ರಶಸ್ತಿ ಪಡೆದುಕೊಂಡವರು ಕೊಟ್ಟಿದ್ದು!
ಪ್ರಜಾಪ್ರಭುತ್ವ ಪರವಾದ ಹೋರಾಟಕ್ಕಾಗಿ 2025ನೇ ಸಾಲಿನಲ್ಲಿ ತಮಗೆ ದೊರೆತ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನಿಜುವೆಲಾದ ಪ್ರತಿಪಕ್ಷ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಸ್ತಾಂತರಿಸಿದ್ದಾರೆ.
ಗುರುವಾರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿದ್ದ ಮಚಾಡೋ, ಅಮೆರಿಕ ಅಧ್ಯಕ್ಷಗೆ ಪ್ರಶಸ್ತಿ ಫಲಕ ಹಸ್ತಾಂತರ ಮಾಡಿದ್ದಾರೆ. ವೆನಿಜುವೆಲಾದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ರೂಪದಲ್ಲಿ ಈ ಪ್ರಶಸ್ತಿ ಹಸ್ತಾಂತರಿಸಿದ್ದಾಗಿ ಮಚಾಡೋ ತಿಳಿಸಿದ್ದಾರೆ. ಮತ್ತೊಂದೆಡೆ ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಟ್ರಂಪ್, ‘ನನ್ನ ಕೆಲಸಕ್ಕಾಗಿ ಮಚಾಡೋ ತಮಗೆ ಸಿಕ್ಕ ಪ್ರಶಸ್ತಿಯನ್ನು ನನಗೆ ಹಸ್ತಾಂತರಿಸಿದ್ದಾರೆ. ಇದೊಂದು ಪರಸ್ಪರ ಗೌರವದ ಅದ್ಭುತ ಸಂಕೇತ. ಥ್ಯಾಂಕ್ಯೂ ಮರಿಯಾ’ ಎಂದು ಬರೆದುಕೊಂಡಿದ್ದಾರೆ.
ವೆನಿಜುವೆಲಾ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಮಚಾಡೋ ಅವರು ಸ್ಪರ್ಧಿಸದಂತೆ ತಡೆದು ಅಧ್ಯಕ್ಷ ಹುದ್ದೆಗೇರಿದ್ದ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಸೇನೆ ಸೆರೆಹಿಡಿದು, ತನ್ನ ದೇಶಕ್ಕೆ ಕರೆದೊಯ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಈ ನಡುವೆ ಪ್ರಶಸ್ತಿಯನ್ನು ತಮ್ಮ ಬಳಿ ಇಟ್ಟುಕೊಳ್ಳುವ ಆಸಕ್ತಿಯನ್ನು ಟ್ರಂಪ್ ಹೊಂದಿದ್ದಾರೆ ಎಂದು ಶ್ವೇತಭವನ ಹೇಳಿದೆ. 2025ರಲ್ಲಿ ನಾನು ಭಾರತ- ಪಾಕ್ ಸೇರಿ 8 ಯುದ್ಧ ನಿಲ್ಲಿಸಿದೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ ನನಗಿಂತ ಯಾರೂ ಹೆಚ್ಚು ಅರ್ಹರಿಲ್ಲ ಎಂದು ಹಲವು ಬಾರಿ ಟ್ರಂಪ್ ಹೇಳಿಕೊಂಡಿದ್ದರು.
ನೊಬೆಲ್ ಪ್ರಶಸ್ತಿಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವುದಾಗಲಿ, ಹಂಚಿಕೊಳ್ಳುವುದಾಗಲಿ ಸಾಧ್ಯವಿಲ್ಲ. ನೊಬೆಲ್ ಗೌರವವು ಯಾವತ್ತಿಗೂ ಮೂಲ ವ್ಯಕ್ತಿಯ ಜತೆಗೆ ಶಾಶ್ವತವಾಗಿ ಇರಲಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ಪ್ರತಿಕ್ರಿಯಿಸಿದೆ. ನೊಬೆಲ್ ಪ್ರಶಸ್ತಿ ಫಲಕವನ್ನು ಇನ್ನೊಬ್ಬರಿಗೆ ಹಸ್ತಾಂತರಿಸಬಹುದು. ಈ ಹಿಂದೆ ನೊಬೆಲ್ ಪ್ರಶಸ್ತಿ ಫಲಕವನ್ನು ಹರಾಜು ಹಾಕಿದ್ದೂ ಇದೆ ಎಂದು ರಷ್ಯಾ ಪತ್ರಕರ್ತೆ ಡಿಮಿಟ್ರಿ ಮುರಾಟೊವ್ ಅವರ ಪ್ರಕರಣವನ್ನು ಉಲ್ಲೇಖಿಸಿ ಹೇಳಿದೆ.