ಇಹಲೋಕ ತ್ಯಜಿಸಿದ ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ

KannadaprabhaNewsNetwork |  
Published : Dec 11, 2024, 12:46 AM ISTUpdated : Dec 11, 2024, 07:52 AM IST
ಕೃಷ್ಣ | Kannada Prabha

ಸಾರಾಂಶ

ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಮಂಗಳವಾರ ಬೆಳಗಿನ ಜಾವ 2.30ರ ಸುಮಾರಿಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

 ಬೆಂಗಳೂರು : ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಮಂಗಳವಾರ ಬೆಳಗಿನ ಜಾವ 2.30ರ ಸುಮಾರಿಗೆ ಸದಾಶಿವನಗರದ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ.

ಅವರಿಗೆ 93 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ತಿಂಗಳುಗಳಿಂದ ಶ್ವಾಸಕೋಶ ಸೋಂಕು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದ ಬಳಿಕ ಮನೆಗೆ ಮರಳಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದ ಅವರು ವಯೋಸಹಜವಾಗಿ ಕೊನೆಯುಸಿರೆಳೆದರು. ಇವರು ಪತ್ನಿ ಪ್ರೇಮಾ, ಪುತ್ರಿಯರಾದ ಶಾಂಭವಿ ಮತ್ತು ಮಾಳವಿಕ, ಮೊಮ್ಮಕ್ಕಳು, ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯವರಾದ ಕೃಷ್ಣ 1932ರ ಮೇ 1ರಂದು ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮ ದಂಪತಿಗೆ ಜನಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೇರಿದ ಅವರು ಸಚಿವ, ವಿಧಾನಸಭೆಯ ಸ್ಪೀಕರ್‌, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಬಳಿಕ ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರದ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಣ್ಯರು ಮನೆಗೆ ತೆರಳಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬುಧವಾರ ಬೆಳಗ್ಗೆ 8ರವರೆಗೆ ಸದಾಶಿವನಗರದ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಪಾರ್ಥೀವ ಶರೀರವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಬುಧವಾರ ಸಂಜೆ 4ಕ್ಕೆ ಸೋಮನಹಳ್ಳಿಯ ಅವರ ತೋಟದ ಮನೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ನಾಯಕರು, ಮುಖಂಡರು, ಅಧಿಕಾರಿಗಳು, ಹಾಲಿ, ಮಾಜಿ ಸಚಿವರು, ಸಂಸದರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು, ಸಂಬಂಧಿಕರು, ಸ್ನೇಹಿತರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ಭಾವುಕರಾದ ಡಿಕೆಶಿ:

ಬೆಳಗಾವಿಯಿಂದ ನಗರಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷ್ಣ ಪಾರ್ಥಿವ ಶರೀರದ ದರ್ಶನ ಪಡೆದು ಭಾವುಕರಾಗಿ ಕಣ್ಣೀರಿಟ್ಟರು. ನನ್ನನ್ನು ಮಗನಾಗಿ ಕಂಡ ಕೃಷ್ಣ ಅವರು, ರಾಜಕೀಯ ಶಕ್ತಿಯನ್ನು ನೀಡಿದರು. ಅವರನ್ನು ಕಳೆದುಕೊಂಡ ನನಗೆ ವೈಯಕ್ತಿಕವಾಗಿ ಅತೀವ ನೋವಾಗಿದೆ ಎಂದರು.ರಾಜ್ಯಪಾಲರಿಂದ ಅಂತಿಮ ದರ್ಶನ

ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರು, ಎಸ್.ಎಂ.ಕೃಷ್ಣ ನಿಧನದಿಂದ ತೀವ್ರ ದುಃಖವಾಗಿದೆ. ಕರ್ನಾಟಕ ರಾಜ್ಯ, ದೇಶದ ಅಭಿವೃದ್ಧಿಯಲ್ಲಿ ಅನೇಕ ಕೆಲಸಗಳನ್ನು ಕೈಗೊಂಡು ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕಳೆದುಕೊಂಡಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

PREV

Recommended Stories

ಜಾತಿಗಣತಿ ‘ಧರ್ಮಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ
ಮಾಲೂರು ಶಾಸಕ ನಂಜೇಗೌಡಆಯ್ಕೆ ರದ್ದತಿಗೆ ಹೈಕೋರ್ಟ್‌ ಆದೇಶ